ಬಂಗಾಳದಲ್ಲಿ 'ಜ್ಯೋತಿ ಬಸು' ನಂತರ ಸುದೀರ್ಘ ಮುಖ್ಯಮಂತ್ರಿ ಎನಿಸಲಿದ್ದಾರೆ ಮಮತಾ ಬ್ಯಾನರ್ಜಿ!

ಮಮತಾ ಬ್ಯಾನರ್ಜಿ ಅವರು ಮೂರನೇ ಅವಧಿಯನ್ನು ಪೂರೈಸಿದರೆ ಜ್ಯೋತಿ ಬಸು ನಂತರ ಪಶ್ಚಿಮ ಬಂಗಾಳದ ಸುದೀರ್ಘ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಜ್ಯೋತಿ ಬಸು 23 ವರ್ಷ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಬಂಗಾಳದಲ್ಲಿ 'ಜ್ಯೋತಿ ಬಸು' ನಂತರ ಸುದೀರ್ಘ ಮುಖ್ಯಮಂತ್ರಿ ಎನಿಸಲಿದ್ದಾರೆ ಮಮತಾ ಬ್ಯಾನರ್ಜಿ!
Linkup
ಕೋಲ್ಕತ: ಅವರು ಮೂರನೇ ಅವಧಿಯನ್ನು ಪೂರೈಸಿದರೆ ಜ್ಯೋತಿ ಬಸು ನಂತರ ಪಶ್ಚಿಮ ಬಂಗಾಳದ ಸುದೀರ್ಘ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸಿಪಿಐ(ಎಂ)ನ ಜ್ಯೋತಿ ಬಸು ಅವರು 1977ರಿಂದ 2000ನೇ ಇಸವಿವರೆಗೆ 23 ವರ್ಷ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಮಮತಾ ಬ್ಯಾನರ್ಜಿ ಅವರು ಕಾಲೇಜು ದಿನಗಳಲ್ಲಿ 'ಛಾತ್ರ ಪರಿಷತ್‌'ಗಳನ್ನು ಆರಂಭಿಸಿದ್ದರು. ಕಮ್ಯೂನಿಸ್ಟರ ಕಟ್ಟಾ ವಿರೋಧಿಯಾಗಿದ್ದ ಅವರು, ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಕೋಲ್ಕತ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ 1991, 1996, 1998, 1999, 2004 ಮತ್ತು 2009ರಲ್ಲಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ 1989ರಲ್ಲಿ ಸೋತಿದ್ದರು. ಜಾಧವಪುರ ಲೋಕಸಭಾ ಕ್ಷೇತ್ರದಲ್ಲಿ 1994ರಲ್ಲಿ ಹಿರಿಯ ಕಮ್ಯೂನಿಸ್ಟ್‌ ನಾಯಕ ಸೋಮನಾಥ ಚಟರ್ಜಿ ಅವರನ್ನು ಸೋಲಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮಮತಾ ಬ್ಯಾನರ್ಜಿ ಹೆಸರು ಗಳಿಸಿದರು. ಪಿ.ವಿ.ನರಸಿಂಹ ರಾವ್‌ ಸಂಪುಟದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ ಖಾತೆಯ ಸಹಾಯಕ ಸಚಿವರಾಗಿದ್ದ ಮಮತಾ, ಕ್ರೀಡೆಗೆ ಸರಕಾರ ಉತ್ತೇಜನ ನೀಡುತ್ತಿಲ್ಲಎಂದು ಆರೋಪಿಸಿ ಸಚಿವ ಪದವಿಗೆ ರಾಜೀನಾಮೆ ನೀಡಿ ಕೋಲ್ಕೊತಾದಲ್ಲಿ ಬೃಹತ್‌ ರ್ಯಾಲಿ ನಡೆಸಿದ್ದರು. ಕಾಂಗ್ರೆಸ್‌ ಪಕ್ಷವು ಎಡಪಕ್ಷಗಳು ಅಡಿಯಾಳಿನಂತೆ ವರ್ತಿಸುತ್ತಿದೆ ಎಂದು ಆರೋಪಿಸಿ 1996ರಲ್ಲಿ ಕಾಂಗ್ರೆಸ್‌ ತೊರೆದು, 1998ರಲ್ಲಿ ತೃಣಮೂಲ ಕಾಂಗ್ರೆಸ್‌ ಸ್ಥಾಪಿಸಿದರು. 1999ರಲ್ಲಿ ಎನ್‌ಡಿಎ ಸೇರಿದ ಅವರು, ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದರು. ತೆಹಲ್ಕಾ ಹಗರಣದಲ್ಲಿ ಬಿಜೆಪಿಯ ಅನೇಕ ಸಚಿವರ ಹೆಸರು ಕೇಳಿಬಂದ ಕಾರಣ, 2001ರಲ್ಲಿ ಎನ್‌ಡಿ ಸಖ್ಯ ತೊರೆದು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರು. ನಂತರ 2003ರಲ್ಲಿ ಪುನಃ ಎನ್‌ಡಿಗೆ ಮರಳಿದ ಅವರಿಗೆ ಕಲ್ಲಿದ್ದಲು ಮತ್ತು ಗಣಿ ಖಾತೆ ನೀಡಲಾಗಿತ್ತು. 2009ರ ಲೋಕಸಭೆ ಚುನಾವಣೆ ಯುಪಿಎ ಮೈತ್ರಿಕೂಟ ಸೇರಿದ ಅವರು, ಮತ್ತೆ ರೈಲ್ವೆ ಸಚಿವರಾಗಿ ನೇಮಕಗೊಂಡರು. ಟಿಎಂಸಿ ಸ್ಥಾಪಿಸಿದ ಮೂರು ವರ್ಷಗಳಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಮತಾ ಅವರ ಪಕ್ಷ ಉತ್ತಮ ಸಾಧನೆ ಮಾಡಿತು. ಮೊದಲ ಚುನಾವಣೆಯಲ್ಲಿಯೇ ಪಕ್ಷ 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. 2006ರಲ್ಲಿ ಪಕ್ಷದ ಶಾಸಕರ ಸಂಖ್ಯೆ ಇಳಿಯಿತು. ನಂದಿಗ್ರಾಮ ಮತ್ತು ಸಿಂಗೂರ್‌ ಹೋರಾಟ, ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದಾಗಿ 2011ರಲ್ಲಿ ತೃಣಮೂಲ ಕಾಂಗ್ರೆಸ್‌ ನಿಚ್ಚಳ ಬಹುಮತದೊಂದಿಗೆ ಮೊದಲ ಬಾರಿ ಪಶ್ಚಿಮ ಬಂಗಾಳದಲ್ಲಿ ಸರಕಾರ ರಚಿಸಿತು. ಈ ಬಾರಿ ಘಟಾನುಘಟಿ ನಾಯಕರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಅತ್ತ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ,ನಡ್ಡಾ ಮೊದಲಾದವರು ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರ ನಡೆಸಿದರೂ ಬಿಜೆಪಿ ತಂತ್ರಗಾರಿಕೆಯನ್ನು ಸಮರ್ಥವಾಗಿ ಎದುರಿಸಿ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮೂರನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ.