ಬೆಂಗಳೂರು: ನಗರದ ಜನರ ಜೀವನ ಮಟ್ಟದಲ್ಲಿ ಎಲ್ಲ ರೀತಿಯಲ್ಲಿಯೂ ಉತ್ಕೃಷ್ಟತೆಯನ್ನು ಸಾಧಿಸುವ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬುಧವಾರ 'ಕಾಡುಗೋಡಿ ವೃಕ್ಷೋದ್ಯಾನ', ಕನ್ನಮಂಗಲ 'ಸಸ್ಯಶಾಸ್ತ್ರೀಯ ತೋಟ', ಕನ್ನಮಂಗಲ ಕೆರೆ ಉದ್ಘಾಟನಾ ಕಾರ್ಯಕ್ರಮ ಹಾಗೂ 'ಎಲೆ ಮಲ್ಲಪ್ಪ ಶೆಟ್ಟಿ ಕೆರೆ' ಪರಿವೀಕ್ಷಣೆ, ಜನಪದರು ರಂಗ ಮಂದಿರ ಉದ್ಘಾಟನೆ ಹಾಗೂ 'ನಮ್ಮ ಟ್ರೀ-ಸೆನ್ಸಸ್ ಆಪ್' ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಿದ್ದು, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಹಸರೀಕರಣ, ಸ್ವಚ್ಚತೆ ಹಾಗೂ ಸುಗಮ ಸೇವಾ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪರಿಸರ ಸಂರಕ್ಷಣೆ, ಹಸಿರೀಕರಣಗಳ ಕಡೆ ಇಂದು ಬೆಂಗಳೂರು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬೆಂಗಳೂರು ಮಿಷನ್-2022ರಲ್ಲಿ ಬೆಂಗಳೂರು ನಾಗರಿಕರಿಗೆ ಉತ್ತಮ ಹಸಿರು ಪರಿಸರವನ್ನು ಒದಗಿಸುವ ನಮ್ಮ ವಚನಕ್ಕೆ ಬದ್ಧರಾಗಿರುವುದಕ್ಕೆ ಕಾಡುಗೋಡಿ ವೃಕ್ಷೋದ್ಯಾನ ಸಾಕ್ಷಿ. ಈ ವೃಕ್ಷೋದ್ಯಾನದಲ್ಲಿ ರಾಶಿವನ, ನಕ್ಷತ್ರವನ, ಹಾಗೂ ಔಷಧಿಯ ಸಸಿಗಳನ್ನು ನೆಡಲಾಗಿದ್ದು, ಸಾರ್ವಜನಿಕರ ವಿಹಾರಕ್ಕೆ ಅನುಕೂಲತೆಗಳು, ಹಿರಿಯ ನಾಗರಿಕರಿಗೆ ಒಪನ್-ಜಿಮ್, ಮಕ್ಕಳಿಗೆ ಆಟದ ಅಂಗಳ ಹಾಗೂ ನೈಸರ್ಗಿಕ ಪಥಗಳ ನಿರ್ಮಾಣವಾಗಿರುವುದು ಈ ಭಾಗದ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.
ಬೆಂಗಳೂರು ಪೂರ್ವದ ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನಿರ್ಮಿಸಿರುವ 70 ಎಕರೆ ವಿಸ್ತೀರ್ಣದ 'ಅಟಲ್ ಬಿಹಾರಿ ಸಸ್ಯಶಾಸ್ತ್ರೀಯ ತೋಟ' ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿಗಳು, ಉತ್ಕೃಷ್ಟ ತಳಿಯ ಹಲವು ಹಣ್ಣುಗಳು, ಔಷಧಿಗಳ ಗಿಡಗಳು, ಅಲಂಕಾರಿಕಾ ಹಾಗೂ ಸುಗಂಧಿತ ಸಸ್ಯಗಳನ್ನು ಒಳಗೊಂಡ ಈ ಸಸ್ಯ ತೋಟವು ಜೀವ ವೈವಿಧ್ಯತೆಯ ತಾಣವಾಗಿದೆ ಎಂದು ಹೇಳಿದರು.
ಈಗಾಗಲೇ ಇರುವ ಸಸ್ಯ ಸಂಪತ್ತಿನ ಜೊತೆ, ನಾಗರಿಕರ ಅನುಕೂಲಕ್ಕಾಗಿ ಹಲವಾರು ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಾಯುವಿಹಾರಿಗಳ ಪಥ, ಕುಡಿಯುವ ನೀರಿನ ಘಟಕ, ಶೌಚಾಲಯಗಳು ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಸಸ್ಯಶಾಸ್ತ್ರೀಯ ತೋಟವು ಹಲವಾರು ಹಣ್ಣಿನ ಗಿಡಗಳ ಹಾಗೂ ಉಪಯುಕ್ತ ಸಸ್ಯಗಳ ಸಸ್ಯಕಾಶಿಯಾಗಿ ಸಾರ್ವಜನಿಕರಿಗೆ ಶುದ್ದ ಹವೆ, ಆರೋಗ್ಯವಾದ ಬದುಕು ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಮಹದೇವಪುರದ ಬಿದರಹಳ್ಳಿ ಹೋಬಳಿಯಲ್ಲಿರುವ ಕನ್ನಮಂಗಲ ಕೆರೆ ಹಳ್ಳಿಗಳಿಗೆ ಅಂತರ್ಜಲದ ಮರುಪೂರಣವನ್ನು ಹೆಚ್ಚಿಸಲು ಆಶ್ರಯವಾಗಲಿದೆ. ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿ ಸಿದ್ದಗೊಂಡು ನಿಂತಿರುವ ನಿಂಬೆಕಾಯಿಪುರದ ಗ್ರಾಮದ 'ಜನಪದರು' ರಂಗಮಂದಿರವು ಈ ಭಾಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರೂ.3.5 ಕೋಟಿ ವೆಚ್ಚದಲ್ಲಿ ಒಂದು ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಈ ರಂಗಮಂದಿರ ಅತ್ಯಂತ ವಿಶಿಷ್ಟವಾದದ್ದು. ಏಕೆಂದರೆ ಭಾರತೀಯ ರಂಗಭೂಮಿ ಮಟ್ಟಿಗೆ ತಿರುಗು ರಂಗಮಂದಿರವನ್ನು (ರಿವಾಲ್ವಿಂಗ್ ಸ್ಟೇಜ್) ಹೊಂದಿರುವ ಏಕೈಕ ರಂಗಮಂದಿರ ಎಂಬ ಹೆಗ್ಗಳಿಕೆ ಇದರದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹದೇವಪುರ ಕ್ಷೇತ್ರದ ಮತ್ತೊಂದು ಹಳೆಯ ಮತ್ತು ಇತಿಹಾಸ ಪ್ರಸಿದ್ದವಾದ 'ಎಲೆ ಮಲ್ಲಪ್ಪ ಶೆಟ್ಟಿ ಕೆರೆ' ಪರಿವೀಕ್ಷಣೆ ಮಾಡಿದ ಮುಖ್ಯಮಂತ್ರಿಗಳು 508 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬೆಂಗಳೂರು ಮಿಷನ್-2022ರ ಅಡಿಯಲ್ಲಿ ಅಭಿವೃದ್ಧಿ ಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಸಮಗ್ರವಾದ ಅಭಿವೃದ್ಧಿ ನೀಲ ನಕ್ಷೆಯೊಂದಿಗೆ ಶೀಘ್ರದಲ್ಲಿಯೇ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ತೋಟಗಾರಿಕೆ ಇಲಾಖೆ ಸಚಿವ ಆರ್ ಶಂಕರ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್, ಸರಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.