ಎರಡು ವರ್ಷದ ಹಿಂದೆ ನಡೆದದ್ದು ಮದುವೆಯೇ ಅಲ್ಲ ಎಂದ ಟಿಎಂಸಿ ಸಂಸದೆ ನುಸ್ರತ್ ಜಹಾನ್!

2019ರಲ್ಲಿ ಟರ್ಕಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದ ಟಿಎಂಸಿ ಸಂಸದೆ ನುಸ್ರತ್ ಜಹಾನ್, ತಮ್ಮದು ಕಾನೂನು ಬದ್ಧ ಮದುವೆಯಲ್ಲ ಮತ್ತು ಬಹಳ ಹಿಂದೆಯೇ ಇಬ್ಬರು ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಎರಡು ವರ್ಷದ ಹಿಂದೆ ನಡೆದದ್ದು ಮದುವೆಯೇ ಅಲ್ಲ ಎಂದ ಟಿಎಂಸಿ ಸಂಸದೆ ನುಸ್ರತ್ ಜಹಾನ್!
Linkup
ಹೊಸದಿಲ್ಲಿ: ಸಂಸದೆಯಾಗಿ ಆಯ್ಕೆಯಾದ ಬಳಿಕ ಪ್ರಮಾಣವಚನ ಸ್ವೀಕರಿಸುವ ಮೊದಲೇ ಉದ್ಯಮಿ ನಿಖಿಲ್ ಜೈನ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕಿ , ತಮ್ಮ ಕಾನೂನು ಬದ್ಧವಾಗಿರಲಿಲ್ಲ ಹಾಗೂ ತಾವಿಬ್ಬರೂ ಕೆಲವು ಸಮಯದಿಂದ ದೂರ ಇರುವುದಾಗಿ ತಿಳಿಸಿದ್ದಾರೆ. 2019ರಲ್ಲಿ ಟರ್ಕಿಯಲ್ಲಿ ವಿಜೃಂಭಣೆಯಿಂದ ಹಸೆಮಣೆ ಏರಿದ್ದ ನುಸ್ರತ್ ಜಹಾನ್, ತಮ್ಮ ವಿವಾಹ ವಾರ್ಷಿಕೋತ್ಸವದ ಎರಡನೆಯ ವರ್ಷಾಚರಣೆ ಸಮೀಪದಲ್ಲಿಯೇ ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 'ವಿದೇಶಿ ನೆಲದಲ್ಲಿ, ಟರ್ಕಿಶ್ ವಿವಾಹ ನಿಯಮದಡಿ ಈ ಸಮಾರಂಭ ಅಸಿಂಧುವಾಗಿದೆ. ಮಿಗಿಲಾಗಿ ಇದು ಅಂತರ್ ಧರ್ಮೀಯ ಮದುವೆಯಾಗಿರುವುದರಿಂದ ಅದು ಭಾರತದಲ್ಲಿನ ವಿಶೇಷ ವಿವಾಹ ಕಾಯ್ದೆಯಡಿ ಸಿಂಧುತ್ವ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಅದು ಸಾಧ್ಯವಾಗಿಲ್ಲ. ಕಾನೂನಿನ ಪ್ರಕಾರ, ಇದು ಮದುವೆಯಲ್ಲ ಆದರೆ ಸಂಬಂಧ ಅಥವಾ ಲಿವ್ ಇನ್ ರಿಲೇಷನ್‌ಶಿಪ್. ಹೀಗಾಗಿ ಇದರಲ್ಲಿ ವಿಚ್ಚೇದನದ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ನುಸ್ರತ್ ಹೇಳಿಕೆ ನೀಡಿದ್ದಾರೆ. 'ನಾವಿಬ್ಬರೂ ಬಹಳ ಹಿಂದೆಯೇ ದೂರವಾಗಿದ್ದೇವೆ. ನಾನು ನನ್ನ ಖಾಸಗಿ ಬದುಕನ್ನು ನನ್ನೊಂದಿಯೇ ಇರಿಸಿಕೊಳ್ಳಲು ಬಯಸಿರುವುದರಿಂದ ಇದರ ಬಗ್ಗೆ ಮಾತನಾಡಿಲ್ಲ' ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ತಾವು ವರಿಸಿದ್ದ ನಿಖಿಲ್ ಜೈನ್ ಅವರನ್ನು ನೇರವಾಗಿ ಹೆಸರಿಸದೆ 'ವ್ಯಕ್ತಿಯೊಬ್ಬರು' ಎಂದು ಉಲ್ಲೇಖಿಸಿದ್ದು, ತಮ್ಮ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಎಲ್ಲ ಬಟ್ಟೆ, ಬ್ಯಾಕ್, ಆಭರಣ ಹಾಗೂ ಅನೇಕ ವಸ್ತುಗಳು ಅವರ ಸುಪರ್ದಿಯಲ್ಲಿಯೇ ಇದೆ ಎಂದು ತಿಳಿಸಿದ್ದಾರೆ. 'ನನ್ನ ಪೋಷಕರು, ಸ್ನೇಹಿತರು ಮತ್ತು ವಿಸ್ತೃತ ಕುಟುಂಬ ನೀಡಿದ ಎಲ್ಲ ಆಭರಣಗಳು ಮತ್ತು ನಾನು ಸ್ವತಃ ಸಂಪಾದಿಸಿದ ಸಂಪತ್ತುಗಳನ್ನು ಅವರೇ ಅಕ್ರಮವಾಗಿ ಇರಿಸಿಕೊಂಡಿರುವುದು ಆಘಾತ ಹಾಗೂ ಬೇಸರ ಉಂಟುಮಾಡಿದೆ. 'ಶ್ರೀಮಂತ' ಆಗಿರುವ ಕಾರಣದಿಂದಲೇ ಈ ಸಮಾಜದಲ್ಲಿ ಸಂತ್ರಸ್ತರಂತೆ ವರ್ತಿಸಲು ಹಾಗೂ ಮಹಿಳೆಯನ್ನು ಕೀಳಾಗಿ ಕಾಣುವ ಅಧಿಕಾರ ಇಲ್ಲ ಎಂದು ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ. 'ನಾನು ವ್ಯವಹಾರ ಅಥವಾ ವಿರಾಮಕ್ಕಾಗಿ ಯಾವುದೇ ಜಾಗಕ್ಕೆ ತೆರಳಿದ್ದರೂ, ನಾನು ಯಾರಿಂದ ದೂರವಾಗಿದ್ದೇನೋ ಅವರಿಗೆ ಸಂಬಂಧಿಸಿದ್ದಲ್ಲ. ನನ್ನ ಎಲ್ಲ ವೆಚ್ಚಗಳನ್ನೂ ನಾನೇ ಭರಿಸಿದ್ದೇನೆ ವಿನಾ ಬೇರೆ ಯಾರೋ ಹೇಳಿಕೊಂಡಿರುವಂತೆ ಅಲ್ಲ' ಎಂದು ಹೇಳಿಕೊಂಡಿದ್ದಾರೆ. ಟರ್ಕಿಯಲ್ಲಿ ಮದುವೆ31 ವರ್ಷದ ನುಸ್ರತ್ ಜಹಾನ್, ಮೂಲತಃ ನಟಿ ಹಾಗೂ ರೂಪದರ್ಶಿ. ಎರಡು ವರ್ಷದ ಹಿಂದೆ ಟರ್ಕಿಯ ಬೋದ್ರಮ್ ಎಂಬ ನಗರದಲ್ಲಿ ಕುಟುಂಬದ ಸದಸ್ಯರು ಹಾಗೂ ಕೆಲವು ಸ್ನೇಹಿತರ ಸಮ್ಮುಖದಲ್ಲಿ ನುಸ್ರತ್ ಮತ್ತು ನಿಖಿಲ್ ಮದುವೆಯಾಗಿದ್ದರು. ಮದುವೆಯ ಬಳಿಕ ಲೋಕಸಭೆಯಲ್ಲಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.