ಬೆಂಗಳೂರಿನಲ್ಲಿ ಕೋವಿಡ್ ಆರ್ಭಟ: ಐಸಿಯು, ವೆಂಟಿಲೇಟರ್ ಬೆಡ್ ಇಲ್ಲದೆ ಪರದಾಟ
ಬೆಂಗಳೂರಿನಲ್ಲಿ ಕೋವಿಡ್ ಆರ್ಭಟ: ಐಸಿಯು, ವೆಂಟಿಲೇಟರ್ ಬೆಡ್ ಇಲ್ಲದೆ ಪರದಾಟ
ಸರಕಾರ ಹಾಗೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್‌ಗಳನ್ನೇ ಹೆಚ್ಚಿಸುವ ಕಡೆಗೆ ಆಸಕ್ತಿ ವಹಿಸುತ್ತಿದೆ. ಆದರೆ, ಕೊರೊನಾ ಸೋಂಕು ಉಲ್ಬಣಗೊಂಡರೆ ರೋಗಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವುದು ಅನಿವಾರ್ಯ. ನಗರದ ಸರಕಾರಿ ಹಾಗೂ ಖಾಸಗಿ ಜೀವರಕ್ಷಕ ವ್ಯವಸ್ಥೆ ಇರುವ ಬೆಡ್‌ಗಳ ಸಂಖ್ಯೆ ಕಡಿಮೆಯಿದೆ. ವೈರಸ್‌ನ ಎರಡನೇ ಅಲೆಯ ವೇಗದ ನಡುವೆ ಲಭ್ಯವಿರುವ ಬೆಡ್‌ಗಳು ಲೆಕ್ಕಕ್ಕಿಲ್ಲದಂತಾಗಿದೆ. ಹೀಗಾಗಿ ಸರಕಾರ 2000 ಸಾವಿರ ಐಸಿಯು ಹಾಗೂ ವೆಂಟಿಲೇಟರ್ ಹೊಂದಿರುವ ಹಾಸಿಗೆಗಳನ್ನು ತುರ್ತಾಗಿ ವ್ಯವಸ್ಥೆ ಮಾಡಬೇಕು ಎಂದು ತಜ್ಞ ವೈದ್ಯರುಗಳು ಸಲಹೆ ನೀಡಿದ್ದಾರೆ.
ಮಹಾಬಲೇಶ್ವರ ಕಲ್ಕಣಿ: ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದ್ದು, ಸೋಂಕಿತರಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ನರಳಾಡುತ್ತಿದ್ದಾರೆ. ಎಷ್ಟೋ ಜನರಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಪ್ರಾಣ ಬಿಡುತ್ತಿದ್ದಾರೆ. ಹಾಗೂ ವೆಂಟಿಲೇಟರ್ ಹಾಸಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿರುವ ರಾಜ್ಯ ಸರಕಾರ ಇದುವರೆಗೂ ಹೆಚ್ಚಳ ಮಾಡಿದ್ದು ಕೇವಲ 76 ಮಾತ್ರ!
ಕೋವಿಡ್ ಆರೈಕೆ ಕೇಂದ್ರಗಳ ಹಾಸಿಗೆ ಹೆಚ್ಚಳ ಮಾಡಲು ಸರಕಾರ ಉತ್ಸುಕತೆ ತೋರಿಸುತ್ತಿದೆ. ಇದಕ್ಕಿಂತ ಅಗತ್ಯವಾಗಿ ಬೇಕಿರುವುದು ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಹಾಸಿಗೆಗಳು. ಕೋವಿಡ್ ಸೋಂಕು ಪೀಡಿತರಲ್ಲಿ ತುರ್ತು ಚಿಕಿತ್ಸೆ ಬೇಕಾಗಿರುವುದು ಉಸಿರಾಟ ಸಮಸ್ಯೆ ಇರುವವರಿಗೆ. ಅಂಥ ರೋಗಿಗಳು ಐಸಿಯು ಹಾಸಿಗೆ ಬೇಕೆಂದು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಸದ್ಯ ನಗರದಲ್ಲಿ ಲಭ್ಯ ಇರುವ ಎಲ್ಲಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳು ಪೂರ್ಣ ಭರ್ತಿಯಾಗಿವೆ.
ಜೀವ ಹಾನಿ ಹೆಚ್ಚಬಹುದು: ಕಳೆದ ಒಂದು ವಾರದಿಂದ ಐಸಿಯು ಹಾಸಿಗೆಗಳನ್ನು ಹೆಚ್ಚಳ ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಐಸಿಯು ಬೆಡ್‌ಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಸದ್ಯದ ಸ್ಥಿತಿಯಲ್ಲಿ ಸಾಮಾನ್ಯ ಹಾಸಿಗೆಯ ಅವಶ್ಯಕತೆಯಿಲ್ಲ. ಬೇಕಾಗಿರುವುದೇ ಆಕ್ಸಿಜನ್ ಸೌಕರ್ಯ ಇರುವ ಬೆಡ್‌ಗಳು. ಇದನ್ನು ಹೆಚ್ಚು ಮಾಡಿದರೆ ಮಾತ್ರವೇ ಜೀವ ಹಾನಿ ತಡೆಗಟ್ಟಬಹುದು. ಇಲ್ಲದಿದ್ದರೆ ಸಾವಿನ ಸರಣಿ ಹೆಚ್ಚುತ್ತಲೇ ಹೋಗಲಿದೆ.
ಸರಕಾರ ಸಾಮಾನ್ಯ ಹಾಸಿಗೆಗಳನ್ನು ಹೆಚ್ಚು ಮಾಡಿ, ಹಾಸಿಗೆ ಕೊರತೆ ಇಲ್ಲ ಎಂದು ಹೇಳುತ್ತಿದೆ. ಸಾಮಾನ್ಯ ಹಾಸಿಗೆಗೆ ದಾಖಲಾಗುವ ಸೋಂಕಿತರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿ ಇದ್ದು ಚಿಕಿತ್ಸೆ ಪಡೆಯಬಹುದಾಗಿದೆ. ಹೀಗಾಗಿ ಆದ್ಯತೆ ಮೇರೆಗೆ ಸರಕಾರ ಐಸಿಯು ಬೆಡ್‌ಗಳ ಸಂಖ್ಯೆ ಗಣನೀಯವಾಗಿ ಏರಿಸುವ ಕಾರ್ಯ ಮಾಡಬೇಕಿದೆ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಸಾಲಲ್ಲ ಏರಿಕೆ: ಕಳೆದ ಎಂಟು ದಿನಗಳಲ್ಲಿನ ಐಸಿಯು ಹಾಸಿಗೆ ಸಂಖ್ಯೆಗಳನ್ನು ತುಲನೆ ಮಾಡಿ ನೋಡಿದರೆ ಫಲಿತಾಂಶ ತೀರಾ ಕಳಪೆಯಾಗಿದೆ. ಏ. 12ರಂದು ಒಟ್ಟು 255 ಐಸಿಯು ಹಾಸಿಗೆಗಳಿದ್ದವು. ಏ. 19ರ ವೇಳೆಗೆ ಕೇವಲ 76 ಹಾಸಿಗೆಗಳನ್ನು ಮಾತ್ರವೇ ಜಾಸ್ತಿ ಮಾಡಲಾಗಿದೆ. ಏ. 12ರಂದು ಐಸಿಯು ವಿತ್ ವೆಂಟಿಲೇಟರ್ ಹಾಸಿಗೆಗಳು 225 ಇದ್ದವು. ಏ. 19 ರ ವೇಳೆಗೆ ಹೆಚ್ಚಾದ ಹಾಸಿಗೆಗಳ ಸಂಖ್ಯೆ ಕೇವಲ 47 ಮಾತ್ರ.
ಏ. 12 ರಂದು ನಗರದಲ್ಲಿನ ಸೋಂಕಿತರ ಸಂಖ್ಯೆ 6,287. ಏ. 19ರಂದು ನಗರದಲ್ಲಿನ ಸೋಂಕಿತರ ಸಂಖ್ಯೆ 9618. ಇಷ್ಟೊಂದು ದೊಡ್ಡ ಸಂಖ್ಯೆಯ ಸೋಂಕಿತರಿಗೆ ಕನಿಷ್ಠ ಶೇ.5ರಿಂದ ಶೇ. 10ರಷ್ಟು ಐಸಿಯು ಬೆಡ್‌ಗಳಾದರೂ ಬೇಕು ಎನ್ನುತ್ತಾರೆ ವೈದ್ಯಕೀಯ ಕಾಲೇಜಿನ ಪ್ರಧ್ಯಾಪಕರೊಬ್ಬರು.
ಮೊದಲ ವಾರ ಸಾಮಾನ್ಯ ರೋಗ ಲಕ್ಷಣಗಳಿದ್ದವರಿಗೆ ಎರಡನೇ ವಾರಕ್ಕೆ ಆಕ್ಸಿಜನ್ ಬೇಕಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಒಂದು ವಾರ ಸೋಂಕಿತರನ್ನು ಅವಲೋಕನ ಮಾಡಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.
ಏ. 12ರಂದು ಒಟ್ಟು ಹಾಸಿಗೆ ಸಂಖ್ಯೆ 3659. ಏ. 19ರ ವೇಳೆಗೆ ಹೆಚ್ಚಿಸಲಾದ ಬೆಡ್‌ಗಳ ಸಂಖ್ಯೆ 2,111 ಮಾತ್ರ. ಇದರಲ್ಲಿ1,167 ಜನರಲ್ ಬೆಡ್‌ಗಳಾದರೆ 821 ಹೈಡಿಪೆಂಡೆನ್ಸಿ ಘಟಕ ಹಾಸಿಗೆಗಳಿವೆ.