ದೇಶದಲ್ಲಿ 7 ತಿಂಗಳಲ್ಲೇ ಕನಿಷ್ಠ ಕೊರೊನಾ ಪ್ರಕರಣ: 10 ರಾಜ್ಯಗಳಲ್ಲಿ ಶೂನ್ಯಕ್ಕಿಳಿದ ಸಾವು

ದೇಶಾದ್ಯಂತ ಮಂಗಳವಾರ ಕೊರೊನಾ ಸೋಂಕಿನ 14,313 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 224 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇನ್ನೊಂದೆಡೆ, ದೇಶದ 10 ರಾಜ್ಯಗಳಲ್ಲಿ 24 ಗಂಟೆಗಳಲ್ಲಿ ಒಂದೇಒಂದು ಕೊರೊನಾ ಸಾವು ಕೂಡ ವರದಿಯಾಗಿಲ್ಲ.

ದೇಶದಲ್ಲಿ 7 ತಿಂಗಳಲ್ಲೇ ಕನಿಷ್ಠ ಕೊರೊನಾ ಪ್ರಕರಣ: 10 ರಾಜ್ಯಗಳಲ್ಲಿ ಶೂನ್ಯಕ್ಕಿಳಿದ ಸಾವು
Linkup
ಹೊಸದಿಲ್ಲಿ: ದೇಶಾದ್ಯಂತ ಮಂಗಳವಾರ ಕೊರೊನಾ ಸೋಂಕಿನ 14,313 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 224 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇನ್ನೊಂದೆಡೆ, ದೇಶದ 10 ರಾಜ್ಯಗಳಲ್ಲಿ 24 ಗಂಟೆಗಳಲ್ಲಿ ಒಂದೇಒಂದು ಕೊರೊನಾ ಸಾವು ಕೂಡ ವರದಿಯಾಗಿಲ್ಲ. ಜತೆಗೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ದರ ಕೂಡ ಶೇ.98.04ಕ್ಕೆ ಏರಿಕೆಯಾಗಿದೆ. 2020ರ ಮಾರ್ಚ್ ಬಳಿಕ ವರದಿಯಾಗಿರುವ ಗರಿಷ್ಠ ಚೇತರಿಕೆ ಪ್ರಮಾಣ ಇದಾಗಿದೆ. ಕಳೆದ 18 ದಿನಗಳಿಂದ ಸತತವಾಗಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರದ ಒಳಗಡೆಯೇ ಇದೆ. ಸತತ 107 ದಿನಗಳಿಂದ 50 ಸಾವಿರದ ಒಳಗಿದೆ. ನಿತ್ಯ ದಾಖಲಾಗುತ್ತಿರುವ ಸರಾಸರಿ ಪಾಸಿಟಿವಿಟಿ ದರ ಕೂಡ ಇಳಿಕೆಯಾಗಿ ಶೇ.1.21 ಮುಟ್ಟಿದೆ. ಕಳೆದ 43 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗುತ್ತಿದೆ. ಪ್ರತಿ ವಾರದ ಸರಾಸರಿ ಪಾಸಿಟಿವಿಟಿ ದರ ಕೂಡ 109 ದಿನಗಳಿಂದ ಶೇ.3ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ''ಇವೆಲ್ಲವೂ ಕೊರೊನಾ ಆರ್ಭಟ ಇಳಿಕೆ ಆಗುತ್ತಿರುವ ಲಕ್ಷಣಗಳು. ಹಾಗಂತ ಮಾಸ್ಕ್‌ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಲಕ್ಷಿಸುವಂತಿಲ್ಲ. ಮುನ್ನೆಚ್ಚರಿಕೆಯೇ ರಕ್ಷಾ ಕವಚ,'' ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ''ಅಂಕಿ-ಅಂಶಗಳನ್ನು ಗಮನಿಸಿದರೆ ದೇಶ ಕೊರೊನಾ ಸೋಂಕಿನ ಮೂರನೇ ಅಲೆಯಿಂದ ಪಾರಾಗಿದೆ,'' ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ 10 ಸಾವಿರಕ್ಕಿಂತ ಕಡಿಮೆಯಾದ ಸಕ್ರಿಯ ಪ್ರಕರಣ ಕರ್ನಾಟಕ ರಾಜ್ಯಾದ್ಯಂತ ಮಂಗಳವಾರ 332 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕ ರಾಜ್ಯಾದ್ಯಂತ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 29,81,732ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಕೂಡಾ 515 ಕೊರೊನಾ ಸೋಂಕಿತರು ಗುಣಮುಖರಾಗಿ ರಾಜ್ಯದ ಹಲವೆಡೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 29,34,085ಕ್ಕೆ ಏರಿಕೆ ಕಂಡಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,712ಕ್ಕೆ ಕುಸಿತ ಕಂಡಿದೆ. ಇದು ಸಮಾಧಾನಕರ ಬೆಳವಣಿಗೆಯಾಗಿದೆ. ಆದ್ರೆ ಮಂಗಳವಾರ ಕೂಡಾ ಚಿಕಿತ್ಸೆ ಫಲಕಾರಿ ಆಗದೆ 11 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 37,906ಕ್ಕೆ ಏರಿಕೆ ಆಗಿದೆ.