![](https://vijaykarnataka.com/photo/84615674/photo-84615674.jpg)
ಹೊಸದಿಲ್ಲಿ: ಇಲಾಖೆಗೆ ಹೊಸದಾಗಿ ಆರಂಭಿಸಿರುವ ವೆಬ್ಸೈಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ತಡವಾಗಿ ತೆರಿಗೆ ಪಾವತಿಗೆ ದಂಡ ಮನ್ನಾ ಮಾಡುವ ಕುರಿತು ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಪರಿಹರಿಸಲು ಮೇಲೆ ಒತ್ತಡ ಹೇರಿದ್ದಾರೆ.
ಕಳೆದ ತಿಂಗಳು (ಜೂನ್ನಲ್ಲಿ) ನಡೆದ ಸಭೆಯಲ್ಲಿ ತಾಂತ್ರಿಕ ತೊಂದರೆ ಸರಿಪಡಿಸಲು ಇನ್ಫೋಸಿಸ್ ಜುಲೈ 15 ರವರೆಗೆ ಸಮಯಾಕಾಶ ಕೋರಿತ್ತು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ, ಇನ್ಫೋಸಿಸ್ ನಿಗಧಿತ ಕಾಲಾವಧಿಯೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ.
ಇದೇ ಸಂದರ್ಭದಲ್ಲಿ ಕೆಲವು ವಿಭಾಗಗಳಲ್ಲಿ ಆನ್ಲೈನ್ ಮೂಲಕ ತಡವಾಗಿ ತೆರಿಗೆ ಪಾವತಿ ಮಾಡುವವರಿಗೆ ದಂಡ ಮನ್ನಾ ಮಾಡಬೇಕಾಗುತ್ತದೆ. ಅಲ್ಲದೆ ಅವರಿಗೆ ಮತ್ತೊಂದು ಅವಕಾಶ ನೀಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
'ನಾವು ತಾಂತ್ರಿಕ ತಂಡದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದರೆ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ. ದೋಷ ಸರಿಪಡಿಸುವಿಕೆಗೆ ನೀಡಲಾಗಿದ್ದ ಗಡುವು ಕೂಡ ಮುಗಿದಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳದಿದ್ದರೆ, ತಡವಾಗಿ ತೆರಿಗೆ ಪಾವತಿ ಮಾಡುವವರಿಗೆ ದಂಡ ವಿನಾಯಿತಿ ನೀಡುವುದು ಮತ್ತು ತೆರಿಗೆ ಪಾವತಿಗೆ ದಿನಾಂಕ ವಿಸ್ತರಿಸುವುದರ ಕುರಿತು ನಾವು ಪರಿಗಣಿಸಬೇಕಾಗುತ್ತದೆ ಎಂದು ಸಿಬಿಡಿಟಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಆನ್ಲೈನ್ನಲ್ಲಿ ಫಾರ್ಮ್ ಸಲ್ಲಿಸುವಲ್ಲಿ ತೆರಿಗೆದಾರರು ವರದಿ ಮಾಡುವ ತೊಂದರೆಗಳ ಹಿನ್ನೆಲೆಯಲ್ಲಿ ಸಿಬಿಡಿಟಿ 15 ಸಿಎ ಮತ್ತು 15 ಸಿಬಿ ಫಾರ್ಮ್ಗಳ ಎಲೆಕ್ಟ್ರಾನಿಕ್ ಫೈಲಿಂಗ್ನಲ್ಲಿ ಮತ್ತಷ್ಟು ವಿನಾಯಿತಿ ನೀಡಿದೆ. ತೆರಿಗೆದಾರರು ಫಾರ್ಮ್ 15 ಸಿಎ ಮತ್ತು ಫಾರ್ಮ್ 15 ಸಿಬಿಯನ್ನು ಸಲ್ಲಿಸಲು ಆಗಸ್ಟ್ 15ರವರೆಗೆ ಗಡುವು ವಿಸ್ತರಿಸಿದೆ.
ಮಂಗಳವಾರ, ಹಣಕಾಸು ಸಚಿವರು ಸಂಸತ್ತಿನಲ್ಲಿ ಇನ್ಫೋಸಿಸ್ ಹೊಸ ಆದಾಯ ತೆರಿಗೆ ಪೋರ್ಟಲ್ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಅಂಗೀಕರಿಸಿದೆ ಮತ್ತು ಪೋರ್ಟಲ್ನ ನಿಧಾನಗತಿಯ ಕಾರ್ಯನಿರ್ವಹಣೆ ಮತ್ತು ಕೆಲವು ಕ್ರಿಯಾತ್ಮಕತೆಗಳ ಲಭ್ಯತೆಯಿಲ್ಲದಂತಹ ಕೆಲವು ಆರಂಭಿಕ ತೊಂದರೆಗಳನ್ನು ತಗ್ಗಿಸಲಾಗಿದೆ ಎಂದು ಹೇಳಿದರು.