ಅಖಿಲೇಶ್‌, ಶಿವಪಾಲ್‌ರಿಂದ ಪ್ರತ್ಯೇಕ ರಥಯಾತ್ರೆ; ಯುಪಿಯಲ್ಲಿ ಯಾದವ್‌ ಕುಟುಂಬದ 'ಯಾದವಿ ಕಲಹ'!

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷದ ಯಾದವಿ ಕಲಹ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಮಂಗಳವಾರ ಪ್ರತ್ಯೇಕವಾಗಿ 'ರಥ ಯಾತ್ರೆ' ಆರಂಭಿಸಿದ್ದಾರೆ.

ಅಖಿಲೇಶ್‌, ಶಿವಪಾಲ್‌ರಿಂದ ಪ್ರತ್ಯೇಕ ರಥಯಾತ್ರೆ; ಯುಪಿಯಲ್ಲಿ ಯಾದವ್‌ ಕುಟುಂಬದ 'ಯಾದವಿ ಕಲಹ'!
Linkup
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಪ್ರಚಾರ ಪೈಪೋಟಿ ಚುರುಕು ಪಡೆಯುತ್ತಿರುವ ನಡುವೆಯೇ ಸಮಾಜವಾದಿ ಪಕ್ಷದ ಯಾದವಿ ಕಲಹ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಮಂಗಳವಾರ ಪ್ರತ್ಯೇಕವಾಗಿ 'ರಥ ಯಾತ್ರೆ' ಆರಂಭಿಸಿದ್ದಾರೆ. ಅಖಿಲೇಶ್‌ ಅವರು ಕಾನ್ಪುರದಿಂದ 'ಸಮಾಜವಾದಿ ವಿಜಯ ಯಾತ್ರೆ' ಹಾಗೂ ಶಿವಪಾಲ್‌ ಯಾದವ್‌ ಅವರು ಬೃಂದಾವನದಿಂದ 'ಸಾಮಾಜಿಕ ಪರಿವರ್ತನಾ ಯಾತ್ರೆ' ಆರಂಭಿಸಿದರು. ಇಬ್ಬರ ನಡುವೆ 2017ರ ವಿಧಾನಸಭೆ ಚುನಾವಣೆಗೆ ಮೊದಲು ಸಂಘರ್ಷ ಉಂಟಾಗಿತ್ತು. ಸೋಲಿನ ಬಳಿಕ ನಾಲ್ಕು ವರ್ಷ ತಣ್ಣಗಾಗಿದ್ದ ಆ ಕಲಹ ಈಗ ಪುನಃ ಆರಂಭಗೊಂಡಿದೆ. ಮುಂಬರುವ ಚುನಾವಣೆ ಪ್ರಚಾರಕ್ಕೆ ಸಮಾವೇಶಗಳನ್ನು ಪ್ರತ್ಯೇಕವಾಗಿ ನಡೆಸಲು ಇಬ್ಬರು ನಾಯಕರು ಪಣತೊಟ್ಟಿದ್ದು, ಎಸ್‌ಪಿ ಅದೃಷ್ಟ ಈ ಬಾರಿಯೂ ಬದಲಾಗುವುದು ದುಸ್ತರ ಎಂದು ಹೇಳಲಾಗುತ್ತಿದೆ. ಮುಲಾಯಂ ಸಿಂಗ್‌ ಯಾದವ್‌ ಅವರ ರಾಜಕೀಯ ಸಾಮರ್ಥ್ಯ ಕುಂದುತ್ತಿದ್ದಂತೆಯೇ ಅವರ ಪುತ್ರ ಅಖಿಲೇಶ್‌ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದರು. ಒಂದು ಅವಧಿ ಮುಖ್ಯಮಂತ್ರಿಯಾದ ಬಳಿಕ ಅವರಲ್ಲಿ ಪಕ್ಷದಲ್ಲಿ ತಮ್ಮ ಮಾತೇ ನಡೆಯಬೇಕು ಎಂಬ ಹಟ ಹೆಚ್ಚಿತ್ತು. ಇದರಿಂದ ಅಸಮಾಧಾನಗೊಂಡ ಅವರ ಚಿಕ್ಕಪ್ಪ, ಮಾಜಿ ಸಚಿವ ಶಿವಪಾಲ್‌ ಯಾದವ್‌ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಕಟ್ಟಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡಿದ್ದರು. ಇದರಿಂದ ಎಸ್‌ಪಿ ಹೀನಾಯ ಸೋಲುಂಡು ಬಿಜೆಪಿ ಅಧಿಕಾರ ಸೂತ್ರ ಹಿಡಿದಿತ್ತು. ಈಗ ಮತ್ತೊಂದು ಚುನಾವಣೆ ಸಮೀಪಿಸಿದರೂ ಇವರ ಈ ಯಾದವಿ ಕಲಹ ಇತ್ಯರ್ಥಗೊಂಡಿಲ್ಲ. ಅಖಿಲೇಶ್‌ ಹಟಕೌಟುಂಬಿಕ ಕಿತ್ತಾಟದಿಂದ ಮೂರನೆಯವರಿಗೆ ಲಾಭ ಎನ್ನುವುದು ಎಸ್ಪಿ ವರಿಷ್ಠರಿಗೆ ಗೊತ್ತಿದೆ. ವಿಶೇಷವಾಗಿ ಶಿವಪಾಲ್‌ ಯಾದವ್‌ ಅವರಿಗೆ ಪರಿಣಾಮದ ಅರಿವು ಸ್ಪಷ್ಟವಾಗಿ ಇದೆ. ಆದ್ದರಿಂದ ಅವರು ಈ ಬಾರಿ ಎಸ್‌ಪಿ ಜತೆ ಒಗ್ಗೂಡಿ ಚುನಾವಣೆ ಎದುರಿಸಲು ಮುಂದಾಗಿದ್ದರು. ಈ ದಿಸೆಯಲ್ಲಿ ತಮ್ಮ ಹಿರಿಯಣ್ಣ ಮುಲಾಯಂ ನಿವಾಸಕ್ಕೆ ಹೋಗಿ ಸಂಧಾನದ ಸೂತ್ರ ಮಂಡಿಸಿದ್ದರು. ಆದರೆ ಅಖಿಲೇಶ್‌ ಅವರು ಈ ಯಾವುದೇ ಒಡಂಬಡಿಕೆಗೆ ಓಗೊಡಲು ನಿರಾಕರಿಸಿದ್ದು, ಸಮಸ್ಯೆ ತೀವ್ರಗೊಳ್ಳಲು ಕಾರಣವಾಗಿದೆ. ಫಲಿತಾಂಶ ಏನೇ ಆದರೂ ಸರಿ, ಶಿವಪಾಲ್‌ ಬಣದ ಜತೆ ಕೈಜೋಡಿಸುವ ಮಾತೇ ಇಲ್ಲ ಎನ್ನುವುದು ಅಖಿಲೇಶ್‌ ಕಟು ನಿರ್ಧಾರವಾಗಿದೆ. ಆದ್ದರಿಂದ ಮಂಗಳವಾರ ಈ ಇಬ್ಬರೂ ನಾಯಕರು ಪ್ರತ್ಯೇಕವಾಗಿಯೇ 'ರಥ ಯಾತ್ರೆ' ಆರಂಭಿಸಿದರು ಎಂದು ಯಾದವ್‌ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ''ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಬಿಜೆಪಿ ಪ್ರಬಲವಾಗಿದೆ. ಇದನ್ನು ಮಣಿಸಲು ಕಾಂಗ್ರೆಸ್‌ನಿಂದ ಸಾಧ್ಯವೇ ಇಲ್ಲ. ಬಿಎಸ್‌ಪಿ ಲೆಕ್ಕಕ್ಕಿಲ್ಲ. ಎಸ್‌ಪಿಗೆ ಮಾತ್ರ ಪರ್ಯಾಯವಾಗುವ ಶಕ್ತಿ ಇದೆ. ಆದರೆ, ಈಗಿನ ಒಡಕಿನಿಂದಾಗ ಈ ಪಕ್ಷ ಕೂಡ ಆರಕ್ಕೇರುವುದು ಕನಸಿನ ಮಾತು. ಕಳೆದ ಚುನಾವಣೆಯ ಫಲಿತಾಂಶವೇ ಈ ಬಾರಿಯೂ ನಿರೀಕ್ಷಿತ,'' ಎಂದು ರಾಜ್ಯ ರಾಜಕೀಯ ಪರಿಣಿತರು ಭವಿಷ್ಯ ನುಡಿದಿದ್ದಾರೆ.