ಕಲ್ಲಿದ್ದಲು ಆಮದು ಹೆಚ್ಚಳಕ್ಕೆ ನಿರ್ಧಾರ, ಪ್ರಧಾನಿ ಮೋದಿ ಜತೆ ಪ್ರಲ್ಹಾದ್‌ ಜೋಶಿ, ಆರ್‌.ಕೆ.ಸಿಂಗ್‌ ಚರ್ಚೆ

ಪ್ರಧಾನಿ ಮೋದಿ ಅವರನ್ನು ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ ಹಾಗೂ ಇಂಧನ ಸಚಿವ ಆರ್‌.ಕೆ. ಸಿಂಗ್‌ ಮಂಗಳವಾರ ಭೇಟಿ ಮಾಡಿ ಕಲ್ಲಿದ್ದಲು ಸಮಸ್ಯೆ ಕುರಿತು ಸಮಾಲೋಚನೆ ನಡೆಸಿದ್ದು, ಕೇಂದ್ರ ಸರಕಾರವು ಮತ್ತೆ ಕಲ್ಲಿದ್ದಲು ಆಮದು ಹೆಚ್ಚಿಸಲು ನಿರ್ಧರಿಸಿದೆ.

ಕಲ್ಲಿದ್ದಲು ಆಮದು ಹೆಚ್ಚಳಕ್ಕೆ ನಿರ್ಧಾರ, ಪ್ರಧಾನಿ ಮೋದಿ ಜತೆ ಪ್ರಲ್ಹಾದ್‌ ಜೋಶಿ, ಆರ್‌.ಕೆ.ಸಿಂಗ್‌ ಚರ್ಚೆ
Linkup
ಹೊಸದಿಲ್ಲಿ: ದೇಶಾದ್ಯಂತ ಕೊರತೆಯ ಕೂಗು ಏಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರಕಾರವು ಮತ್ತೆ ಕಲ್ಲಿದ್ದಲು ಆಮದು ಹೆಚ್ಚಿಸಲು ಮಂಗಳವಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಲ್ಲಿದ್ದಲು ಸಚಿವ ಹಾಗೂ ಇಂಧನ ಸಚಿವ ಆರ್‌.ಕೆ. ಸಿಂಗ್‌ ಮಂಗಳವಾರ ಭೇಟಿ ಮಾಡಿ ಕಲ್ಲಿದ್ದಲು ಸಮಸ್ಯೆ ಕುರಿತು ಸಮಾಲೋಚನೆ ನಡೆಸಿದರು. ಕಲ್ಲಿದ್ದಲು ಸಮಸ್ಯೆ, ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ, "ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯೇರಿಕೆ ಹಾಗೂ ಭಾರಿ ಮಳೆಯಿಂದಾಗಿ ಕಲ್ಲಿದ್ದಲು ಸಮಸ್ಯೆಯುಂಟಾಗಿತ್ತು. ಆಮದು ಕಲ್ಲಿದ್ದಲು ಘಟಕಗಳು 20 ದಿನ ಸ್ಥಗಿತಗೊಂಡಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಟನ್‌ಗೆ 60 ರೂ. ಇದ್ದುದು ಏಕಾಏಕಿ 190 ರೂ.ಗೆ ಏರಿಕೆಯಾಗಿದೆ. ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕೇಂದ್ರ ಸರಕಾರ ಮುಂದಡಿ ಇಟ್ಟಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ," ಎಂದು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಸಚಿವರ ಜತೆಗೆ ಇಂಧನ ಕಾರ್ಯದರ್ಶಿ ಅಲೋಕ್‌ ಕುಮಾರ್‌ ಹಾಗೂ ಕಲ್ಲಿದ್ದಲು ಕಾರ್ಯದರ್ಶಿ ಎ.ಕೆ. ಜೈನ್‌ ಅವರು ಸಹ ಕಲ್ಲಿದ್ದಲು ದಾಸ್ತಾನು ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, 2020 - 2021ನೇ ಹಣಕಾಸು ವರ್ಷದ ಕೊನೆಗೆ ಕೋಲ್‌ ಇಂಡಿಯಾ ದಾಸ್ತಾನು 90 ದಶಲಕ್ಷ ಟನ್‌ ಇತ್ತು. ಆದರೆ, ಇದೇ ವರ್ಷದ ಏಪ್ರಿಲ್‌ನಿಂದ ಘಟಕಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕಲ್ಲಿದ್ದಲು ಸಮಸ್ಯೆಯುಂಟಾಗಿದೆ ಎಂದು ತಿಳಿದುಬಂದಿದೆ. ಯೂನಿಟ್‌ಗೆ 14.5 ರೂ. ಕೊಟ್ಟು ಪಂಜಾಬ್‌ ವಿದ್ಯುತ್‌ ಖರೀದಿ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಸಮಸ್ಯೆಯಿಂದಾಗಿ ಪಂಜಾಬ್‌ ತತ್ತರಿಸಿ ಹೋಗಿದ್ದು, ವಿದ್ಯುತ್‌ ಕಡಿತದ ಸಸಮಸ್ಯೆ ನಿವಾರಿಸಲು ಸರಕಾರವು ಒಂದು ಯೂನಿಟ್‌ಗೆ 14.56 ರೂ.ನಂತೆ 1,500 ಮೆಗಾವ್ಯಾಟ್‌ ವಿದ್ಯುತ್‌ ಖರೀದಿಸಿದೆ. ಅತ್ತ, ಆಂಧ್ರ ಪ್ರದೇಶದಲ್ಲಿ ಸಹ ಸರಕಾರ ಯೂನಿಟ್‌ಗೆ 15 ರೂ. ನೀಡಿ ವಿದ್ಯುತ್‌ ಖರೀದಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯುಂಟಾದ ಕಾರಣ ರಾಜ್ಯದಲ್ಲಿ ಅನಿಯಮಿತವಾಗಿ ವಿದ್ಯುತ್‌ ಕಡಿತವಾಗುತ್ತಿರುವ ಕಾರಣ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉದ್ಯಮಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಬೆಲೆ ತೆತ್ತು ಪಂಜಾಬ್‌ ವಿದ್ಯುತ್‌ ಖರೀದಿಸಿದೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್‌, ಆಂಧ್ರ ಪ್ರದೇಶ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಕಲ್ಲಿದ್ದಲು ಸಮಸ್ಯೆಯುಂಟಾಗಿದ್ದು, ಕತ್ತಲೆಯ ಭೀತಿ ಕಾಡುತ್ತಿದೆ. ಕಲ್ಲಿದ್ದಲು ಅಭಾವದ ದುರ್ಲಾಭ ಪಡೆದು ವಿದ್ಯುತ್‌ ದರ ಹೆಚ್ಚಳ ಮಾಡದಂತೆ ಕೇಂದ್ರ ಸರಕಾರವು ಖಾಸಗಿ ಉತ್ಪಾದಕರಿಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.