ಬೆಂಗಳೂರಲ್ಲಿ ಕೊರೊನಾ ಬಾನಗಡಿ.. ಬ್ಯಾಗು ಹಿಡಿ.. ಊರಿಗೆ ನಡಿ.. ವಲಸೆ ಕಾರ್ಮಿಕರ ಗಡಿಬಿಡಿ..

ನಗರ ತೊರೆಯುತ್ತಿರುವ ಬಹುತೇಕರು ಅಸ್ಸಾಂ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಹರಿಯಾಣ ಮತ್ತು ಹಿಮಾಚಲ ಪ್ರದೇಶದವರಾಗಿದ್ದಾರೆ. ಈ ರಾಜ್ಯದ ಬಹುತೇಕ ಕಾರ್ಮಿಕರು ಕಟ್ಟಡ ಕಾಮಗಾರಿ, ರಸ್ತೆ ನಿರ್ಮಾಣ, ಸೆಕ್ಯೂರಿಟಿ ಗಾರ್ಡ್‌, ಹೋಟೆಲ್‌ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಬೆಂಗಳೂರಲ್ಲಿ ಕೊರೊನಾ ಬಾನಗಡಿ.. ಬ್ಯಾಗು ಹಿಡಿ.. ಊರಿಗೆ ನಡಿ.. ವಲಸೆ ಕಾರ್ಮಿಕರ ಗಡಿಬಿಡಿ..
Linkup
: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಕಾರ್ಮಿಕರು ನಗರ ತೊರೆಯುತ್ತಿದ್ದಾರೆ. ಲಾಕ್‌ಡೌನ್‌ ಭಯದಿಂದ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಇತರೆ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದ ವರ್ಷ ಸರಕಾರ ಘೋಷಿಸಿದ ಲಾಕ್‌ಡೌನ್‌ನಿಂದ ಬಹಳಷ್ಟು ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ವಾಹನಗಳು ಸಿಗದೆ ಹರಸಾಹಸ ಪಡುವಂತಾಗಿತ್ತು. ಬಹಳಷ್ಟು ಕಾರ್ಮಿಕರು ನಡೆದುಕೊಂಡೇ ಊರಿನತ್ತ ಪ್ರಯಾಣ ಆರಂಭಿಸಿದ್ದರು. ಇದರಿಂದ ಪಾಠ ಕಲಿತ ಕಾರ್ಮಿಕರು ಈ ವರ್ಷ ಜಾಗರೂಕರಾಗಿ ಮೊದಲೇ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಲು ಆರಂಭಿಸಿದ್ದಾರೆ. ಕಳೆದ ತಿಂಗಳು ಅಷ್ಟೇನೂ ತುಂಬಿರದ ರೈಲುಗಳು ಈ ತಿಂಗಳಿಂದ ಎಲ್ಲಾ ಸೀಟುಗಳು ಭರ್ತಿಯಾಗಿ ಚಲಿಸುತ್ತಿವೆ. ಉತ್ತರದವರೇ ಹೆಚ್ಚು: ನಗರ ತೊರೆಯುತ್ತಿರುವ ಬಹುತೇಕರು ಅಸ್ಸಾಂ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಹರಿಯಾಣ ಮತ್ತು ಹಿಮಾಚಲ ಪ್ರದೇಶದವರಾಗಿದ್ದಾರೆ. ಈ ರಾಜ್ಯದ ಬಹುತೇಕ ಕಾರ್ಮಿಕರು ಕಟ್ಟಡ ಕಾಮಗಾರಿ, ರಸ್ತೆ ನಿರ್ಮಾಣ, ಸೆಕ್ಯೂರಿಟಿ ಗಾರ್ಡ್‌, ಹೋಟೆಲ್‌ನಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇವರ ಜತೆ ಉತ್ತರ ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಭಾಗದ ಕಾರ್ಮಿಕರು ಕೂಡ ನಗರವನ್ನು ತೊರೆಯುತ್ತಿದ್ದಾರೆ. ಕಾಯ್ದಿರಿಸಿದ ಸೀಟಿನಲ್ಲಿ ಮಾತ್ರ ಪ್ರಯಾಣ: ಸದ್ಯ ತಕ್ಷಣಕ್ಕೆ ರೈಲ್ವೆ ಟಿಕೆಟ್‌ ಪಡೆದು ಪ್ರಯಾಣಿಸಲು ಅನುಮತಿಯಿಲ್ಲ. ರೈಲಿನಲ್ಲಿ ಕೇವಲ ಕಾಯ್ದಿರಿಸಿದ ಆಸನದಲ್ಲಿ ಮಾತ್ರವೇ ಪ್ರಯಾಣಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ನೂಕುನುಗ್ಗಲು ಆಗುತ್ತಿಲ್ಲ. ಕಾಯ್ದಿರಿಸಿದ ಆಸನದ ಪ್ರಕಾರವೇ ಕಾರ್ಮಿಕರು ಹೋಗುತ್ತಿರುವುದರಿಂದ ಹಂತ ಹಂತವಾಗಿ ನಗರದಿಂದ ಕಾರ್ಮಿಕರು ಖಾಲಿಯಾಗುತ್ತಿದ್ದಾರೆ. ಕೆಲಸ ಕೂಡ ಅಷ್ಟೊಂದು ಇಲ್ಲ: ನಗರದಲ್ಲಿ ಕೊರೊನಾ ಹೆಚ್ಚಳದಿಂದ ಸಾಕಷ್ಟು ಕಾಮಗಾರಿಗಳು ಕೂಡ ನಡೆಯುತ್ತಿಲ್ಲ. ಒಂದು ಕಾಮಗಾರಿ ಮುಗಿದ ಬೆನ್ನಲ್ಲೇ ಮತ್ತೆ ಕಾಮಗಾರಿ ಸಿಕ್ಕರೆ ಕಾರ್ಮಿಕರು ಒಂದೆಡೆ ನೆಲೆ ನಿಲ್ಲಲು ಸಹಾಯವಾಗುತ್ತದೆ. ಆದರೆ, ಹಾಗಾಗದ ಹಿನ್ನೆಲೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲಿಗೆ ಊರಿಗೆ ಹೋಗುವುದು ಸೂಕ್ತ ಎಂದು ಕೆಲವರು ನಗರ ಬಿಡುತ್ತಿದ್ದಾರೆ.