ತಮಿಳುನಾಡಿನಲ್ಲಿ ಮೇಕೆ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ ಸಬ್ ಇನ್‌ಸ್ಪೆಕ್ಟರ್ ಭೀಕರ ಹತ್ಯೆ

ಬೈಕ್‌ನಲ್ಲಿ ಬಂದು ಮೇಕೆ ಕಳವು ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಹಿಡಿಯಲು ಬೆನ್ನಟ್ಟಿದ್ದ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಭಾನುವಾರ ನಸುಕಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ತಿರುಚಿಯ ಹಳ್ಳಿಯೊಂದರಲ್ಲಿ ನಡೆದಿದೆ.

ತಮಿಳುನಾಡಿನಲ್ಲಿ ಮೇಕೆ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ ಸಬ್ ಇನ್‌ಸ್ಪೆಕ್ಟರ್ ಭೀಕರ ಹತ್ಯೆ
Linkup
ತಿರುಚಿ: ಕಳ್ಳರನ್ನು ಹಿಡಿಯಲು ಮುಂದಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಮಾಡಿದ ಎದೆ ನಡುಗಿಸುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಭಾನುವಾರ ನಸುಕಿನ ವೇಳೆ ಈ ಹತ್ಯೆ ನಡೆದಿದೆ. ತಮಿಳುನಾಡಿನ ಜಿಲ್ಲೆಯ ನವಲ್ಪಟ್ಟುವಿನ 55 ವರ್ಷದ ಸ್ಪೆಷಲ್ ಸಬ್ ಇನ್‌ಸ್ಪೆಕ್ಟರ್ ಭೂಮಿನಾಥನ್ ಅವರನ್ನು ಪುದುಕೊಟ್ಟೈ ಜಿಲ್ಲೆಯ ಕೀರನೂರು ಸಮೀಪದ ಕಲಾಮವೂರ್ ಗ್ರಾಮದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಭೂಮಿನಾಥನ್ ಅವರು ಶನಿವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದರು. ಭಾನುವಾರ ನಸುಕಿನ ಅವಧಿಯಲ್ಲಿ ಗುಂಪೊಂದು ವಿವಿಧ ಬೈಕ್‌ಗಳಲ್ಲಿ ಮೇಕೆಗಳನ್ನು ಸಾಗಿಸುತ್ತಿರುವುದನ್ನು ಅವರು ಗಸ್ತಿನಲ್ಲಿದ್ದಾಗ ಗಮನಿಸಿದ್ದರು. ಈ ಪ್ರದೇಶದಲ್ಲಿ ಮೇಕೆ ಕಳವು ಪ್ರಕರಣಗಳು ಸಾಕಷ್ಟು ವರದಿಯಾಗಿತ್ತು. ಹೀಗಾಗಿ ಅವರು ತಾವು ನಿಂತಿದ್ದ ಪೊಲೀಸ್ ಔಟ್‌ಪೋಸ್ಟ್ ಬಳಿ ಮೇಕೆ ಕಳ್ಳರನ್ನು ತಡೆಯಲು ಮುಂದಾದರು. ಆದರೆ ಬೈಕ್‌ನಲ್ಲಿದ್ದ ಗ್ಯಾಂಗ್ ಅಲ್ಲಿ ನಿಲ್ಲಿಸದೆ ಪರಾರಿಯಾಗಿತ್ತು. ಕೂಡಲೇ ತಮ್ಮ ದ್ವಿಚಕ್ರ ವಾಹನ ಏರಿದ ಭೂಮಿನಾಥನ್ ಅವರನ್ನು ಹಿಂಬಾಲಿಸಲು ಆರಂಭಿಸಿದರು. ಆ ಗ್ಯಾಂಗ್ ಪುದುಕೊಟ್ಟೈ ಜಿಲ್ಲೆಯ ಕೀರನೂರು ಸಮೀಪದ ಕಲಾಮವೂರ್ ಗ್ರಾಮದ ಒಳಗೆ ನುಗ್ಗಿತ್ತು. ಕೆಲವು ನಿಮಿಷಗಳ ಚೇಸಿಂಗ್ ಬಳಿಕ ರಾತ್ರಿ 2.30-3 ಗಂಟೆ ಸುಮಾರಿಗೆ ಕಲಾಮವೂರ್ ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಭೂಮಿನಾಥನ್ ಹಿಡಿದಿದ್ದರು ಎನ್ನಲಾಗಿದೆ. ಉಳಿದವರು ಪರಾರಿಯಾಗಿದ್ದರು. ಕೈಗೆ ಸಿಕ್ಕ ಇಬ್ಬರು ಮೇಕೆ ಕಳ್ಳರನ್ನು ಹಿಡಿದುಕೊಂಡು, ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮತ್ತಷ್ಟು ಪೊಲೀಸರನ್ನು ಅಲ್ಲಿಗೆ ಕರೆಯಿಸಲು ಪ್ರಯತ್ನಿಸಿದಾಗ ಒಬ್ಬ ಕಳ್ಳ ಬಚ್ಚಿಟ್ಟಿದ್ದ ಮಚ್ಚನ್ನು ಹೊರತೆಗೆದು ಪೊಲೀಸ್ ಅಧಿಕಾರಿಯ ತಲೆಗೆ ಬೀಸಿದ್ದಾನೆ. ತಲೆಗೆ ಭಾರಿ ದೊಡ್ಡ ಏಟು ಬಿದ್ದಿದ್ದರಿಂದ ಭೂಮಿನಾಥನ್ ಕುಸಿದುಬಿದ್ದಿದ್ದಾರೆ. ಕೂಡಲೇ ಕೊಲೆಗಡುಕರು ಅಲ್ಲಿಂದ ಪರಾರಿಯಾಗಿದ್ದಾರೆ. ತಲೆಗೆ ಮಾರಣಾಂತಿಕ ಪೆಟ್ಟು ಬಿದ್ದಿದ್ದರಿಂದ ಭೂಮಿನಾಥನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕೀರನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಭೂಮಿನಾಥನ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಚಿಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನೀರು ತುಂಬಿದ ಸಬ್‌ವೇ ಒಂದರಲ್ಲಿ ಗ್ಯಾಂಗ್‌ನ ಇಬ್ಬರನ್ನು ಸಬ್ ಇನ್‌ಸ್ಪೆಕ್ಟರ್ ಅಡ್ಡಗಟ್ಟಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಎಸ್‌ಎಸ್‌ಐ ಭೂಮಿನಾಥನ್ ಅವರ ಹತ್ಯೆಯ ಬಗ್ಗೆ ತೀವ್ರ ಕಳವಳ ಮತ್ತು ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಎಸ್ ಭೂಮಿನಾಥನ್ ಅವರ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ, ಆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.