ಪ್ರಶಾಂತ್‌ ಕಿಶೋರ್‌ರ ಐ-ಪ್ಯಾಕ್‌ ತಂಡವನ್ನು ತ್ರಿಪುರಾದಲ್ಲಿ ವಶಕ್ಕೆ ಪಡೆದ ಪೊಲೀಸರು!

ಪ್ರಶಾಂತ್‌ ಕಿಶೋರ್‌ ಅವರ ಐ-ಪ್ಯಾಕ್‌ ತಂಡವನ್ನು ತ್ರಿಪುರಾದ ಪೂರ್ವ ಅಗರ್ತಲಾ ಪೊಲೀಸರು ಭಾನುವಾರ ರಾತ್ರಿಯಿಂದ ಹೋಟೆಲ್‌ನಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ. ತಂಡದಲ್ಲಿ 23 ಸದಸ್ಯರಿದ್ದಾರೆ.

ಪ್ರಶಾಂತ್‌ ಕಿಶೋರ್‌ರ ಐ-ಪ್ಯಾಕ್‌ ತಂಡವನ್ನು ತ್ರಿಪುರಾದಲ್ಲಿ ವಶಕ್ಕೆ ಪಡೆದ ಪೊಲೀಸರು!
Linkup
ಅಗರ್ತಲಾ: 23 ಜನರಿರುವ ಅವರ ಐ-ಪ್ಯಾಕ್‌ ತಂಡವನ್ನು ಪೂರ್ವ ಅಗರ್ತಲಾ ಪೊಲೀಸರು ಭಾನುವಾರ ರಾತ್ರಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಅಗರ್ತಲಾ ವುಡ್‌ಲ್ಯಾಂಡ್‌ ಪಾರ್ಕ್‌ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಐ-ಪ್ಯಾಕ್‌ ಸದಸ್ಯರನ್ನು ಭಾನುವಾರ ರಾತ್ರಿಯಿಂದ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಹೋಟೆಲ್‌ ತೊರೆಯದಂತೆ ಸದಸ್ಯರಿಗೆ ಎಚ್ಚರಿಕೆ ನೀಡಿದ್ದು, ರಾಜ್ಯ ತೊರೆಯಲು ವಿಮಾನ ನಿಲ್ದಾಣಕ್ಕೆ ತೆರಳಲು ಮಾತ್ರ ಅವಕಾಶ ಕಲ್ಪಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಎನ್‌ಐ' ಸುದ್ದಿ ಸಂಸ್ಥೆ ವರದಿ ಮಾಡಿದೆ. ತೃಣಮೂಲ ಕಾಂಗ್ರೆಸ್‌ () ಪರ ಸಮೀಕ್ಷೆ ನಡೆಸಲು ಈ ತಂಡ ತ್ರಿಪುರಾಗೆ ಬಂದಿಳಿದಿತ್ತು. ಬಿಜೆಪಿ ಆಡಳಿತದ ತ್ರಿಪುರಾದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಟಿಎಂಸಿಗೆ ಇರುವ ಬೆಂಬಲವನ್ನು ತಿಳಿದುಕೊಳ್ಳಲು ತಂಡ ಉದ್ದೇಶಿಸಿತ್ತು. ಆದರೆ ಪೊಲೀಸರು ಹೋಟೆಲ್‌ನಲ್ಲೇ ತಂಡಕ್ಕೆ ದಿಗ್ಬಂಧನ ಹಾಕಿದ್ದು, ಪ್ರವೇಶ ದ್ವಾರದಲ್ಲಿ ಬೀಡು ಬಿಟ್ಟಿದ್ದಾರೆ. ವಶಕ್ಕೆ ಪಡೆದಿರುವುದಕ್ಕೆ ಯಾವುದೇ ಸ್ಪಷ್ಟ ಕಾರಣವನ್ನು ಪೊಲೀಸರು ನೀಡಿಲ್ಲ. ಆದರೆ ತಂಡ ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂದಷ್ಟೇ ಪೊಲೀಸರು ಹೇಳಿದ್ದಾರೆ. ಇದನ್ನು ತಳ್ಳಿ ಹಾಕಿರುವ ಐ-ಪ್ಯಾಕ್‌ ತಂಡ, ಕೊರೊನಾಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿಯಲ್ಲಿವೆ ಎಂದು ಆಂಗ್ಲ ವಾಹಿನಿಯೊಂದಕ್ಕೆ ಮಾಹಿತಿ ನೀಡಿದೆ. ಸೋಮವಾರ ಸಂಜೆ ಮಮತಾ ಬ್ಯಾನರ್ಜಿ ದಿಲ್ಲಿಗೆ ಬಂದಿಳಿಯಲಿದ್ದು, ಇದೇ ವೇಳೆ ಈ ಸುದ್ದಿಯೂ ಹೊರಬಿದ್ದಿದೆ.' ಇದೊಂದು ಪ್ರಜಾಪ್ರಭುತ್ವದ ಮೇಲಿನ ದಾಳಿ' ಎಂದು ಟಿಎಂಸಿ ರಾಜ್ಯಾಧ್ಯಕ್ಷ ಆಶಿಷ್‌ ಲಾಲ್‌ ಸಿಂಘಾ ಕಿಡಿಕಾರಿದ್ದಾರೆ.