ನಟ ಶ್ರೀಮುರಳಿ, ಆಶಿಕಾ ರಂಗನಾಥ್ 'ಮದಗಜ' ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಕಥೆ ಇಲ್ಲ!

'ರೋರಿಂಗ್ ಸ್ಟಾರ್' ನಟ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾ ಯಾವ ರೀತಿಯ ಸಿನಿಮಾ ಎಂಬ ಸಂದೇಹ ಕೆಲವರಿಗೆ ಇದೆ. ಆದರೆ ಎಲ್ಲರೂ ಅಂದುಕೊಂಡಂತೆ ಇಲ್ಲವಂತೆ ಈ ಸಿನಿಮಾ. ಹಾಗಾದರೆ ಅದು ಯಾವ ರೀತಿಯ ಸಿನಿಮಾವಂತೆ?

ನಟ ಶ್ರೀಮುರಳಿ, ಆಶಿಕಾ ರಂಗನಾಥ್ 'ಮದಗಜ' ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಕಥೆ ಇಲ್ಲ!
Linkup
(ಹರೀಶ್ ಬಸವರಾಜ್) ಕಳೆದ ವರ್ಷ 'ಮದಗಜ' ಸಿನಿಮಾದ ಟೀಸರ್‌ ಬಿಡುಗಡೆಯಾಗಿ ವೈರಲ್‌ ಆಗಿತ್ತು. ಆ ಟೀಸರ್‌ ನೋಡಿದಾಗ ಇದೊಂದು ಅಂಡರ್‌ವರ್ಲ್ಡ್ ಕಥೆ ಎಂದು ಜನರು ಭಾವಿಸಿದ್ದರು. ಆದರೆ ಕೆಲವು ದಿನಗಳ ನಂತರ ಮೈಸೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಚಿತ್ರೀಕರಣವಾಗುತ್ತಿದ್ದ ಫೋಟೊಗಳು ರಿಲೀಸ್‌ ಆದವು. ಆಗ ಇದು ಅಂಡರ್‌ವರ್ಲ್ಡ್ ಸಿನಿಮಾವಲ್ಲ ಎಂಬ ಮಾತು ಕೇಳಿಬಂತು. 'ಅಯೋಗ್ಯ' ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್‌ ಹೇಳುವ ಪ್ರಕಾರ 'ಮದಗಜ' ಸಿನಿಮಾ ವಿಭಿನ್ನ ಜಾನರ್‌ನ ಸಿನಿಮಾ. 'ರೋರಿಂಗ್ ಸ್ಟಾರ್' ಶ್ರೀಮುರಳಿ ಅವರು ಇದುವರೆಗೆ 21 ಸಿನಿಮಾಗಳಲ್ಲಿ ವಿವಿಧ ಪಾತ್ರಗಳನ್ನು ಪೋಷಿಸಿದ್ದು, ಇದು ಅವರ 22ನೇ ಸಿನಿಮಾ. ಅವರ ಇಷ್ಟು ದಿನಗಳ ಸಿನಿಮಾ ಜರ್ನಿಯಲ್ಲಿ ಇದು ವಿಭಿನ್ನ ಜಾನರ್‌ನ ಸಿನಿಮಾ ಎನಿಸಿಕೊಂಡಿದೆ ಎಂದಿದ್ದಾರೆ. 'ಮದಗಜ ಸಿನಿಮಾಗಾಗಿ ನಾನು ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೆಲವು ದಿನಗಳ ಹಿಂದೆಯಷ್ಟೇ ಸಿನಿಮಾ ಸಂಪೂರ್ಣವಾಯಿತು. ಕುಂಬಳಕಾಯಿ ಒಡೆದಿದ್ದೇವೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ. ಕೊನೆಯ ಶೆಡ್ಯೂಲ್‌ನಲ್ಲಿ 27 ದಿನಗಳ ನಿರಂತರ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಈ ತಿಂಗಳಲ್ಲಿಯೇ ಒಂದು ಹಾಡನ್ನು ರಿಲೀಸ್‌ ಮಾಡಲು ಯೋಚಿಸಿದ್ದೇವೆ' ಎಂದು ಹೇಳಿದರು ನಿರ್ದೇಶಕ ಮಹೇಶ್‌ ಕುಮಾರ್‌. 'ಸಿನಿಮಾವನ್ನು ಡಿಸೆಂಬರ್‌ ಕೊನೆಯ ವೇಳೆಗೆ ಬಿಡುಗಡೆ ಮಾಡಲು ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಿದ್ದೇವೆ. ಇಂತಹ ಜಾನರ್‌ನಲ್ಲಿ ಶ್ರೀಮುರಳಿಯವರು ಇದುವರೆಗೂ ನಟಿಸಿಲ್ಲ. ಅವರ ಜತೆಗಿನ ಕಾಂಬಿನೇಷನ್‌ಗಳಿಂದ ಇದು ವಿಶೇಷ ಸಿನಿಮಾ ಎನಿಸುತ್ತದೆ. ಹಿಂದಿನ ಸಿನಿಮಾಗಳಲ್ಲಿ ರಿಪೀಟ್‌ ಆಗದೇ ಇರುವ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಶ್ರೀಮುರಳಿ ಜತೆಗೆ ದೇವಯಾನಿ, ಆಶಿಕಾ ರಂಗನಾಥ್‌, ಜಗಪತಿಬಾಬು ಹೀಗೆ ಯಾರೊಬ್ಬರೂ ಇದುವರೆಗೆ ನಟಿಸಿಲ್ಲ. ಈ ಸಿನಿಮಾದಲ್ಲಿ ಇವರೆಲ್ಲರ ಕಾಂಬಿನೇಷನ್‌ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡುತ್ತದೆ' ಎನ್ನುವುದು ನಿರ್ದೇಶಕರ ಮಾತು. 'ಮದಗಜ ಒಂದು ಆ್ಯಕ್ಷನ್‌ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ. ಶ್ರೀಮುರಳಿಯವರ ಅಭಿಮಾನಿಗಳು ಮತ್ತು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಯಾವ ರೀತಿಯ ಸಿನಿಮಾ ಎಂದು ಕೇಳುತ್ತಲೇ ಇದ್ದಾರೆ. ಎಲ್ಲರಿಗೂ ಚಿತ್ರಮಂದಿರದಲ್ಲಿ ಖುಷಿ ಆಗುವಂತಹ ಸಿನಿಮಾ ಇದಾಗುತ್ತದೆ. ಎರಡು ಶೇಡ್‌ನಲ್ಲಿ ಸಿನಿಮಾದ ಕಥೆ ನಡೆಯುತ್ತದೆ' ಎಂದು ಮಾಹಿತಿ ನೀಡಿದರು ಮಹೇಶ್‌ ಕುಮಾರ್‌. ರವಿ ಬಸ್ರೂರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 74 ದಿನಗಳ ಕಾಲ ವಾರಾಣಸಿ, ಬೆಂಗಳೂರು, ಮೈಸೂರು ಹೀಗೆ ಹಲವು ಕಡೆಗಳಲ್ಲಿ 'ಮದಗಜ' ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ವಾರಾಣಸಿ ಗ್ಯಾಂಗ್‌ಸ್ಟರ್‌ ಆಗಿ ನಟ ಶ್ರೀಮುರಳಿ ನಟಿಸಿದ್ದಾರೆ. ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಆ್ಯಕ್ಷನ್‌ ದೃಶ್ಯಗಳನ್ನು ವಿಶಿಷ್ಟವಾಗಿ ಚಿತ್ರೀಕರಣ ಮಾಡಲಾಗಿದೆ. 'ಮಫ್ತಿ' ಖ್ಯಾತಿಯ ನವೀನ್‌ ಕುಮಾರ್‌ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ 'ಮದಗಜ' ಸಿನಿಮಾದ ಎಕ್ಸ್‌ಕ್ಲೂಸಿವ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿತ್ತು.