'ತೀವ್ರ ನಿರಾಶೆಯಾಗಿದೆ, ಇದು ಅನಿರೀಕ್ಷಿತ': ಚುನಾವಣಾ ಫಲಿತಾಂಶದ ಬಗ್ಗೆ ಸೋನಿಯಾ ಗಾಂಧಿ ಬೇಸರ

ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಪರಾಮರ್ಶನಾ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

'ತೀವ್ರ ನಿರಾಶೆಯಾಗಿದೆ, ಇದು ಅನಿರೀಕ್ಷಿತ': ಚುನಾವಣಾ ಫಲಿತಾಂಶದ ಬಗ್ಗೆ ಸೋನಿಯಾ ಗಾಂಧಿ ಬೇಸರ
Linkup
ನವದೆಹಲಿ: ಕಳೆದ ತಿಂಗಳು ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿನ ಫಲಿತಾಂಶದ ಬಗ್ಗೆ ಅಧ್ಯಕ್ಷೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಕ್ಷದ ಈ ನೀರಸ ಪ್ರದರ್ಶನ ಅನಿರೀಕ್ಷಿತ ಎಂದಿದ್ದಾರೆ. ಪಕ್ಷದ ಅತಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅಂಗವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಶೀಘ್ರದಲ್ಲಿಯೇ ಸಭೆ ಸೇರಲಿದ್ದು, ಫಲಿತಾಂಶದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ಸೋನಿಯಾ ಶುಕ್ರವಾರ ತಿಳಿಸಿದ್ದಾರೆ. ಈ ಹಿನ್ನೆಡೆಯ ಹಿನ್ನೆಲೆಯಲ್ಲಿ ಸೂಕ್ತ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ. 'ದುರದೃಷ್ಟವಶಾತ್, ಎಲ್ಲ ರಾಜ್ಯಗಳಲ್ಲಿಯೂ ನಮ್ಮ ಪ್ರದರ್ಶನ ಬಹಳ ನಿರಾಶಾದಾಯಕವಾಗಿತ್ತು. ಇದು ಅನಿರೀಕ್ಷಿತ ಎಂದೂ ನಾನು ಹೇಳುತ್ತೇನೆ. ಫಲಿತಾಂಶದ ಪರಾಮರ್ಶೆ ನಡೆಸಲು ನಾವು ಶೀಘ್ರದಲ್ಲಿಯೇ ಸಿಡಬ್ಲ್ಯೂಸಿ ಸಭೆ ನಡೆಸಲಿದ್ದೇವೆ' ಎಂದು ಸೋನಿಯಾ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದರು. ಆನ್‌ಲೈನ್ ಸಭೆಯಲ್ಲಿ ಅವರು ಮಮತಾ ಬ್ಯಾನರ್ಜಿ ಹಾಗೂ ಎಂಕೆ ಸ್ಟಾಲಿನ್ ಅವರನ್ನು ಅಭಿನಂದಿಸಿದರು. ಈ ಸಭೆಯಲ್ಲಿ ಸೋನಿಯಾ, ಕೋವಿಡ್ ಪಿಡುಗನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. 'ಭಾರತವು ಮಾರಕ ಆರೋಗ್ಯ ವಿಪತ್ತಿನ ಬಿಗಿ ಹಿಡಿತದಲ್ಲಿದೆ. ಸಾವಿರಾರು ಜನರು ಸತ್ತಿದ್ದಾರೆ ಮತ್ತು ಲಕ್ಷಾಂತರ ಮಂದಿ ಮೂಲ ಆರೋಗ್ಯ ಸೌಕರ್ಯ, ಆಕ್ಸಿಜನ್, ಜೀವ ಉಳಿಸುವ ಔಷಧಗಳು ಮತ್ತು ಲಸಿಕೆಗಳಿಲ್ಲದೆ ಪರದಾಡುತ್ತಿದ್ದಾರೆ. ಜನರು ಆಸ್ಪತ್ರೆ, ರಸ್ತೆಗಳಲ್ಲಿ ಅಥವಾ ವಾಹನಗಳಲ್ಲಿ ಕಾಯುತ್ತಾ ಜೀವಕ್ಕಾಗಿ ಹೋರಾಡುತ್ತಿರುವುದು ಹೃದಯ ಹಿಂಡುತ್ತದೆ' ಎಂದರು. 'ಮೋದಿ ಸರ್ಕಾರ ಏನು ಮಾಡುತ್ತಿದೆ? ಜನರ ಸಂಕಷ್ಟ ಮತ್ತು ನೋವನ್ನು ದೂರಮಾಡುವ ಬದಲು, ಅದು ಜನರ ಕುರಿತಾದ ಮೂಲಭೂತ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಮರೆತಿದೆ. ಇದಂತೂ ಸ್ಪಷ್ಟ- ವ್ಯವಸ್ಥೆ ವಿಫಲವಾಗಿಲ್ಲ. ಆದರೆ ನಮ್ಮ ದೇಶದ ಜನತೆಯ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ' ಎಂದು ಕಿಡಿಕಾರಿದರು. ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಶೋಚನೀಯ ಪ್ರದರ್ಶನ ನೀಡಿತ್ತು. ಬಂಗಾಳದಲ್ಲಿ ಎಡಪಕ್ಷದೊಂದಿಗೆ ಚುನಾವಣೆಗೆ ಇಳಿದಿದ್ದ ಕಾಂಗ್ರೆಸ್, ಒಂದೂ ಸ್ಥಾನದಲ್ಲಿ ಗೆಲುವು ಕಾಣದೆ ಮುಖಭಂಗ ಅನುಭವಿಸಿದೆ. ಅಸ್ಸಾಂನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸೀಟುಗಳನ್ನು ಪಡೆದಿರುವುದೇ ಸಮಾಧಾನಕರ. ಅಸ್ಸಾಂನಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದ 95 ಸೀಟುಗಳಲ್ಲಿ 29ರಲ್ಲಿ ಗೆಲುವು ಕಂಡಿದೆ. ಕೇರಳದಲ್ಲಿ ಕಳೆದ ಬಾರಿ 41 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಒಂದು ಸೀಟನ್ನಷ್ಟೇ ಕಳೆದುಕೊಂಡಿದೆ. ತಮಿಳುನಾಡಿನಲ್ಲಿ ಸ್ಪರ್ಧಿಸಿದ 25 ಸೀಟುಗಳಲ್ಲಿ 18ರಲ್ಲಿ ಗೆಲುವು ಕಂಡಿದೆ. ಪುದುಚೆರಿಯಲ್ಲಿ ಕಳೆದ ಬಾರಿ 15 ಸೀಟುಗಳಲ್ಲಿ ಗೆದ್ದಿದ್ದ ಪಕ್ಷ, ಈ ಚುನಾವಣೆಯಲ್ಲಿ ಕೇವಲ 2ರಲ್ಲಿ ಜಯಗಳಿಸಿದೆ.