ಬೆಂಗಳೂರಿನ ನಿಂಜಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌, ವಾಲ್‌ಮಾರ್ಟ್‌ನಿಂದ 1,100 ಕೋಟಿ ರೂ. ಹೂಡಿಕೆ

ಬೆಂಗಳೂರು ಮೂಲದ ಸ್ಟಾರ್ಟಪ್‌ ನಿಂಜಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌ ಮಾಡುತ್ತಿರುವ ಮೂರನೇ ಹೂಡಿಕೆ ಇದಾಗಿದೆ. 2019ರಲ್ಲಿ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ ಹಣ ಹೂಡಿಕೆ ಮಾಡಿತ್ತು. ಬಳಿಕ ಕಳೆದ ವರ್ಷ ಸುಮಾರು 228 ಕೋಟಿ ರೂ. ಹಣವನ್ನು ನಿಂಜಕಾರ್ಟ್‌ನಲ್ಲಿ ಇನ್ವೆಸ್ಟ್‌ ಮಾಡಿತ್ತು.

ಬೆಂಗಳೂರಿನ ನಿಂಜಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌, ವಾಲ್‌ಮಾರ್ಟ್‌ನಿಂದ 1,100 ಕೋಟಿ ರೂ. ಹೂಡಿಕೆ
Linkup
ಪೂರೈಕೆ ಸರಣಿಯ ಕಂಪನಿ ನಿಂಜಕಾರ್ಟ್‌ನಲ್ಲಿ ಬರೋಬ್ಬರಿ 1,100 ಕೋಟಿ ರೂ. (145 ಮಿಲಿಯನ್‌ ಡಾಲರ್‌) ಹೂಡಿಕೆ ಮಾಡಲು ಮತ್ತು ಅದರ ಮಾತೃಸಂಸ್ಥೆ ಐಎನ್‌ಸಿ ನಿರ್ಧರಿಸಿವೆ. ಅಗ್ರಿಟೆಕ್‌ ವಲಯದ ಬೃಹತ್‌ ಡೀಲ್‌ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ನಿಂಜಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್‌ ಮಾಡುತ್ತಿರುವ ಮೂರನೇ ಹೂಡಿಕೆ ಇದಾಗಿದೆ. ಬೆಂಗಳೂರು ಮೂಲದ ಸ್ಟಾರ್ಟಪ್‌ ನಿಂಜಕಾರ್ಟ್‌ನಲ್ಲಿ 2019ರಲ್ಲಿ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ ಹಣ ಹೂಡಿಕೆ ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಎಷ್ಟು ಮೊತ್ತ ಹೂಡಿಕೆ ಮಾಡಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ನಂತರ 30 ಮಿಲಿಯನ್‌ ಡಾಲರ್ (ಸುಮಾರು 228 ಕೋಟಿ ರೂ.) ಹಣವನ್ನು ಕಳೆದ ವರ್ಷ ಹೂಡಿಕೆ ಮಾಡಿತ್ತು. ಮೂರನೇ ಹೂಡಿಕೆ ಬಗ್ಗೆ ಸೋಮವಾರವೇ 'ಎಕನಾಮಿಕ್‌ ಟೈಮ್ಸ್‌' ವರದಿ ಮಾಡಿತ್ತು. ಈ ಡೀಲ್‌ನೊಂದಿಗೆ ನಿಂಜಕಾರ್ಟ್‌ ಮಾರುಕಟ್ಟೆ ಮೌಲ್ಯ 750 - 800 ಮಿಲಿಯನ್‌ ಡಾಲರ್‌ (ಸುಮಾರು 6,000 ಕೋಟಿ ರೂ.)ಗೆ ಏರಿಕೆಯಾಗಲಿದೆ ಎಂದು ಪತ್ರಿಕೆ ಹೇಳಿತ್ತು. ಕಳೆದ ಹೂಡಿಕೆ ವೇಳೆ ಕಂಪನಿಯ ಮಾರುಕಟ್ಟೆ ಮೌಲ್ಯ 500 ಮಿಲಿಯನ್‌ ಡಾಲರ್‌ ಇತ್ತು. ಫ್ಲಿಪ್‌ಕಾರ್ಟ್‌ 90 ನಿಮಿಷಗಳೊಳಗೆ ಮನೆಬಾಗಿಲಿಗೆ ದಿನಸಿ ತಲುಪಿಸುವ ತನ್ನ ‘ಫ್ಲಿಪ್‌ಕಾರ್ಟ್‌ ಕ್ವಿಕ್‌’ ಉದ್ಯಮವನ್ನು 2022ರ ಅಂತ್ಯದ ವೇಳೆಗೆ 200 ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಇದೇ ಸಂರ್ಭದಲ್ಲಿ ಈ ಮಹತ್ವದ ಡೀಲ್‌ ನಡೆದಿದೆ. ನಿಂಜಾಕಾರ್ಟ್ ಮೇಲಿನ ಹೂಡಿಕೆ ಮೂಲಕ ತನ್ನ ವ್ಯಾಪಕ ದಿನಸಿ ಉತ್ಪನ್ನಗಳು ಲಭ್ಯವಿರುವ ಸೂಪರ್‌ಮಾರ್ಟ್ ಅನ್ನು ಬಲಪಡಿಸಲು ಸಹ ಫ್ಲಿಪ್‌ಕಾರ್ಟ್‌ ಮುಂದಾಗಲಿದೆ. “ಈ ಹೂಡಿಕೆಯೊಂದಿಗೆ, ನಾವು ನಮ್ಮ ಕಿರಾಣಿ ಹೆಜ್ಜೆಗುರುತನ್ನು ಬಲಪಡಿಸಲು ಸಾಧ್ಯವಾಗುತ್ತದೆ ಮತ್ತು ತಾಜಾ ದಿನಸಿ ವರ್ಗದಲ್ಲಿ ಗುಣಮಟ್ಟದ ಮತ್ತು ಕೈಗೆಟುಕುವ ದರದ ಆಯ್ಕೆಗಳಿಗಾಗಿ ಗ್ರಾಹಕರು ಇ-ಗ್ರೋಸರಿಗೆ ಬರಲಿದ್ದಾರೆ," ಎಂದು ಫ್ಲಿಪ್‌ಕಾರ್ಟ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ. "ಕಳೆದ ಹಲವು ವರ್ಷಗಳಲ್ಲಿ ನಿಂಜಕಾರ್ಟ್‌ನಲ್ಲಿ ನಾವು ಮಾಡುತ್ತಾ ಬಂದಿರುವ ಹೂಡಿಕೆ ಮತ್ತು ಪಾಲುದಾರಿಕೆಯು ಸಂಘಟಿತ ಕೃಷಿ ಮಾರುಕಟ್ಟೆಯನ್ನು ರಚಿಸುವ ನಮ್ಮ ಪ್ರಯತ್ನದಲ್ಲಿ ನಾವು ಕಂಡ ನಿರಂತರ ಬದ್ಧತೆ ಮತ್ತು ಯಶಸ್ಸಿಗೆ ಸಾಕ್ಷಿಯಾಗಿದೆ," ಎಂದು ಅವರು ವಿವರಿಸಿದ್ದಾರೆ. 2015ರಲ್ಲಿ ಸ್ಥಾಪನೆಯಾದ ನಿಂಜಾಕಾರ್ಟ್ ಪ್ರಸ್ತುತ ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ದಿಲ್ಲಿ ಮತ್ತು ಮುಂಬೈ ಸೇರಿದಂತೆ ಏಳು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನೇರವಾಗಿ ರೈತರಿಂದ ಸಂಗ್ರಹಿಸುತ್ತದೆ ಮತ್ತು ಚಿಲ್ಲರೆ ವ್ಯಾಪಾರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ಸರಬರಾಜು ಮಾಡುತ್ತದೆ. "ಈ ಹೂಡಿಕೆಯು, ರೈತರಿಂದ ಚಿಲ್ಲರೆ ವ್ಯಾಪಾರಿಗಳ ನಡುವಿನ ವ್ಯವಸ್ಥೆಯನ್ನು ಸಂಘಟಿಸುವುದನ್ನು ಮೀರಿ, ಸಂಪೂರ್ಣ ಕೃಷಿ ಪರಿಸರ ವ್ಯವಸ್ಥೆಯನ್ನು ಸಂಘಟಿಸುವ ಮತ್ತು ಪಾರದರ್ಶಕ ವ್ಯಾಪಾರವನ್ನು ಸಕ್ರಿಯಗೊಳಿಸುವ ದೊಡ್ಡ ಗುರಿಯತ್ತ ಕನಸು ಕಾಣಲು ನಮಗೆ ಅನುವು ಮಾಡಿಕೊಡುತ್ತದೆ," ಎಂದು ನಿಂಜಕಾರ್ಟ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ತಿರುಕುಮಾರನ್ ನಾಗರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫ್ಲಿಪ್‌ಕಾರ್ಟ್‌ ತನ್ನ ದಿನಸಿ ಉದ್ಯಮವನ್ನು ವಿಸ್ತರಿಸಲು ಉದ್ದೇಶಿಸಿದೆ ಎಂದು 'ಇಟಿ' ಸೋಮವಾರವೇ ವರದಿ ಮಾಡಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೋಮಾರ್ಟ್‌, ಅಮೆಜಾನ್‌ ಇಂಡಿಯಾ ಮತ್ತು ಟಾಟಾ ಮಾಲಿಕತ್ವದ ಬಿಗ್‌ಬಾಸ್ಕೆಟ್‌ನಿಂದ ಕಂಪನಿ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಜತೆಗೆ ಸ್ವಿಗ್ಗೀಸ್‌ ಇನ್‌ಸ್ಟಾಮಾರ್ಟ್‌, ಡುಂಜೋ ಡೈಲಿ ಮತ್ತು ಹೊಸ ಪ್ರವೇಶ ಝೆಪ್ಟೋ ಕೂಡ ಇದೇ ವಲಯದಲ್ಲಿ ಸ್ಪರ್ಧೆಗಿಳಿದಿವೆ. 1,800 ನಗರಗಳು ಮತ್ತು ಪಟ್ಟಣಗಳಲ್ಲಿ ದಿನಸಿ ಸೇವೆಯನ್ನು ನೀಡುತ್ತಿದ್ದೇವೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದ್ದು, ಮುಂದಿನ ವರ್ಷದ ಮಧ್ಯಭಾಗದಲ್ಲಿ ಸುಮಾರು 2,000ಕ್ಕೂ ಹೆಚ್ಚಿನ ಪಟ್ಟಣಗಳಿಗೆ ಈ ಸೇವೆಯನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.