ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮಸೇತು, ಎಂಬಿಬಿಎಸ್‌ಗೆ ಹೆಡ್ಗೆವಾರ್ , ದೀನ್ ದಯಾಳ್ ಪಠ್ಯ!

ಮಧ್ಯಪ್ರದೇಶ ಸರ್ಕಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮ ಸೇತು, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹೆಡ್ಗೆವಾರ್, ದೀನ್ ದಯಾಳ್ ಉಪಾಧ್ಯಾಯ, ಅಂಬೇಡ್ಕರ್ ಜೀವನಚರಿತ್ರೆಗಳನ್ನು ಪಠ್ಯಕ್ರಮವನ್ನಾಗಿ ಅಳವಡಿಸಲು ಮುಂದಾಗಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮಸೇತು, ಎಂಬಿಬಿಎಸ್‌ಗೆ ಹೆಡ್ಗೆವಾರ್ , ದೀನ್ ದಯಾಳ್ ಪಠ್ಯ!
Linkup
ಭೋಪಾಲ್: ರಾಮಾಯಣದ ಅಂಶಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸುವ ಪ್ರಸ್ತಾಪದ ಮೂಲಕ ಸರ್ಕಾರ ವಿವಾದ ಸೃಷ್ಟಿಸಿದೆ. ತುಳಸಿದಾಸ ರಚನೆಯ 'ರಾಮಚರಿತಮಾನಸ' ಕೃತಿಯನ್ನು ಮಧ್ಯಪ್ರದೇಶದ ಪದವಿ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ 'ರಾಮಸೇತು' ಪಠ್ಯವನ್ನು ಸೇರಿಸಲಾಗುವುದು ಎಂದು ಅದು ಹೇಳಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯ ವಿಜ್ಞಾನವನ್ನು ಹಿಂದಿಯಲ್ಲಿ ಕಲಿಯುವ ಆಯ್ಕೆಯನ್ನು ಕೂಡ ನೀಡಲು ಮುಂದಾಗಿದೆ. 'ವೈದ್ಯಕೀಯ ಕೋರ್ಸ್‌ಗಳನ್ನು ಹಿಂದಿಯಲ್ಲಿ ಕೂಡ ಸಿದ್ಧಪಡಿಸುವಂತೆ ಶೀಘ್ರದಲ್ಲಿಯೇ ಸಮಿತಿಯೊಂದನ್ನು ರಚಿಸಲಾಗುವುದು. ಭವಿಷ್ಯದಲ್ಲಿ ಹಿಂದಿಯಲ್ಲಿ ಸಹ ವೈದ್ಯಕೀಯ ಅಧ್ಯಯನ ಆರಂಭಿಸಲಿದ್ದೇವೆ' ಎಂದು ಮಧ್ಯಪ್ರದೇಶ ವೈದ್ಯಕೀಯ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. ಉನ್ನತ ಶಿಕ್ಷಣ ಪಠ್ಯ ಸಮಿತಿ ಶಿಫಾರಸಿನಂತೆ 'ರಾಮಚರಿತ ಮಾನಸ ಕಿ ವ್ಯವಹಾರಿಕ್ ದರ್ಶನ್' ಪುಸ್ತಕವನ್ನು 2021-22ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಮೊದಲ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಐಚ್ಛಿಕ ಕೋರ್ಸ್ ಆಗಿ ಅಳವಡಿಸಲಾಗಿದೆ. ಇದು 100 ಅಂಕಗಳ ಪ್ರಶ್ನೆ ಪತ್ರಿಕೆ ಹೊಂದಿದ್ದು, 'ಭಾರತೀಯ ಸಂಸ್ಕೃತಿಯ ಅಧ್ಯಾತ್ಮ ಮತ್ತು ಧಾರ್ಮಿಕ ಬೇರಿನ ಮೂಲಗಳು', 'ವೇದಗಳ ನಾಲ್ಕು ಯುಗಗಳು', 'ಉಪನಿಷದ್ ಮತ್ತು ಪುರಾಣಗಳು', 'ರಾಮಾಯಣ ಮತ್ತು ಶ್ರೀ ರಾಮಚರಿತಮಾನಸ ನಡುವಿನ ವ್ಯತ್ಯಾಸಗಳು' ಮತ್ತು 'ದೈವಿಕ ಅಸ್ತಿತ್ವದ ಅವತಾರ'ದಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್‌ನ ಅಡಿಪಾಯದ ಕೋರ್ಸ್ ಆಗಿ, ಸಿ ರಾಜಗೋಪಾಲಾಚಾರಿ ಬರೆದ ಮಹಾಭಾರತದ ಮುನ್ನುಡಿಯನ್ನು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಸಾಮರ್ಥ್ಯ, ವ್ಯಕ್ತಿತ್ವ ವಿಕಸನದ ವಿವಿಧ ಆಯಾಮಗಳ ಮೇಲೆ ಗಮನ ಹರಿಸುವ ಮಾನವೀಯ ಅಂಶಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದೆ. ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಗಳನ್ನು ಬಿತ್ತುವ ಸಲುವಾಗಿ ಆರೆಸ್ಸೆಸ್ ಸಂಸ್ಥಾಪಕ ಡಾ. ಕೆಬಿ ಹೆಡ್ಗೆವಾರ್, ಭಾರತೀಯ ಜನಸಂಘ ಮುಖ್ಯಸ್ಥರಾಗಿದ್ದ ದೀನ್ ದಯಾಳ್ ಉಪಾಧ್ಯಾಯ ಮತ್ತು ಡಾ. ಬಿಆರ್ ಅಂಬೇಡ್ಕರ್ ಸೇರಿದಂತೆ ವಿವಿಧ ನಾಯಕರ ಜೀವನಗಾಥೆಗಳನ್ನು ಅಳವಡಿಸಲು ಕೂಡ ಪ್ರಸ್ತಾಪಿಸಲಾಗಿದೆ. 'ನಮ್ಮ ವೈಭವಯುತ ಇತಿಹಾಸವನ್ನು ಮುನ್ನೆಲೆಗೆ ತರುವುದು ಈ ಬದಲಾವಣೆಗಳ ಉದ್ದೇಶ' ಎಂದು ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಹೇಳಿದ್ದಾರೆ. ವಿದ್ವಾಂಸರ ಸಲಹೆಗಳ ಮೇರೆಗೆ ಈ ಪಠ್ಯಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 'ಲಕ್ಷಾಂತರ ವರ್ಷಗಳ ಹಿಂದೆ ರಾಮ ಸೇತುವನ್ನು ನಿರ್ಮಿಸಲಾಗಿತ್ತು ಎನ್ನುವುದು ನಾಸಾ ಅಧ್ಯಯನದಿಂದ ಸಾಬೀತಾಗಿದೆ' ಎಂದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮ ಸೇತುವನ್ನು ಪಠ್ಯವಾಗಿಸುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಸರ್ಕಾರವು 2011ರಲ್ಲಿಯೇ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಕಲಿಸುವ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಆದರೆ ಹತ್ತು ವರ್ಷ ಉರುಳಿದರೂ ಅದರಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸಿಬ್ಬಂದಿ ಕೊರತೆ, ಅನುವಾದಿತ ಪಠ್ಯಗಳು, ಪುಸ್ತಕಗಳು ಮತ್ತು ವಿದ್ಯಾರ್ಥಿಗಳ ಅಲಭ್ಯತೆಯಿಂದಾಗಿ 2018ರಲ್ಲಿ ಹಿಂದಿ ಎಂಜಿನಿಯರಿಂಗ್ ಕೋರ್ಸ್‌ಗಳು ಸ್ಥಗಿತಗೊಂಡಿದ್ದವು. ವೈದ್ಯಕೀಯ ಕೋರ್ಸ್‌ಗಳು ಇದುವರೆಗೂ ಆರಂಭವಾಗಿಲ್ಲ. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿರುವ ವಿಶ್ವವಿದ್ಯಾಲಯದಲ್ಲಿ ಎಂಟು ಗುಮಾಸ್ತರು, ಇಬ್ಬರು ಚಾಲಕರು, 74 ವಿಭಾಗಗಳನ್ನು 29 ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಅತಿಥಿ ಉಪನ್ಯಾಸಕರಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಪಠ್ಯಕ್ರಮದಲ್ಲಿನ ಈ ಬದಲಾವಣೆಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಪ್ರಯತ್ನ ಎಂದು ಕಾಂಗ್ರೆಸ್ ಹಾಗೂ ಇತರೆ ವಿರೋಧಪಕ್ಷಗಳು ಆರೋಪಿಸಿವೆ. 'ರಾಮಚರಿತ ಮಾನಸದೊಂದಿಗೆ ಗುರು ಗ್ರಂಥ ಸಾಹಿಬ್, ಕುರಾನ್, ಬೈಬಲ್ ಮುಂತಾದವುಗಳನ್ನೂ ಅಳವಡಿಸಲಿ. ಇದರಿಂದ ಮಕ್ಕಳಿಗೆ ಇನ್ನಷ್ಟು ಮಾಹಿತಿ ಸಿಗಲಿದೆ. ದೇಶದ ಸಂವಿಧಾನದ ಉದ್ದೇಶವೂ ಈಡೇರಲಿದೆ' ಎಂದು ಕಾಂಗ್ರೆಸ್ ನಾಯಕ ಆರಿಫ್ ಮಸೂದ್ ಹೇಳಿದ್ದಾರೆ.