ಕ್ರಿಪ್ಟೋ ಕರೆನ್ಸಿ ಮೇಲೂ ತೆರಿಗೆ ವಿಧಿಸಲಿದೆ ಭಾರತ ಸರಕಾರ! ಇಲ್ಲಿದೆ ಮಾಹಿತಿ!

ಇದೀಗ ಕ್ರಿಪ್ಟೋ ಮಾರುಕಟ್ಟೆಯ ಬೆಳವಣಿಗೆಯನ್ನು ಮನಗಂಡ ಕೇಂದ್ರ ಸರಕಾರ ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಹಣಕಾಸು ಸಚಿವಾಲಯದಿಂದ ಹೊಸ ಸಮಿತಿ ರಚನೆಯಾಗಿದೆ ಎಂದು ವರದಿಯಾಗಿದೆ.

ಕ್ರಿಪ್ಟೋ ಕರೆನ್ಸಿ ಮೇಲೂ ತೆರಿಗೆ ವಿಧಿಸಲಿದೆ ಭಾರತ ಸರಕಾರ! ಇಲ್ಲಿದೆ ಮಾಹಿತಿ!
Linkup
ಹೊಸದಿಲ್ಲಿ: ಕ್ರಿಪ್ಟೋ ಕರೆನ್ಸಿ ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿ ಡಿಜಿಟಲ್‌ ಕರೆನ್ಸಿಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಹಾಗೆಂದ ಮಾತ್ರಕ್ಕೆ ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧವನ್ನೂ ಹೇರಿಲ್ಲ. ಇದೀಗ ಕ್ರಿಪ್ಟೋ ಮಾರುಕಟ್ಟೆಯ ಬೆಳವಣಿಗೆಯನ್ನು ಮನಗಂಡ ಕೇಂದ್ರ ಸರಕಾರ ಕ್ರಿಪ್ಟೋ ಕರೆನ್ಸಿ ವಹಿವಾಟಿನ ಮೇಲೆ ವಿಧಿಸಲು ಸಿದ್ಧತೆ ನಡೆಸಿದೆ. ಹೌದು, ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮೇಲೆ ಶೀಘ್ರದಲ್ಲೇ ತೆರಿಗೆ ವಿಧಿಸಿದರೆ ಅದರಲ್ಲಿ ಅಚ್ಚರಿ ಏನಿಲ್ಲ. ಏಕೆಂದರೆ ಕ್ರಿಪ್ಟೋ ಟ್ರೇಡಿಂಗ್‌ನಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸಬಹುದೇ ಎಂಬುದರ ಕುರಿತು ಅಧ್ಯಯನ ಮಾಡಲು ಹಣಕಾಸು ಸಚಿವಾಲಯವು ಹೊಸ ಸಮಿತಿ ರಚಿಸಿದೆ ಎಂದು ವರದಿಯಾಗಿದೆ. ಮುಂಬರುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ಮಸೂದೆ ಮಂಡನೆಯಾಗುವ ಭಾರೀ ನಿರೀಕ್ಷೆಯೊಂದಿಗೆ ದೇಶದ ಜನ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ವಿಧಿಸುವ ಕುರಿತು ಸರಕಾರ ಸಿದ್ಧತೆ ನಡೆಸುತ್ತಿರುವುದು ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಮತ್ತಷ್ಟು ಬಲ ನೀಡಿದೆ. ಆದರೆ, ಇಂದಿಗೂ ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ದೇಶದಲ್ಲಿ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಹಣಕಾಸು ಸಚಿವಾಲಯವು ರಚಿಸಿರುವ ಕ್ರಿಪ್ಟೋ ಕರೆನ್ಸಿ ಮೇಲಿನ ಸಮಿತಿಗೆ ವರದಿ ಸಲ್ಲಿಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರಕಾರ ನಿಗದಿಪಡಿಸಿರುವ ಅವಧಿಯೊಳಗೆ ಸಮಿತಿಯು ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಕ್ರಿಪ್ಟೋ ಕರೆನ್ಸಿ ವಹಿವಾಟಿನಿಂದ ಗಳಿಸುವ ಆದಾಯವನ್ನು ಬಂಡವಾಳ ಲಾಭ ಎಂದು ಪರಿಗಣಿಸಿ ತೆರಿಗೆ ವಿಧಿಸಬಹುದೇ? ಅಥವಾ ಕ್ರಿಪ್ಟೋ ಕರೆನ್ಸಿಗೆಂದೇ ಹೊಸದಾಗಿ ತೆರಿಗೆ ವಿಭಾಗ ರಚಿಸಬೇಕಾಗುತ್ತದೆಯೇ ಎಂದು ಸಮಿತಿಯು ತಿಳಿಸಲಿದೆ. ಈ ಸಮಿತಿ ನೀಡುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಆಧಾರಿತ ಆದಾಯದ ಮೇಲಿನ ತೆರಿಗೆಯ ವಿಶ್ಲೇಷಣೆಯನ್ನು ಕ್ರಿಪ್ಟೋ ಕರೆನ್ಸಿ ಬಿಲ್‌ನ ಅಂತಿಮ ಕರಡಿನಲ್ಲಿ ಸೇರಿಸಲಾಗುವುದು ಎಂದು ವರದಿಯಾಗಿದೆ. ಇತ್ತೀಚಿನ ತಿಂಗಳಲ್ಲಿ, ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆ ವಿಸ್ತರಣೆಯಾಗುತ್ತಲೇ ಇದೆ. ಭಾರತ, ಪಾಕಿಸ್ತಾನ, ಉಕ್ರೇನ್ ಮತ್ತು ವಿಯೆಟ್ನಾಂನಲ್ಲಿ, ಕ್ರಿಪ್ಟೋ ಕರೆನ್ಸಿ ಅಳವಡಿಕೆಯ ದರ ಶೇ. 880ರಷ್ಟು ಹೆಚ್ಚಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಸಮೀಕ್ಷಾ ವರದಿ ತಿಳಿಸಿದೆ. ವರದಿಗಳ ಪ್ರಕಾರ, ಸುಮಾರು ಏಳು ಮಿಲಿಯನ್ (70 ಲಕ್ಷ ಭಾರತೀಯರು) ಭಾರತೀಯರು ಕ್ರಿಪ್ಟೋ ಕರೆನ್ಸಿಗಳಲ್ಲಿ $ 1 ಬಿಲಿಯನ್ (ಅಂದಾಜು ರೂ. 7,380 ಕೋಟಿ ರೂ.) ಮೊತ್ತದ ಹೂಡಿಕೆ ಮಾಡಿದ್ದಾರೆ. ಬೆಳೆಯುತ್ತಿರುವ ಕ್ರಿಪ್ಟೋ ಸಂಸ್ಕೃತಿಯ ನಡುವೆ, ಭಾರತೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ರಿಪ್ಟೋ ಕರೆನ್ಸಿ ಮಸೂದೆಯ ಕರಡು ರಚನೆಯನ್ನು ಕಡೆ ಗಣಿಸುತ್ತಿದ್ದಾರೆ. ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಮೊದಲ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು 2021 ರ ಅಂತ್ಯದ ವೇಳೆಗೆ ನಿಯಂತ್ರಿತ "ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)" ಯಾಗಿ ಪ್ರಾರಂಭಿಸಲು ಕಾರ್ಯ ಪ್ರವೃತ್ತವಾಗಿದೆ.