ನಷ್ಟದ ಕೈಗಾರಿಗಳನ್ನು ಮುಚ್ಚಲ್ಲ, ಪುನಶ್ಚೇತನಕ್ಕೆ ಕ್ರಮ - ಮುರುಗೇಶ್‌ ನಿರಾಣಿ

ಕಲಬುರಗಿಯ ಸಿಮೆಂಟ್‌ ಕಾರ್ಪೊರೇಷನ್‌, ಮೈಶುಗರ್‌, ಮೈಸೂರು ಪೇಪರ್‌ ಮಿಲ್ಸ್‌ ಮತ್ತಿತರ ಸಂಸ್ಥೆಗಳು ನಷ್ಟದ ಹಾದಿಯಲ್ಲಿದ್ದು, ಇವುಗಳನ್ನು ಲಾಭದತ್ತ ಕೊಂಡೊಯ್ಯುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ. ಕೈಗಾರಿಕೆಗಳನ್ನು ಮುಚ್ಚುವುದಿಲ್ಲ ಎಂದು ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ನಷ್ಟದ ಕೈಗಾರಿಗಳನ್ನು ಮುಚ್ಚಲ್ಲ, ಪುನಶ್ಚೇತನಕ್ಕೆ ಕ್ರಮ - ಮುರುಗೇಶ್‌ ನಿರಾಣಿ
Linkup
ಬೆಂಗಳೂರು: ರೋಗಗ್ರಸ್ಥ ನಿಗಮಗಳಲ್ಲಿನ ಬಂಡವಾಳ ಹೂಡಿಕೆ ಹಿಂಪಡೆದು ಪುನಶ್ಚೇತನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ತಿಳಿಸಿದ್ದಾರೆ. ವಿಧಾನಸೌಧ ಕಚೇರಿಯಲ್ಲಿ ಶುಕ್ರವಾರ ಮಾತನಾಡಿ,''ಕಲಬುರಗಿಯ ಸಿಮೆಂಟ್‌ ಕಾರ್ಪೊರೇಷನ್‌, ಮೈಶುಗರ್‌, ಮೈಸೂರು ಪೇಪರ್‌ ಮಿಲ್ಸ್‌ ಮತ್ತಿತರ ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. ಇಂಥ ಸಂಸ್ಥೆಗಳನ್ನು ಲಾಭದತ್ತ ಕೊಂಡೊಯ್ಯುವ ಬಗ್ಗೆ ದಿಲ್ಲಿಗೆ ಹೋಗಿದ್ದಾಗ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ. ಕೈಗಾರಿಕೆಗಳನ್ನು ಮುಚ್ಚುವುದಿಲ್ಲ," ಎಂದರು. "ನೈಸರ್ಗಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಉದ್ಯೋಗ ಕ್ರಾಂತಿ ಸೃಷ್ಟಿಸುವ ಗುರಿಯಿದೆ. ಕೆಐಎಡಿಬಿಯಿಂದ ಪಡೆದ ಜಮೀನನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಬೇಕು. ದುರುಪಯೋಗವಾಗಿದ್ದರೆ ಸಮೀಕ್ಷೆ ನಡೆಸಲಾಗುವುದು. ತನಿಖೆಗೂ ಆದೇಶಿಸಿ ಕ್ರಮ ಕೈಗೊಳ್ಳಲಾಗುವುದು," ಎಂದರು. "ಕೆಜಿಎಫ್‌ ಬಳಿ 3 ಸಾವಿರಕ್ಕೂ ಹೆಚ್ಚು ಜಮೀನು ಇದೆ. ಇದರ ಬಳಕೆ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜತೆಗೆ ಮಾತುಕತೆ ನಡೆಸಲಾಗಿದೆ. ಕೆಜಿಎಫ್‌ ಜಾಗವನ್ನು ಇಲಾಖೆಗೆ ವಹಿಸಿದರೆ ಟೌನ್‌ಶಿಪ್‌ ನಿರ್ಮಿಸಲಾಗುವುದು. ಈ ಹಿಂದೆ ನಾನು ಕೈಗಾರಿಕಾ ಸಚಿವನಾಗಿದ್ದಾಗ ಅಂದಾಜು 11.8 ಲಕ್ಷ ಕೋಟಿ ರೂ. ಹೂಡಿಕೆಯಾಗಿತ್ತು. 15 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಈ ಬಾರಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಲಾಗುವುದು," ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಅದಾಲತ್‌‍ ನಡೆಸಲಾಗುವುದು. ನಮ್ಮ ಸರಕಾರ ಉದ್ದಿಮೆದಾರರ ಮನೆಬಾಗಿಲಿಗೆ ಹೋಗಲಿದೆ. ಐಟಿಐ, ಬಿಎ, ಬಿಕಾಂ, ಬಿಎಸ್ಸಿ, ಎಂಸ್ಸಿ, ಎಂಕಾಮ್‌, ಪಿಎಚ್‌‍.ಡಿ ಮಾಡಿದವರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಗುರಿ. ಕೇಂದ್ರ ಸರಕಾರ ಇನ್ವೆಸ್ಟ್‌ ಇಂಡಿಯ ಎಂಬ ನೂತನ ಯೋಜನೆ ಆರಂಭಿಸಿದೆ. ದೇಶ, ವಿದೇಶಗಳಿಂದ ಬಂಡವಾಳ ಹೂಡಿಕೆ ಮಾಡಲು ಬರುವವರಿಗೆ ಇಲ್ಲಿ ಸಮಗ್ರ ಮಾಹಿತಿ ನೀಡಲಾಗುತ್ತದೆ. ಇದಕ್ಕೆ ರಾಜ್ಯದಿಂದಲೂ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಮೈಸೂರು ಲ್ಯಾಂಫ್ಸ್‌ಗೆ ಸೇರಿದ 21 ಎಕರೆ ಸ್ಥಳದಲ್ಲಿ ಥೀಮ್‌ ಪಾರ್ಕ್ ನಿರ್ಮಿಸಲು ಈ ತಿಂಗಳ 19ರಂದು ಭೂಮಿಪೂಜೆ ಮಾಡಲಾಗುವುದು. ನಿಕಟಪೂರ್ವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಮಾರ್ಗದರ್ಶನವನ್ನೂ ಪಡೆಯಲಾಗುವುದು," ಎಂದರು. ಹೂಡಿಕೆ ಸಮಾವೇಶ ಮುಂದೂಡಿಕೆ? ಹೂಡಿಕೆ ಸಮಾವೇಶ ಮುಂದೂಡಿಕೆಯಾಗುವ ಸುಳಿವನ್ನು ಸಚಿವ ನಿರಾಣಿ ನೀಡಿದರು. ಮುಂದಿನ ಫೆಬ್ರವರಿಯಲ್ಲಿ ಹೂಡಿಕೆ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿಯಶಸ್ವಿಯಾಗಿ ನಿಭಾಯಿಸಲು ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಸಿಎಂ ಜತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರಾಣಿ ಅವರು ತಿಳಿಸಿದರು.