ತಿರುವನಂತಪುರ: ಮೂರು ದಿನಗಳಿಂದ ಧಾರಾಕಾರ ಮಳೆಗೆ ಸಾಕ್ಷಿಯಾಗಿರುವ ಕೇರಳದಲ್ಲಿ ಈಗ ಹೊಸ ಸಮಸ್ಯೆ ಉದ್ಭವಿಸಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಬಿಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ರಾಜ್ಯದಲ್ಲಿ ಡ್ಯಾಂಗಳಿಂದಲೂ ನೀರು ಬಿಟ್ಟರೆ ಮತ್ತಷ್ಟು ಅನಾಹುತ ಸಂಭವಿಸಲಿದೆ.
ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ಎಲ್ಲಾ ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಣೆಕಟ್ಟುಗಳು ಭರ್ತಿಯಾಗಿವೆ. ಹಿಡಿದಿಡಲು ಸಾಧ್ಯವೇ ಆಗದೆ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಕೆಳ ಭಾಗದ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.
ಏಷ್ಯಾದ ಅತಿ ಎತ್ತರದ ಕಮಾನು ಆಕಾರದ ಡ್ಯಾಂ ಎನ್ನುವ ಖ್ಯಾತಿ ಗಳಿಸಿರುವ ಇಡುಕ್ಕಿ ಈಗ ತುಂಬಿ ತುಳುಕುತ್ತಿದೆ. ಡ್ಯಾಂನ ಒಟ್ಟು 2,403 ಅಡಿ ಎತ್ತರದ ಪೈಕಿ 2,396.96 ಅಡಿ ಭರ್ತಿಯಾಗಿದ್ದು, ಮಂಗಳವಾರ ಕ್ರಸ್ಟ್‌ಗೇಟ್ ತೆರೆದು ನೀರು ಹೊರಬಿಡಲು ನಿರ್ಧರಿಸಲಾಗಿದೆ. ಅಣೆಕಟ್ಟಿನ ಕೆಳ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶೋಲೆಯರ್, ಪಂಬಾ, ಕಕ್ಕಿ ಮತ್ತು ಇಡಮಲಯಾರ್ ಅಣೆಕಟ್ಟುಗಳು ಕೂಡ ಭರ್ತಿಯಾಗಿವೆ. ಇವುಗಳ ನೀರಿನ ಮಟ್ಟ ಪ್ರತಿಗಂಟೆಗೂ ಹೆಚ್ಚುತ್ತಲೇ ಇದೆ.
''ಪರಿಸ್ಥಿತಿ ತುಂಬ ಕ್ಲಿಷ್ಟವಾಗಿದೆ. ಸಾಗರೋಪಾದಿ ನೀರು ಅಣೆಕಟ್ಟು ಸೇರುತ್ತಿರುವುದರಿಂದ ಹಿಡಿದಿಡುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ. ಒಂದೆಡೆ ಧಾರಾಕಾರ ಮಳೆಯಿಂದ ನಾಡು ತಲ್ಲಣಿಸುತ್ತಿದೆ. ಇದೇ ಸಂದರ್ಭ ಅಣೆಕಟ್ಟುಗಳ ನೀರಿನ ಮಟ್ಟ ಅಪಾಯದ ಮಟ್ಟ ತಲುಪುತ್ತಿದೆ. ಅವನ್ನು ಎಲ್ಲಿ ಹರಿಸುವುದು ಎನ್ನುವ ಕಳವಳ ಕಾಡುತ್ತಿದೆ,'' ಎಂದು ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪರಿಹಾರ ಕಾರ್ಯಗಳ ಸಮನ್ವಯತೆಗಾಗಿ ಎಡಿಜಿಪಿ ವಿಜಯ್ ಶೇಖರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಚಿವರೆಲ್ಲರೂ ತಮ್ಮ ತವರು ಜಿಲ್ಲೆಗಳಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.
ಇನ್ನೂ 3 ದಿನ ಮಳೆನಾಲ್ಕು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆ ಇನ್ನೂ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ''21ರವರೆಗೆ ಮಳೆ ತಹಬಂದಿಗೆ ಬರುವ ಸಾಧ್ಯತೆ ಇಲ್ಲ. ಅನೇಕ ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನ ಜನ ಕಟ್ಟೆಚ್ಚರ ವಹಿಸಬೇಕು,'' ಎಂದು ಅಧಿಕಾರಿಗಳು ಸಲಹೆ ಮಾಡಿದ್ದಾರೆ.
ತಬ್ಬಿಕೊಂಡೇ ಇಹಲೋಕ ತ್ಯಜಿಸಿದ ಜೀವಗಳು
ಕೇರಳದ ಅನೇಕ ಜಿಲ್ಲೆಗಳಲ್ಲಿ ಮಳೆ ಸಂಬಂಧಿ ಅನಾಹುತಗಳಲ್ಲಿ ಮಡಿದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಮವಾರ ಸಂಜೆವರೆಗಿನ ಮಾಹಿತಿ ಪ್ರಕಾರ ಮಡಿದವರ ಸಂಖ್ಯೆ 35 ದಾಟಿದೆ. ಸಿಡಿಲಿನ ಅಬ್ಬರ, ಮಳೆಯ ಭೋರ್ಗರೆತದ ನಡುವೆ ಮನೆಯಿಂದ ಹೊರ ಬರಲಾಗದೇ ಮುದುಡಿ ಕುಳಿತ ಜನ ಭೂ ಕುಸಿತದ ಭೀತಿಯಿಂದ ಕಂಗಾಲಾಗಿದ್ದಾರೆ. ರಣಮಳೆಗೆ ಕಣ್ಣೆದುರೇ ಆಪ್ತರನ್ನು ಕಳೆದುಕೊಂಡವರ ರೋದನ ಮುಗಿಲು ಮುಟ್ಟಿದೆ.
ಮುದುಡಿದ ಮೂರು ಕಂದಮ್ಮಗಳು: ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಭೂಕುಸಿದತಡಿ ಸಿಲುಕಿರುವ ಜೀವಗಳ ರಕ್ಷಣೆಗೆ ಕಾರ್ಯಾಚರಣೆ ಬಿರುಸುಗೊಂಡಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್ ಗ್ರಾಮದಲ್ಲಿ ಮನೆಯ ಅವಶೇಷ ತೆರವುಗೊಳಿಸುವ ತಂಡಕ್ಕೆ ಸೋಮವಾರ ಮೂವರು ಕಂದಮ್ಮಗಳ ಮೃತದೇಹ ಪತ್ತೆಯಾದವು. ಪರಸ್ಪರ ತಬ್ಬಿಕೊಂಡೇ ಕೆಸರಿನಡಿ ಜೀವ ಬಿಟ್ಟಿದ್ದ ಎಳೆಯ ಮೃತದೇಹಗಳನ್ನು ಮೇಲೆತ್ತುವಾಗ ರಕ್ಷಣಾ ತಂಡದ ಸದಸ್ಯರ ಕಣ್ಣಾಲಿಗಳು ತುಂಬಿ ಬಂದವು. ಮೃತ ಮಕ್ಕಳನ್ನು ಆಫ್ಸಾನ್ (8), ಅಮನ್ (7) ಮತ್ತು ಅಹಿಯಾನ್ (4) ಎಂದು ಗುರುತಿಸಲಾಗಿದೆ.
ಅಮ್ಮನನ್ನು ಅಪ್ಪಿದ ಮಗ: ಇಡುಕ್ಕಿ ಜಿಲ್ಲೆಯ ಕಂಚೀರಪಳ್ಳಿಯಲ್ಲಿಯೂ ಇಂತದ್ದೇ ಮತ್ತೊಂದು ಕರಳು ಹಿಂಡುವ ಘಟನೆ ವರದಿಯಾಗಿದೆ. ತಬ್ಬಿಕೊಂಡ ಸ್ಥಿತಿಯಲ್ಲಿ ಅಮ್ಮ-ಮಗ ಮತ್ತು ತೊಟ್ಟಿಲಲ್ಲಿ ಮಲಗಿದ ಎಳೆಯ ಕಂದಮ್ಮನ ಮೃತದೇಹಗಳು ಪತ್ತೆಯಾಗಿವೆ. ಮೃತ ಅಮ್ಮ-ಮಗನನ್ನು ಫೌಜಿಯಾ (28) ಮತ್ತು ಅಮೀನ್ (10) ಎಂದು ಗುರುತಿಸಲಾಗಿದೆ. ಫೌಜಿಯಾ, ಪತಿ ಮತ್ತು ಮಕ್ಕಳೊಂದಿಗೆ ಮದುವೆ ಸಮಾರಂಭಕ್ಕೆಂದು ತವರು ಮನೆಗೆ ಬಂದು ಸಜೀವ ಸಮಾಧಿಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಜೋಡಿಗೆ ಅಡುಗೆ ಪಾತ್ರೆಯೇ ದೋಣಿಯಾಯ್ತು!
ಒಂದೆಡೆ ದುಃಖದ ದುರಂತ ಸನ್ನಿವೇಶಗಳು ತೆರೆದುಕೊಳ್ಳುತ್ತಿರುವ ನಡುವೆಯೇ ಅಳಪ್ಪುಳದಲ್ಲಿ ನೀರು ತುಂಬಿದ ಬೀದಿಗಳಲ್ಲಿ ಅಡುಗೆ ಪಾತ್ರೆಯನ್ನೇ ದೋಣಿಯಂತೆ ಬಳಸಿಕೊಂಡು ತೇಲಿ ಹೋಗಿ ಮದುವೆಯಾದ ಪ್ರಕರಣ ವರದಿಯಾಗಿದೆ. ಆಕಾಶ್ ಮತ್ತು ಐಶ್ವರ್ಯ ಇಬ್ಬರೂ ಆರೋಗ್ಯ ಸೇವಾ ಸಿಬ್ಬಂದಿ. ಇವರು ಪರಸ್ಪರ ಪ್ರೀತಿಸಿದ್ದರು. ಮದುವೆಗೆ ಗುರುತಿಸಿದ್ದ ದಿನಗಳಲ್ಲಿಯೇ ರಾಜ್ಯದಲ್ಲಿ ಮಳೆ ಆರ್ಭಟ ಶುರುವಾಯಿತು. ಆದರೂ ಹಿಂಜರಿಯದ ಈ ಜೋಡಿ ಧಾರಾಕಾರ ಮಳೆಯ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಜಲಾವೃತ ಬೀದಿಗಳಲ್ಲಿ ಈ ಜೋಡಿ, ಅನ್ನ ಬೇಯಿಸುವ ದೊಡ್ಡ ಪಾತ್ರೆಯನ್ನೇ ದೋಣಿ ಮಾಡಿಕೊಂಡು ಪ್ರದಕ್ಷಿಣೆ ಹಾಕಿದ್ದು ಕುತೂಹಲಕಾರಿಯಾಗಿತ್ತು.
ಉತ್ತರಾಖಂಡದಲ್ಲಿ ಮೂವರ ಸಾವು
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂ ಕುಸಿತಗಳು ಸಂಭವಿಸಿವೆ. ಪೌರಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳದ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹೋಟೆಲ್ ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಇವರು, ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸವಾಗಿದ್ದರು. ಮಳೆ ಹಿನ್ನೆಲೆಯಲ್ಲಿ ಚಾರ್‌ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಡಿಶಾ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ