ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ, ಹೊಸ ಗ್ರಾಹಕರನ್ನು ಸ್ವೀಕರಿಸದಂತೆ ಸೂಚನೆ

ಡೆಬಿಟ್‌, ಕ್ರೆಡಿಟ್‌ ಹಾಗೂ ಪ್ರಿಪೇಯ್ಡ್‌ ಮೂರು ವಿಭಾಗಗಳ ಅಡಿಯಲ್ಲಿ ಜುಲೈ 22ರಿಂದ ಹೊಸ ಗ್ರಾಹಕರನ್ನು ಸ್ವೀಕರಿಸದಂತೆ ಪಾವತಿ ವ್ಯವಸ್ಥೆ ನಿರ್ವಹಿಸುವ ಮಾಸ್ಟರ್‌ ಕಾರ್ಡ್‌ಗೆ ಆರ್‌ಬಿಐ ಸೂಚಿಸಿದೆ.

ಮಾಸ್ಟರ್‌ಕಾರ್ಡ್‌ಗೆ ಆರ್‌ಬಿಐ ನಿರ್ಬಂಧ, ಹೊಸ ಗ್ರಾಹಕರನ್ನು ಸ್ವೀಕರಿಸದಂತೆ ಸೂಚನೆ
Linkup
ಹೊಸದಿಲ್ಲಿ: ದೇಶದಲ್ಲಿ ಹೊಸ ಗ್ರಾಹಕರನ್ನು ಸ್ವೀಕರಿಸಿದಂತೆ ಮಾಸ್ಟರ್‌ಕಾರ್ಡ್‌ಗೆ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬುಧವಾರ ನಿರ್ಬಂಧ ಹೇರಿದೆ. ಜುಲೈ 22ರ ನಂತರ ಹೊಸ ಗ್ರಾಹಕರನ್ನು ಸ್ವೀಕರಿಸಬಾರದು ಎಂದು ಹೇಳಿದೆ. ಡೆಬಿಟ್‌, ಕ್ರೆಡಿಟ್‌ ಹಾಗೂ ಪ್ರಿಪೇಯ್ಡ್‌ ಮೂರು ವಿಭಾಗಗಳ ಅಡಿಯಲ್ಲಿ ಹೊಸ ಗ್ರಾಹಕರನ್ನು ಸ್ವೀಕರಿಸದಂತೆ ಮಾಸ್ಟರ್‌ ಕಾರ್ಡ್‌ಗೆ ದೇಶದ ಕೇಂದ್ರೀಯ ಬ್ಯಾಂಕ್‌ ಸೂಚಿಸಿದೆ. ಪಾವತಿ ವ್ಯವಸ್ಥೆಯ ದತ್ತಾಂಶಗಳ ಸಂಗ್ರಹ ಸಂಬಂಧ ಕೇಂದ್ರ ಬ್ಯಾಂಕ್‌ನ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಮಾಸ್ಟರ್‌ಕಾರ್ಡ್‌ಗೆ ಈ ನಿರ್ಬಂಧ ವಿಧಿಸಲಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಾಸ್ಟರ್‌ಕಾರ್ಡ್‌ನ ಈಗಿರುವ ಗ್ರಾಹಕರ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಜತೆಗೆ ಕಾರ್ಡ್‌ ನೀಡುವ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆಯೂ ಮಾಸ್ಟರ್‌ಕಾರ್ಡ್‌ಗೆ ಸೂಚಿಸಿದೆ. ಸಾಕಷ್ಟು ಸಮಯ ಮತ್ತು ಆಯ್ಕೆಗಳನ್ನು ನೀಡಿಯೂ ‘ಪೇಮೆಂಟ್ ಸಿಸ್ಟಮ್ ಡೇಟಾ ಸ್ಟೋರೇಜ್‌’ ನಿಯಮಗಳನ್ನು ಪಾಲಿಸಿಲ್ಲ ಎಂದು ಆರ್‌ಬಿಐ ದೂರಿದೆ. 2018ರ ಏಪ್ರಿಲ್‌ನಲ್ಲಿ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದ ಆರ್‌ಬಿಐ, ಆರು ತಿಂಗಳ ಒಳಗಾಗಿ ಎಲ್ಲಾ ಪಾವತಿ ವ್ಯವಸ್ಥೆ ಪೂರೈಕೆದಾರರು ತಮ್ಮ ದತ್ತಾಂಶಗಳನ್ನು ಭಾರತದಲ್ಲಿಯೇ ಸಂಗ್ರಹಿಸಿ ಇಡಬೇಕು ಎಂದು ಸೂಚಿಸಿತ್ತು. ಆದರೆ ಇದನ್ನು ಮಾಸ್ಟರ್‌ಕಾರ್ಡ್‌ ಪಾಲಿಸಿರಲಿಲ್ಲ. ಈ ವರ್ಷದ ಆರಂಭದಲ್ಲಿ ಅಮೆರಿಕನ್‌ ಎಕ್ಸ್‌ಪ್ರೆಸ್‌, ಡಿನ್ನರ್ಸ್‌ ಕ್ಲಬ್‌ ಮೇಲಯೂ ಇದೇ ರೀತಿಯ ಕ್ರಮವನ್ನು ಆರ್‌ಬಿಐ ತೆಗೆದುಕೊಂಡಿತ್ತು.