ಪರ್ಯಾಯ ಹೂಡಿಕೆ ಫಂಡ್‌ಗಳಲ್ಲಿ 5% ಹೂಡಿಕೆಗೆ 'ಇಪಿಎಫ್‌ಒ'ಗೆ ಅವಕಾಶ

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಪರ್ಯಾಯ ಹೂಡಿಕೆಯ ಫಂಡ್‌ಗಳಲ್ಲಿ ತನ್ನ ವಾರ್ಷಿಕ ಠೇವಣಿಯ ಶೇ. 5ರ ತನಕದ ಹೂಡಿಕೆಗೆ ಅವಕಾಶ ನೀಡುವ ಸರಕಾರದ ಪ್ರಸ್ತಾಪವನ್ನು ಅನುಮೋದಿಸಿದೆ.

ಪರ್ಯಾಯ ಹೂಡಿಕೆ ಫಂಡ್‌ಗಳಲ್ಲಿ 5% ಹೂಡಿಕೆಗೆ 'ಇಪಿಎಫ್‌ಒ'ಗೆ ಅವಕಾಶ
Linkup
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ , ಪರ್ಯಾಯ ಹೂಡಿಕೆಯ ಫಂಡ್‌ಗಳಲ್ಲಿ (ಎಐಎಫ್‌) ತನ್ನ ವಾರ್ಷಿಕ ಠೇವಣಿಯ ಶೇ. 5ರ ತನಕದ ಹೂಡಿಕೆಗೆ ಸರಕಾರದ ಪ್ರಸ್ತಾಪವನ್ನು ಅನುಮೋದಿಸಿದೆ. ಇದರಿಂದ ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್‌ಗಳು ಸೇರಿದಂತೆ ಪರ್ಯಾಯ ಹೂಡಿಕೆಯ ಫಂಡ್‌ಗಳಲ್ಲಿ ಹೂಡಿಕೆಗೆ ಹಾದಿ ಸುಗಮವಾಗಿದೆ. ಉದ್ಯೋಗಿಗಳ ಪಿಂಚಣಿ, ಸಾಮಾಜಿಕ ಭದ್ರತೆ, ಡಿಜಿಟಲ್‌ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿ ಗ್ರಾಹಕ ಸ್ನೇಹಿಯಾಗಲು 4 ಉಪ ಸಮಿತಿಗಳನ್ನು ರಚಿಸಲು ಇಪಿಎಫ್‌ಒ ನಿರ್ಧರಿಸಿದೆ. ಸರಕಾರಿ ಬೆಂಬಲಿತ ಪರ್ಯಾಯ ಹೂಡಿಕೆ ಫಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಲಾಗುವುದು ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಕಾರ್ಯದರ್ಶಿ ಸುನಿಲ್‌ ಭರತ್‌ವಾಲ್‌ ತಿಳಿಸಿದ್ದಾರೆ. ಎಐಎಫ್‌ಗಳಲ್ಲಿ ಶೇ. 5 ಹೂಡಿಕೆ ಎಂದರೆ 10,000 ಕೋಟಿ ರೂ.ಗಳಾಗಲಿದೆ. ಇಪಿಎಫ್‌ಒದ ನಿಧಿ ಬೆಳವಣಿಗೆಯಾಗುತ್ತಿದ್ದು, ಇದನ್ನು ವೈವಿಧ್ಯಮಯ ಹೂಡಿಕೆಯ ಸಾಧನಗಳಲ್ಲಿ ಹೂಡಿಕೆ ಮಾಡಬೇಕಾದ ಅಗತ್ಯ ಇದೆ. ಮುಖ್ಯವಾಗಿ ಮೂಲ ಸೌಕರ್ಯ ಹೂಡಿಕೆಯ ಸಾಧನಗಳಲ್ಲಿ ದೀರ್ಘಕಾಲೀನವಾಗಿ ಹೂಡಿಕೆಗೆ ಬೇಡಿಕೆ ಇದೆ. ಸೆಬಿಯು ಮೂಲಸೌಕರ್ಯ ಫಂಡ್‌ ಗಳನ್ನು (ಎಐಎಫ್‌) ನಿಯಂತ್ರಿಸುತ್ತದೆ. ಇಪಿಎಫ್‌ಒಗೆ ಸೆಪ್ಟೆಂಬರ್‌ನಲ್ಲಿ 15.4 ಲಕ್ಷ ಉದ್ಯೋಗಿಗಳ ಸೇರ್ಪಡೆ ದೇಶದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಔಪಚಾರಿಕ ಉದ್ಯೋಗಾವಕಾಶಗಳು ಚೇತರಿಸಿದ್ದು, ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒಗೆ ನಿವ್ವಳ 15.4 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ವೇತನ ಕುರಿತ ಇಪಿಎಫ್‌ಒ ಅಂಕಿ ಅಂಶಗಳ ಪ್ರಕಾರ, 2020ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷ ನಿವ್ವಳ ಉದ್ಯೋಗಿಗಳ ಸೇರ್ಪಡೆ ಶೇ. 3ರಷ್ಟು ಏರಿಕೆಯಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ 14.9 ಲಕ್ಷ ನಿವ್ವಳ ಮಂದಿ ಸೇರ್ಪಡೆಯಾಗಿದ್ದರು. ಆಗಸ್ಟ್‌ಗೆ ಹೋಲಿಸಿದರೆ 18 ಸಾವಿರ ಹೆಚ್ಚಳವಾಗಿದೆ. ಆಗ 13.6 ಲಕ್ಷ ಹೊಸ ಚಂದಾದಾರರು ಸೇರಿದ್ದರು. 22 - 25 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿದ್ದಾರೆ. 18 - 21 ವರ್ಷದವರು ನಂತರದ ಸ್ಥಾನದಲ್ಲಿದ್ದಾರೆ. ಮಹಾರಾಷ್ಟ್ರ, ಹರಿಯಾಣ, ಗುಜರಾತ್‌, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇಪಿಎಫ್‌ಒಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದಾರೆ.