'ಆಧುನಿಕ ಭಾರತದ ಮಹಿಳೆಯರು ಮದುವೆ, ಮಕ್ಕಳನ್ನು ಬಯಸುವುದಿಲ್ಲ': ಸಚಿವ ಕೆ ಸುಧಾಕರ್

ಆಧುನಿಕ ಭಾರತದ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದರೂ ಅವರಿಗೆ ಮಕ್ಕಳನ್ನು ಹೆರುವುದು ಇಷ್ಟವಿಲ್ಲ. ಹೀಗಾಗಿ ಬಾಡಿಗೆ ತಾಯ್ತನದ ಪದ್ಧತಿಯನ್ನು ಬಳಸಿಕೊಳ್ಳುತ್ತಾರೆ ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ.

'ಆಧುನಿಕ ಭಾರತದ ಮಹಿಳೆಯರು ಮದುವೆ, ಮಕ್ಕಳನ್ನು ಬಯಸುವುದಿಲ್ಲ': ಸಚಿವ ಕೆ ಸುಧಾಕರ್
Linkup
ಬೆಂಗಳೂರು: ಆಧುನಿಕ ಭಾರತದ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆ ಬಳಿಕವೂ ಮಕ್ಕಳಿಗೆ ಜನ್ಮ ನೀಡಲು ಬಯಸುವುದಿಲ್ಲ. ಬದಲು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಹೇಳಿದ್ದಾರೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಭಾನುವಾರ ಮಾತನಾಡಿದ ಅವರು, 'ಇಂದು ಇದನ್ನು ಹೇಳಲು ಬೇಸರವಾಗುತ್ತದೆ. ಭಾರತದ ಅನೇಕ ಆಧುನಿಕ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಒಂದು ವೇಳೆ ಅವರು ಮದುವೆಯಾದರೂ ಮಗುವನ್ನು ಹೆರಲು ಬಯಸುವುದಿಲ್ಲ. ಅವರು ಬಾಡಿಗೆ ತಾಯ್ತನ ಬಯಸುತ್ತಾರೆ. ನಮ್ಮ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ. ಇದು ಒಳ್ಳೆಯದಲ್ಲ' ಎಂದು ತಿಳಿಸಿದ್ದಾರೆ. ಭಾರತದ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಜನರು, ಪೋಷಕರನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಇಚ್ಛಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾದರಿಯನ್ನು ಅನುಸರಿಸುತ್ತಿದ್ದೇವೆ. ನಮ್ಮ ಅಜ್ಜ ಅಜ್ಜಿಯರು ನಮ್ಮೊಂದಿಗೆ ವಾಸಿಸುವುದನ್ನು ಬಿಡಿ, ನಮ್ಮ ಹೆತ್ತವರು ಕೂಡ ನಮ್ಮೊಂದಿಗೆ ವಾಸಿಸುವುದನ್ನು ನಾವು ಇಷ್ಟಪಡುತ್ತಿಲ್ಲ' ಎಂದು ಹೇಳಿದ್ದಾರೆ. ಭಾರತೀಯರ ಸಮಸ್ಯೆ ಬಗ್ಗೆ ಮಾತನಾಡಿದ ಸುಧಾಕರ್, ಪ್ರತಿ ಏಳು ಭಾರತೀಯರಲ್ಲಿ ಒಬ್ಬರಲ್ಲಿ ಮಾನಸಿಕ ಸಮಸ್ಯೆಗಳು ಇರುತ್ತವೆ. ಇದು ಲಘು, ಮಧ್ಯಮ ಅಥವಾ ತೀವ್ರ ಪ್ರಮಾಣದಲ್ಲಿ ಇರಬಹುದು ಎಂದಿದ್ದಾರೆ. 'ಒತ್ತಡ ನಿರ್ವಹಣೆಯು ಒಂದು ಕಲೆ. ಭಾರತೀಯರಾಗಿ ನಾವು ಈ ಕಲೆಯನ್ನು ಕಲಿಯುವ ಅಗತ್ಯವಿಲ್ಲ. ಒತ್ತಡ ನಿರ್ವಹಿಸುವುದು ಹೇಗೆ ಎಂದು ನಾವು ಜಗತ್ತಿಗೆ ಹೇಳಿಕೊಡಬೇಕು. ಏಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಹೇಳಿಕೊಟ್ಟ ಅದ್ಭುತ ಸಾಧನಗಳಾಗಿವೆ' ಎಂದು ತಿಳಿಸಿದ್ದಾರೆ. 'ಸಾಂಕ್ರಾಮಿಕವು ರೋಗಿಗಳಿಗೆ ಸರ್ಕಾರ ಕೌನ್ಸೆಲಿಂಗ್ ಆರಂಭಿಸುವಂತೆ ಮಾಡಿದೆ. ಈವರೆಗೂ ನಾವು ಕರ್ನಾಟಕದಲ್ಲಿ 24 ಲಕ್ಷ ಕೋವಿಡ್ 19 ರೋಗಿಗಳಿಗೆ ಕೌನ್ಸೆಲಿಂಗ್ ನೀಡಿದ್ದೇವೆ. ಬೇರೆ ಯಾವುದೇ ರಾಜ್ಯಗಳನ್ನು ಇದನ್ನು ಮಾಡುತ್ತಿವೆಯೇ ಎನ್ನುವುದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.