ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲ ಕೋವಿಡ್‌ ವೇಗ..! ಯುವಕರೂ ಈಗ ಸುಲಭದ ತುತ್ತು..!

ಬೆಂಗಳೂರಿನಲ್ಲಿ ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೆ ತುತ್ತಾಗಿದ್ದರೆ, ಎರಡನೇ ಅಲೆಯಲ್ಲಿ ವಯೋಮಾನದ ಭೇದಭಾವವಿಲ್ಲದೆ ಸಾವಿಗೆ ತುತ್ತಾಗುತ್ತಿರುವುದು ನಿಜಕ್ಕೂ ಆಘಾತ ತಂದಿದೆ.

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲ ಕೋವಿಡ್‌ ವೇಗ..! ಯುವಕರೂ ಈಗ ಸುಲಭದ ತುತ್ತು..!
Linkup
: ಕೋವಿಡ್‌ ಸೋಂಕಿನ ವೇಗದೊಂದಿಗೆ ಸಾವಿನ ವೇಗ ಕೂಡ ಹೆಚ್ಚಾಗಿದೆ. ಲಾಕ್‌ಡೌನ್‌ ಇದ್ದರೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಾಗಲಿ, ಸಾವಿನ ಸಂಖ್ಯೆಯಾಗಲಿ ಕಡಿಮೆಯಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಮೊದಲ ಅಲೆಗಿಂತ ದುಪ್ಪಟ್ಟು ವೇಗದಲ್ಲಿ ಹಬ್ಬುತ್ತಿರುವ ಸುಲಭವಾಗಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅದರಲ್ಲೂ ರಾಜಧಾನಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಎರಡರಲ್ಲೂ ಅಗ್ರಸ್ಥಾನದಲ್ಲಿದ್ದು, ಸದ್ಯಕ್ಕೆ ತಹಬದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿ ದಿನ ರಾಜಧಾನಿಯೊಂದರಲ್ಲಿಯೇ ಅರ್ಧಕ್ಕಿಂತ ಹೆಚ್ಚಿನ ಸೋಂಕಿತ ಮತ್ತು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಏ.27 ರಿಂದ ಮೇ 5ರ ಅವಧಿಯಲ್ಲಿ ರಾಜ್ಯದಲ್ಲಿ 3,72,101 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ರಾಜಧಾನಿಯ ಪಾಲು 1,95,179. ಅಂದರೆ ಶೇಕಡಾ ಅರ್ಧಕ್ಕಿಂತ ಹೆಚ್ಚಿನ ಸೋಂಕಿತರು ಬೆಂಗಳೂರಿನವರಾಗಿದ್ದಾರೆ. ಸಾವಿನಲ್ಲೂ ಕೂಡ ಬೆಂಗಳೂರೇ ಮುಂದಿದೆ ಏ. 27ರಿಂದ ಮೇ 5ರ ನಡುವಣ ರಾಜ್ಯದಲ್ಲಿ 2,260 ಜನರು ಮೃತರಾಗಿದ್ದು, ಬೆಂಗಳೂರು ಒಂದರಲ್ಲಿಯೇ 1104 ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಪ್ರತಿದಿನ ಶತಕ: ಬೆಂಗಳೂರಿನಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ. ಮೇ 2ರಂದು 64 ಜನರು ಮೃತಪಟ್ಟಿದ್ದು, ಇತ್ತೀಚೆಗೆ ರಾಜಧಾನಿಯಲ್ಲಿ ದಿನವೊಂದರಲ್ಲಿ ವರದಿಯಾದ ಅತ್ಯಂತ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಏ. 27 ರಂದು 17,550 ಸೋಂಕಿತ ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿದ್ದವು. ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೇ 5ರ ವೇಳೆಗೆ ಸೋಂಕಿತರ ಸಂಖ್ಯೆ 23,106ಕ್ಕೆ ತಲುಪಿದೆ. ಈ ನಡುವೆ ಏ. 30ರಂದು ರಾಜ್ಯದಲ್ಲಿ 48,296 ಪ್ರಕರಣಗಳು ವರದಿಯಾಗಿದ್ದರೆ, ರಾಜಧಾನಿಯೊಂದರಲ್ಲಿಯೇ 26,756 ಪ್ರಕರಣಗಳು ವರದಿಯಾಗಿದ್ದು, ಇದು ರಾಜಧಾನಿಯಲ್ಲಿ ದಿನವೊಂದರಲ್ಲಿ ದಾಖಲಾದ ಹೆಚ್ಚಿನ ಸೋಂಕಿತರ ಸಂಖ್ಯೆಯಾಗಿದೆ. ಸಾವಿಗಿಲ್ಲ ವಯೋಮಿತಿ: ಸೋಂಕಿನಿಂದ ಮೃತರಾಗುತ್ತಿರುವ ವಯೋಮಿತಿ ಕೂಡ ಕಡಿಮೆಯಾಗುತ್ತಿರುವುದು ಇನ್ನೊಂದು ಆತಂಕಕ್ಕೆ ಕಾರಣವಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೆ ತುತ್ತಾಗಿದ್ದರೆ, ಎರಡನೇ ಅಲೆಯಲ್ಲಿ ವಯೋಮಾನದ ಭೇದಭಾವವಿಲ್ಲದೆ ಸಾವಿಗೆ ತುತ್ತಾಗುತ್ತಿರುವುದು ನಿಜಕ್ಕೂ ಆಘಾತ ತಂದಿದೆ. ಕಳೆದ ಒಂದು ವಾರದ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ವಯೋಮಿತಿ ನೋಡಿದರೆ ಅದು 18 ವರ್ಷದ ತನಕ ಇಳಿದಿದೆ. ಏ. 30ರಂದು ಬೆಂಗಳೂರು ನಗರದ 18 ವರ್ಷದ ಯುವಕನೊಬ್ಬ ಉಸಿರಾಟ ಮತ್ತು ಕಫ ಸಮಸ್ಯೆಯಿಂದ ಮೃತಪಟ್ಟ ಘಟನೆ ನಡೆದಿದೆ. ಇದು ರಾಜಧಾನಿಯಲ್ಲಿ ಕಳೆದೊಂದು ವಾರದಲ್ಲಿ ನಡೆದ ಅತಿ ಕಡಿಮೆ ವಯೋಮಾನದ ಸಾವಾಗಿದೆ. ಯುವಕರೇ ಜಾಸ್ತಿ: ಬೆಂಗಳೂರಿನಲ್ಲಿ ಬಹಳಷ್ಟು ಯುವಕರು ರೂಂ ಮತ್ತು ಪಿಜಿಯಲ್ಲಿ ವಾಸಿಸುತ್ತಾರೆ. ಒಂದು ರೂಂನಲ್ಲಿ ಕನಿಷ್ಠ 2ರಿಂದ ಐವರು, ಪಿಜಿಗಳಲ್ಲಿ 20-30 ಜನರು ಒಂದೇ ಕಡೆ ವಾಸಿಸುತ್ತಾರೆ. ಇವರಲ್ಲಾ ಬೇರೆ ಬೇರೆ ಕಡೆ ಸುತ್ತಾಡಿ ಬಂದು ಒಂದೆಡೆ ಸೇರುತ್ತಾರೆ. ಬಹುತೇಕ ರೂಂ ಮತ್ತು ಪಿಜಿಗಳಲ್ಲಿ ಸರಿಯಾದ ಕೋವಿಡ್‌ ನಿಯಮ ಪಾಲನೆ ಮಾಡುವುದಿಲ್ಲ. ಇದರಿಂದ ಯುವಕರಲ್ಲಿ ಹೆಚ್ಚಿನ ಸೋಂಕು ತಗಲುತ್ತಿದೆ. ಅಲ್ಲದೆ ಯುವಕರು ಹೆಚ್ಚಾಗಿ ಕೆಲಸದ ನಿಮಿತ್ತ ಹೊರಗಡೆ ಹೋಗುವುದರಿಂದ ಸೋಂಕಿಗೆ ತುತ್ತಾಗುವವರಲ್ಲಿ ಮೊದಲಿಗರಾಗಿದ್ದಾರೆ. ಯುವಕರು ಯಾಕೆ ಸೋಂಕಿಗೆ ಬಲಿಯಾಗುತ್ತಿದ್ದಾರೆ: ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್‌ ಹೇಳುವ ಪ್ರಕಾರ 'ಯುವಕರ ನಿರ್ಲಕ್ಷ್ಯವೇ ಸೋಂಕಿಗೆ ತುತ್ತಾಗುತ್ತಿರುವುದಕ್ಕೆ ಮೊದಲ ಕಾರಣವಾಗಿದೆ. ನಮಗೆ ಏನೂ ಆಗುವುದಿಲ್ಲ ಎನ್ನುವ ಮನೋಭಾವ ಯುವಕರನ್ನು ಹೆಚ್ಚು ಹೆಚ್ಚು ಸೋಂಕಿಗೆ ತುತ್ತಾಗಿಸುತ್ತಿದೆ. ಯುವಕರು ಗುಂಪು ಸೇರುವುದು ಕೂಡ ಹೆಚ್ಚು. ಆದ್ದರಿಂದ ಅವರಲ್ಲಿ ಸೋಂಕು ಬೇಗನೆ ಹಬ್ಬುತ್ತದೆ. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದವರು ಬದುಕುತ್ತಾರೆ, ಕೆಲವರಿಗೆ ಸೋಂಕು ಬಂದಿರುವುದೇ ಗೊತ್ತಾಗುವುದಿಲ್ಲ. ಕಡಿಮೆ ಇದ್ದವರು ಸಾವಿಗೆ ತುತ್ತಾಗುತ್ತಾರೆ' ಎನ್ನುತ್ತಾರೆ.