ನಿರ್ಮಾಪಕ ರಾಮು ಜನ್ಮದಿನ: ಪತಿಗೆ ಭಾವನಾತ್ಮಕ ಪತ್ರ ಬರೆದ ನಟಿ ಮಾಲಾಶ್ರೀ

'ಲಾಕಪ್‌ ಡೆತ್‌', 'ಸಿಂಹದ ಮರಿ', 'ಎಕೆ 47' ಥರದ ಹಿಟ್ ಸಿನಿಮಾಗಳನ್ನು ನಿರ್ಮಿಸಿ, 'ಕೋಟಿ ನಿರ್ಮಾಪಕ' ಎಂದೇ ಖ್ಯಾತರಾಗಿದ್ದ ರಾಮು ಅವರು ಕೆಲ ದಿನಗಳ ಹಿಂದೆ ಕೊರೊನಾದಿಂದ ನಿಧನರಾಗಿದ್ದರು. ಇಂದು ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಪತ್ನಿ, ನಟಿ ಮಾಲಾಶ್ರೀ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.

ನಿರ್ಮಾಪಕ ರಾಮು ಜನ್ಮದಿನ: ಪತಿಗೆ ಭಾವನಾತ್ಮಕ ಪತ್ರ ಬರೆದ ನಟಿ ಮಾಲಾಶ್ರೀ
Linkup
ಸ್ಯಾಂಡಲ್‌ವುಡ್‌ನಲ್ಲಿ 'ಕೋಟಿ ರಾಮು' ಎಂದೇ ಫೇಮಸ್ ಆಗಿದ್ದ ನಿರ್ಮಾಪಕ ಅವರು ಕಳೆದ ಏಪ್ರಿಲ್ 26ರಂದು ಹಿಂದೆ ಕೊರೊನಾ ಸೋಂಕಿಗೆ ಬಲಿಯಾದರು. ಅವರ ಅಗಲಿಕೆಯಿಂದ ಪತ್ನಿ, ನಟಿ ಮತ್ತು ಇಬ್ಬರು ಮಕ್ಕಳು ದುಃಖದ ಮಡುವಿನಲ್ಲಿ ಮುಳುಗಿದ್ದರು. ಇಂದು ರಾಮು ಅವರ ಜನ್ಮದಿನ (ಜೂ.20). ಆ ಹಿನ್ನೆಲೆಯಲ್ಲಿ ನಟಿ ಮಾಲಾಶ್ರೀ ಒಂದು ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ. 'ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ, ನನ್ನ ನುಡಿ, ನಗು ನೆಮ್ಮದಿ ನೀವಾಗಿದ್ರಿ, ನನ್ನ ಹೆಸರಿಗೆ ಬೆಳಕಾಗಿದ್ರಿ..' ಎಂದು ಪತಿಯನ್ನು ನೆನೆದಿದ್ದಾರೆ ಮಾಲಾಶ್ರೀ. ಈ ದಿನ ನನ್ನ ದೇವರ ಹುಟ್ಟು ಹಬ್ಬ 'ನೀವು ನನಗೆ ದೇವರ ವರವಾಗಿ ಬಂದ್ರಿ. ನೀವು ನನಗೆ ವರಗಳನ್ನ ಕೊಡುವ ದೇವರಾದ್ರಿ, ಈ ದಿನ ನನ್ನ ದೇವರ ಹುಟ್ಟು ಹಬ್ಬ. 23 ವರ್ಷಗಳ ಕಾಲ ಈ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸಿ ನನ್ನ ಉಸಿರಲ್ಲಿ ಉಸಿರಾಗ್ತಾ ಬಂದ್ರಿ. ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ, ನನ್ನ ನುಡಿ, ನಗು ನೆಮ್ಮದಿ ನೀವಾಗಿದ್ರಿ, ನನ್ನ ಹೆಸರಿಗೆ ಬೆಳಕಾಗಿದ್ರಿ. ದಿನ ರಾತ್ರಿ ನನ್ನ ಆಗುಹೋಗುಗಳನ್ನ ಆಲಿಸಿ ನನಗೆ ಬುದ್ಧಿ ಹೇಳಿ ಬದುಕು ಬುನಾದಿ ಕಟ್ಟಿ ಕೊಟ್ಟ ಗುರುಗಳಾದ್ರಿ, ಮಕ್ಕಳ ಬದುಕನ್ನ, ಅವರ ಜೀವನವನ್ನ ಹಸನಾಗಿ ರೂಪಿಸಿದ ಉತ್ತಮ ತಂದೆಯಾಗಿದ್ರಿ..' ಎಂದಿದ್ದಾರೆ ಮಾಲಾಶ್ರೀ. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ 'ನೀವು ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೆ ಇದೆ. ನಾನು ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ನನಗಾಗೇ ಜನುಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನು ಬೇಕೋ ಅದೆಲ್ಲ ಕೊಟ್ಟ ನಿಮಗೆ, ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿ.. ಎಂದೆಂದಿಂಗೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ' ಎಂದು ಮಾಲಾಶ್ರೀ ಭಾವುಕರಾಗಿ ಪತ್ರ ಬರೆದಿದ್ದಾರೆ. ಇನ್ನು, ರಾಮು ನಿಧನರಾಗಿ 12 ದಿನಗಳ ನಂತರ ಒಂದು ಪತ್ರವನ್ನು ಮಾಲಾಶ್ರೀ ಒಂದು ಪತ್ರವನ್ನು ಹಂಚಿಕೊಂಡಿದ್ದರು. 'ಕಳೆದ 12 ದಿನಗಳು ತುಂಬಾ ನೋವಿನಿಂದ ಕೂಡಿದ್ದವು. ನಮಗೆ ದಿಕ್ಕೇ ತೋಚುತ್ತಿಲ್ಲ. ನಮ್ಮೆಲ್ಲರಿಗೂ ಬೆನ್ನೆಲುಬಾಗಿದ್ದ ಪ್ರೀತಿಯ ಪತಿ ರಾಮು ಅಗಲಿಕೆಯಿಂದ ಇಡೀ ಕುಟುಂಬ ದಿಗ್ಭ್ರಮೆಗೊಂಡಿದೆ. ನನ್ನ ಹೃದಯ ಛಿದ್ರಗೊಂಡಿದೆ. ರಾಮು ಅವರೇ ನಮಗೆ ಯಾವಾಗಲೂ ಬೆನ್ನೆಲುಬು. ಅವರೇ ನಮಗೆ ದಾರಿ ತೋರಿಸುವ ಬೆಳಕು. ಈ ಪರಿಸ್ಥಿತಿಯಲ್ಲಿ ರಾಮುಗಾಗಿ ಇಡೀ ಕನ್ನಡ ಚಿತ್ರರಂಗ ಪ್ರೀತಿ ತೋರಿಸಿದೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಪ್ರೀತಿ, ಕಾಳಜಿ ತೋರಿಸಿದ ಮೀಡಿಯಾ, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ತಾಂತ್ರಿಕ ವರ್ಗದವರು ಹಾಗೂ ರಾಮು ಅವರ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೂ ನನ್ನ ಧನ್ಯವಾದಗಳು' ಎಂದು ಮಾಲಾಶ್ರೀ ಹೇಳಿದ್ದರು.