ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ To-let ಬೋರ್ಡ್..! ಖಾಲಿ ಬಿದ್ದಿವೆ ಸಾವಿರಾರು ಮನೆಗಳು..!

ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ, ಮಾರತ್‌ಹಳ್ಳಿ, ಕಾಡುಗೋಡಿ, ಗರುಡಾಚಾರ್‌ಪಾಳ್ಯ, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಬಾಡಿಗೆ ಮನೆಗಳು 6-7 ತಿಂಗಳಿನಿಂದ ಖಾಲಿ ಇವೆ.

ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ To-let ಬೋರ್ಡ್..! ಖಾಲಿ ಬಿದ್ದಿವೆ ಸಾವಿರಾರು ಮನೆಗಳು..!
Linkup
ನಾಗಪ್ಪ ನಾಗನಾಯಕನಹಳ್ಳಿ : ರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕಿನ ಎರಡನೇ ಅಲೆಯ ಆರ್ಭಟ ಜೋರಾಗುತ್ತಿದ್ದು, ವ್ಯಾಪಾರ-ವಹಿವಾಟಿಗೆ ಹೊಡೆತ ಬಿದ್ದಿದೆ. ಕೋವಿಡ್‌ ಭೀತಿಯಿಂದ ಹಲವರು ನಗರ ತೊರೆಯುತ್ತಿದ್ದು, ಬಹುತೇಕ ಬಡಾವಣೆಗಳಲ್ಲಿ ಬಾಡಿಗೆಗೆ ಮನೆ ಖಾಲಿ ಇವೆ ಎಂಬ ಬೋರ್ಡ್‌ಗಳೇ ತೂಗಾಡುತ್ತಿವೆ..! ರಾಜ್ಯದಲ್ಲಿ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳ ಪೈಕಿ ಶೇ 80ರಷ್ಟು ನಗರದಲ್ಲೇ ಕಂಡು ಬರುತ್ತಿವೆ. ಹಾಸಿಗೆ, ವೆಂಟಿಲೇಟರ್‌, ಐಸಿಯು ಸೌಲಭ್ಯವಿಲ್ಲದೆ ಪರದಾಡುವ ಹಾಗೂ ಕೊರೊನಾದಿಂದ ಸಾವಿಗೀಡಾದವರ ಅಂತ್ಯಕ್ರಿಯೆಗೆ ವಿದ್ಯುತ್‌ ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಜನರಲ್ಲಿ ಭೀತಿ ಮೂಡಿಸಿವೆ. ಹೀಗಾಗಿಯೇ, ಸಾರ್ವಜನಿಕರು ಬೆಂಗಳೂರಿನ ಸಹವಾಸವೇ ಬೇಡವೆಂದು ಮನೆಗಳನ್ನು ಖಾಲಿ ಮಾಡಿ, ತಮ್ಮ ಊರುಗಳತ್ತ ಗುಳೆ ಹೊರಟಿದ್ದಾರೆ. ಕೋವಿಡ್‌ ಮಹಾಮಾರಿಯ ಒಂದನೇ ಅಲೆಯ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿದ ಬಳಿಕ ಸಾವಿರಾರು ಮಂದಿ ವಾಪಸಾಗಿದ್ದರು. ವ್ಯಾಪಾರ-ವಹಿವಾಟು ಸಹ ಚೇತರಿಸಿಕೊಳ್ಳುತ್ತಿತ್ತು. ವರ್ಕ್ ಫ್ರಂ ಹೋಮ್‌ನಲ್ಲಿದ್ದವರು ಕಚೇರಿಗಳಿಗೆ ಮರಳಿದ್ದರು. ಹೀಗಾಗಿ, ಖಾಲಿಯಾಗಿದ್ದ ಬಾಡಿಗೆ ಮನೆಗಳು ಕೊಂಚ ಮಟ್ಟಿಗೆ ಭರ್ತಿಯಾಗಿದ್ದವು. ಸೋಂಕಿನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ವಾಣಿಜ್ಯ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ. ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿವೆ. ಆದ ಕಾರಣ, ಲಕ್ಷಾಂತರ ಮಂದಿ ತಮ್ಮ ತವರು ಸೇರಿದ್ದಾರೆ. ಇದಲ್ಲದೆ, ಆಟೋ, ಟ್ಯಾಕ್ಸಿ ಚಾಲಕರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಬಡ ಮತ್ತು ಮಧ್ಯಮ ವರ್ಗದವರು ಸಹ ಜೀವನ ನಿರ್ವಹಣೆ ಸಾಧ್ಯವಾಗದೆ ಸ್ವಂತ ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ, ಸಾಕಷ್ಟು ಬಾಡಿಗೆ ಮನೆಗಳು ಖಾಲಿ ಇವೆ. ವಾಣಿಜ್ಯ ಮಳಿಗೆಗಳು, ಕಚೇರಿಗಳು ಕೂಡ ಖಾಲಿ ಬಿದ್ದಿವೆ. ನಗರದ ಯಾವುದೇ ಬಡಾವಣೆಗೆ ಕಾಲಿಟ್ಟರೂ 'ಟು ಲೆಟ್‌' ಫಲಕಗಳು ಮನೆಯ ಗೇಟ್‌, ಕಿಟಕಿ ಬಳಿ ನೇತಾಡುವ ದೃಶ್ಯಗಳು ಕಾಣಸಿಗುತ್ತವೆ. ಮಾಹಿತಿ-ತಂತ್ರಜ್ಞಾನ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ, ಮಾರತ್‌ಹಳ್ಳಿ, ಕಾಡುಗೋಡಿ, ಗರುಡಾಚಾರ್‌ಪಾಳ್ಯ, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಬಾಡಿಗೆ ಮನೆಗಳು 6-7 ತಿಂಗಳಿನಿಂದ ಖಾಲಿ ಬಿದ್ದಿವೆ. ಬಾಡಿಗೆ ಆದಾಯವನ್ನೇ ನಂಬಿ ಬದುಕುತ್ತಿದ್ದ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮನೆ, ಫ್ಲ್ಯಾಟ್‌, ವಿಲ್ಲಾ, ನಿವೇಶನ ಖರೀದಿ ಪ್ರಕ್ರಿಯೆ ಕೂಡ ಸ್ಥಗಿತಗೊಂಡಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸಾವಿರಾರು ಫ್ಲ್ಯಾಟ್‌ಗಳು ಬಿಕರಿಯಾಗದೆ ಖಾಲಿ ಇವೆ. 'ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಮಾರತ್‌ಹಳ್ಳಿ, ಬೆಳ್ಳಂದೂರು, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ ಭಾಗದಲ್ಲಿ ಸಾವಿರಾರು ಬಾಡಿಗೆ ಮನೆಗಳು ಹಲವು ತಿಂಗಳಿನಿಂದ ಖಾಲಿ ಇವೆ. ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ಊರು ಸೇರಿರುವ ಬಹುತೇಕರು ವಾಪಸ್ಸಾಗಿಲ್ಲ. ಹೀಗಾಗಿ, 8-10 ತಿಂಗಳಿನಿಂದ ಮನೆಗಳನ್ನು ಬಾಡಿಗೆಗೆ ಕೇಳುವವರೇ ಇಲ್ಲ. ಈ ವರ್ಷದ ಆರಂಭದಲ್ಲಿ ಶೇ 10 ರಷ್ಟು ಮನೆಗಳು ಭರ್ತಿಯಾಗಿದ್ದವು. ಮಾರ್ಚ್ ತಿಂಗಳಿನಿಂದೀಚೆಗೆ ಬಹುತೇಕರು ಮತ್ತೆ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಪರಿಣಾಮ, ಬಾಡಿಗೆ ಆದಾಯವನ್ನೇ ನೆಚ್ಚಿಕೊಂಡು ಬ್ಯಾಂಕ್‌ ಸಾಲದ ಕಂತು ಕಟ್ಟುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಮಾಲೀಕರಿಗೆ ಬ್ಯಾಂಕ್‌ಗಳಿಂದ ಜಪ್ತಿ ನೋಟಿಸ್‌ಗಳು ಬರುತ್ತಿವೆ' ಎಂದು ರಿಯಲ್‌ ಎಸ್ಟೇಟ್‌ ಏಜೆಂಟ್‌ ರಮೇಶ್‌ ತಿಳಿಸಿದರು. 'ಒಂದು ಬಿಎಚ್‌ಕೆ ಮನೆಗೆ ಈ ಹಿಂದೆ 10-12 ಸಾವಿರ ರೂ. ಬಾಡಿಗೆ ಇತ್ತು. ಕನಿಷ್ಠ 10 ತಿಂಗಳ ಅಡ್ವಾನ್ಸ್‌ ನೀಡಬೇಕಿತ್ತು. ಈಗ ಅದೇ ಮನೆಗಳು 5-6 ಸಾವಿರಕ್ಕೆ ಸಿಗುತ್ತಿವೆ. ಮಾಲೀಕರು ಬಾಡಿಗೆದಾರರು ಕೊಟ್ಟಷ್ಟು ಮುಂಗಡ ಪಡೆಯಲು ಸಿದ್ಧರಿದ್ದಾರೆ. ಆದರೆ, ಬಾಡಿಗೆಗೆ ಮನೆಗಳನ್ನು ಪಡೆಯುವವರೇ ಇಲ್ಲದಂತಾಗಿದೆ' ಎಂದು ಹೇಳಿದರು. 'ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌, ಯಲಚೇನಹಳ್ಳಿ, ಜರಗನಹಳ್ಳಿ, ಸಾರಕ್ಕಿ, ಕುಮಾರಸ್ವಾಮಿ ಲೇಔಟ್‌, ಉತ್ತರಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಬಾಡಿಗೆ ಮನೆಗಳು ಖಾಲಿ ಇವೆ. ಎರಡು ಬೆಡ್‌ ರೂಂಗಳ ಮನೆಯ ಬಾಡಿಗೆ ದರವು ಈ ಹಿಂದೆ 12-13 ಸಾವಿರ ರೂ. ಇತ್ತು. ಈಗ 8-9 ಸಾವಿರಕ್ಕೆ ಸಿಗುತ್ತಿವೆ. ಆದರೆ, ಬಾಡಿಗೆದಾರರು ಸಿಗುತ್ತಿಲ್ಲ. ಕೊರೊನಾ ಸೋಂಕಿನ ಭೀತಿಯಿಂದ ಬಹುತೇಕರು ಊರುಗಳಿಗೆ ತೆರಳಿದ್ದು, ಬಾಡಿಗೆ ಮನೆಗಳಿಗೆ ಡಿಮ್ಯಾಂಡ್‌ ಇಲ್ಲದಂತಾಗಿದೆ' ಎಂದು ಮಧ್ಯವರ್ತಿಯೊಬ್ಬರು ತಿಳಿಸಿದರು.