![](https://vijaykarnataka.com/photo/86755496/photo-86755496.jpg)
ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿರುವ ಕ್ರಿಪ್ಟೋಕರೆನ್ಸಿಗಳು ಭಾರತದಲ್ಲೂ ತ್ವರಿತವಾಗಿ ಬಳಕೆದಾರರನ್ನು ಸೆಳೆಯುತ್ತಿದೆ. ಇದೀಗ ಹಲವು ಸರಕುಗಳ ಖರೀದಿಗೆ ಅಥವಾ ಫಾಸ್ಟ್ಯಾಗ್ ರೀಚಾರ್ಜ್ ನಂತಹ ಸೇವೆಗಳಿಗೂ ಬಿಟ್‌ಕಾಯಿನ್ ಅಥವಾ ಇತರೆ ಬಳಸಬಹುದಾಗಿದೆ. ಅಂದರೆ, ಭಾರತದಲ್ಲಿ ನಿಧಾನವಾಗಿ ಕ್ರಿಪ್ಟೋ ಪೇಮೆಂಟ್ ವ್ಯವಸ್ಥೆ ಚಾಲ್ತಿಗೆ ಬರುತ್ತಿದೆ.
ಭಾರತದಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಆರ್ಥಿಕತೆಯಲ್ಲಿ ಕ್ರಿಪ್ಟೋಕರೆನ್ಸಿ ಬಳಕೆ ಹೆಚ್ಚುತ್ತಿದೆ. ಸಣ್ಣ ಪ್ರಮಾಣದ ಹಾಗೂ ಈಗಷ್ಟೇ ಬೆಳೆಯುತ್ತಿರುವ ಉದ್ದಿಮೆಗಳ ನಡುವೆ ಪಾವತಿ ವಿಧಾನವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.
ಭಾರತದಲ್ಲಿ ಡಿಜಿಟಲ್ ಕರೆನ್ಸಿಗಳ ಭಾರೀ ಜನಪ್ರಿಯತೆ ಬೆನ್ನಲ್ಲೇ ಹಲವು ಉದ್ದಿಮೆಗಳು ತಮ್ಮ ಸರಕು ಮತ್ತು ಸೇವೆಗಳಿಗೆ ಬಿಟ್‌ಕಾಯಿನ್, ಎಥೆರಿಯಮ್, ಸೊಲಾನಾ ಮತ್ತು ಇತರೆ ಕ್ರಿಪ್ಟೋ ಟೋಕನ್‌ಗಳನ್ನು ಪಾವತಿ ರೂಪದಲ್ಲಿ ಸ್ವೀಕರಿಸಲು ಆರಂಭಿಸಿವೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ದೇಶದಲ್ಲಿ ಬಹುತೇಕ ಎಲ್ಲರಿಗೂ ಕ್ರಿಪ್ಟೋಕರೆನ್ಸಿಗಳ ಬಳಕೆ ಬಗ್ಗೆ ಗೊತ್ತಾಗಿದೆ. ಒಬ್ಬ ಫಿಟ್‌ನೆಸ್ ತರಬೇತುದಾರರಿಂದ ಹಿಡಿದು ಟ್ಯಾಟೂ ಪಾರ್ಲರ್ ಮಾಲೀಕರವರೆಗೆ ಕ್ರಿಪ್ಟೋಕರೆನ್ಸಿ ಬಳಕೆ ಮಾಡುವುದು ಹೇಗೆಂಬುದು ತಿಳಿದಿದೆ.
ಆದರೆ, ಭಾರತದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಭಾರತದಲ್ಲಿ ಪಾವತಿಗಳಿಗಾಗಿ ಕ್ರಿಪ್ಟೋ ಕರೆನ್ಸಿ ಬಳಕೆಯನ್ನು ಕಾನೂನುಬದ್ಧ ಮಾನ್ಯತೆಯೂ ಇಲ್ಲ. ಹಾಗೆಂದ ಮಾತ್ರಕ್ಕೆ ಇದನ್ನು ಕಾನೂನುಬಾಹಿರ ಎಂದೂ ಘೋಷಿಸಿಲ್ಲ. ಹೀಗಿದ್ದರೂ ಕ್ರಿಪ್ಟೋ ವಹಿವಾಟುಗಳು ಭಾರೀ ಪ್ರಮಾಣದಲ್ಲಿ ಬೆಳೆಯುವುದನ್ನು ತಡೆಯಲಾಗಿಲ್ಲ.
ಭಾರತದ ಅತ್ಯಂತ ಹಳೆಯ ಕ್ರಿಪ್ಟೋ ಎಕ್ಸ್‌ಚೇಂಜ್ 'ಯುನೊಕೊಯಿನ್' (Unocoin) ತನ್ನ ಬಳಕೆದಾರರಿಗೆ ಬಿಟ್‌ಕಾಯಿನ್ ಬಳಸಿ ತಮ್ಮ ಫಾಸ್ಟ್ಯಾಗ್ ಖಾತೆಗಳನ್ನು ರೀಚಾರ್ಜ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಬಿಲ್ ಪಾವತಿಗಳು ಮತ್ತು ಇ-ಕಾಮರ್ಸ್‌ಗಾಗಿ ಬಿಟ್‌ಕಾಯಿನ್ ವಹಿವಾಟುಗಳನ್ನು ಸಹ ಅನುಮತಿಸುತ್ತಿದೆ.
ಬಳಸಿ ಫಾಸ್ಟ್ಯಾಗ್ ಟಾಪ್-ಅಪ್ ಮಾಡಲು ಅವಕಾಶ ನೀಡಿದಾಗಿನಿಂದ ಎಕ್ಸ್‌ಚೇಂಜ್‌ನಲ್ಲಿ ಕನಿಷ್ಠ 8 ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಹಣ ವರ್ಗಾವಣೆಗಳನ್ನು ಗ್ರಾಹಕರು ನಡೆಸಿದ್ದಾರೆ. ಈ ಪೈಕಿ ಶೇ.50 ರಷ್ಟು ಮಂದಿ 35 ವರ್ಷಕ್ಕಿಂತ ಮೇಲ್ಪಟ್ಟವರೇ ಇದ್ದಾರೆ ಎಂದು ಯೂನೋಕಾಯಿನ್‌ನ ಸಂಸ್ಥಾಪಕ , ಸಾತ್ವಿಕ್ ವಿಶ್ವನಾಥ್ ಅವರು ಎಕಾನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಯೂನೋಕಾಯಿನ್ ಎಕ್ಸ್‌ಚೇಂಜ್ ಬಿಟ್ ಕಾಯಿನ್ ಸೃಷ್ಟಿಯ ಹಿಂದಿನ ಉದ್ದೇಶವನ್ನು ಪುನರುಜ್ಜೀವನಗೊಳಿಸಲು ಬಯಸುತ್ತದೆ. ಇದು ಮಧ್ಯವರ್ತಿ ಇಲ್ಲದೆ ಪ್ರಪಂಚದ ಯಾವ ಭಾಗದಿಂದಲಾದರೂ "ತ್ವರಿತ ಮತ್ತು ಉಚಿತ ಪಾವತಿ"ಗೆ ಕಾರಣವಾಗಿದೆ. ಅಲ್ಲದೆ ಇದರ ಬಳಕೆಯನ್ನು ಚಿಲ್ಲರೆ ವ್ಯಾಪಾರಿಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ.
ಕಂಪನಿಯು ಪಾವತಿಗಳನ್ನು ಆಯ್ಕೆ ಮಾಡುವ ಬಳಕೆದಾರರಿಂದ ಬಿಟ್‌ಕಾಯಿನ್ ಖರೀದಿಸುತ್ತದೆ ಮತ್ತು ಪಾಲುದಾರ ಮಾರಾಟಗಾರರೊಂದಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ವಹಿವಾಟುಗಳನ್ನು ಇತ್ಯರ್ಥಪಡಿಸುತ್ತದೆ. ಆದರೆ, "ಇತ್ತೀಚಿನ ದಿನಗಳಲ್ಲಿ, ಕ್ರಿಪ್ಟೋಕರೆನ್ಸಿಗಳನ್ನು ಆದಾಯದ ಮೂಲ ಅಥವಾ ಒಂದು ಆಸ್ತಿಯಾಗಿ ನೋಡುವವರು ಹೆಚ್ಚಾಗಿದ್ದಾರೆ.
ಎಕ್ಸ್‌ಚೇಂಜ್‌ನಲ್ಲಿ ಫಾಸ್ಟ್ಯಾಗ್ ಟಾಪ್‌ಅಪ್‌ಗೆ ಕ್ರಿಪ್ಟೋಕರೆನ್ಸಿ ಬಳಕೆಗೆ ಅವಕಾಶ ನೀಡುವ ಮೂಲಕ ಬೃಹತ್ ಪ್ರಮಾಣದ ಗ್ರಾಹಕರನ್ನು ಸೆಳೆಯಲು ಉದ್ದೇಶಿದೆ ಎಂದು ವಿಶ್ವನಾಥ್ ಹೇಳಿದರು.
ಭಾರತೀಯ ವಾಣಿಜ್ಯ ಸಮುದಾಯದಿಂದ ಕ್ರಿಪ್ಟೋ ಕರೆನ್ಸಿಗೆ ಬೆಂಬಲವಿದೆ ಎಂದು ಸರಕಾರಕ್ಕೆ ಮನದಟ್ಟು ಮಾಡಲು ಕಂಪನಿ ಬಯಸುತ್ತದೆ ಎಂದು ಮನೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಭಾರತೀಯ ಅಲಂಕಾರಿಕ ಬ್ರ್ಯಾಂಡ್ 'ದಿ ರಗ್ ರಿಪಬ್ಲಿಕ್' ನ ನಿರ್ದೇಶಕ ರಾಘವ್ ಗುಪ್ತಾ ಹೇಳಿದ್ದಾರೆ.
ವಿಶ್ವಾಸಾರ್ಹ ವ್ಯವಹಾರಗಳನ್ನು ಮಾಡಲು ಸಿದ್ಧವಾಗಿದ್ದಾಗ ಮಾತ್ರ ನೀವು ಸರಕಾರದಿಂದ ಅನುಕೂಲಕರ ಕಾನೂನುಗಳನ್ನು ನಿರೀಕ್ಷಿಸಬಹುದು. ಇತ್ತೀಚೆಗಷ್ಟೇ ರಫ್ತು ಉದ್ಯಮದಲ್ಲಿ ತೊಡಗಿರುವ ಗುಪ್ತಾ ಅವರು, ತಮ್ಮ ವಹಿವಾಟಿಗೆ ಕ್ರಿಪ್ಟೋ ಕರೆನ್ಸಿಗಳನ್ನು ಪಾವತಿಯನ್ನು ಅಳವಡಿಸಿಕೊಳ್ಳಲು ತಮ್ಮ ತಂದೆಗೆ ಮನವರಿಕೆ ಮಾಡಿದ್ದಾರೆ.
"ಸರ್ಕಾರವು ಕ್ರಿಪ್ಟೋ ನಿಯಮಾವಳಿಗಳ ರಚನೆಗೆಂದೇ ಒಂದು ಸಮಿತಿಯನ್ನು ರಚಿಸಿದೆ. ನಮ್ಮಂತಹ ಬ್ರಾಂಡ್‌ಗಳು ಮತ್ತು ಇನ್ನೂ ಅನೇಕರು ಇದನ್ನು ಅಳವಡಿಸಿಕೊಂಡರೆ, ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ನಿಜಕ್ಕೂ ಭವಿಷ್ಯವಿದೆ ಎಂದು ನನಗೆ ವಿಶ್ವಾಸವಿದೆ" ಎಂದು ಗುಪ್ತಾ ಹೇಳಿದ್ದಾರೆ.