ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಲಸಿಕೆ ಸಿಗುತ್ತಿವೆ?: ಕೇಂದ್ರಕ್ಕೆ ದಿಲ್ಲಿ ಸರ್ಕಾರದ ಪ್ರಶ್ನೆ

ರಾಜ್ಯಗಳಿಗೆ ನೀಡಲು ಲಸಿಕೆ ಕೊರತೆ ಉಂಟಾಗಿರುವಾಗ ಖಾಸಗಿ ಆಸ್ಪತ್ರೆಗಳು ಹೇಗೆ ಲಸಿಕೆ ಪಡೆದುಕೊಳ್ಳುತ್ತಿವೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಲಸಿಕೆ ಸಿಗುತ್ತಿವೆ?: ಕೇಂದ್ರಕ್ಕೆ ದಿಲ್ಲಿ ಸರ್ಕಾರದ ಪ್ರಶ್ನೆ
Linkup
ಹೊಸದಿಲ್ಲಿ: ಸರ್ಕಾರದ ಬಳಿ ಸಾಕಷ್ಟು ಕೋವಿಡ್ ಲಸಿಕೆಗಳು ಇಲ್ಲದಿದ್ದರೂ, ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಲಸಿಕೆಗಳು ಸಿಗುತ್ತಿವೆ ಎಂದು ಕೇಂದ್ರ ಸರ್ಕಾರವನ್ನು ಉಪ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ವಿಡಿಯೋ ಹೇಳಿಕೆಯೊಂದನ್ನು ಶನಿವಾರ ಬಿಡುಗಡೆ ಮಾಡಿರುವ ಸಿಸೋಡಿಯಾ, ಲಸಿಕೆ ಕೊರತೆಯಿಂದಾಗಿ ರಾಜ್ಯ ಸರ್ಕಾರ ಕಳೆದ ವಾರವೇ 18-44 ವಯೋಮಾನದ ಜನರ ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ. ದೆಹಲಿಯಲ್ಲಿನ ಯುವಜನರಿಗೆ ಹಾಗೂ ಉಳಿದವರಿಗೆ ಜೂನ್ 10ಕ್ಕಿಂತ ಮುನ್ನ ದೊರಕುವ ನಿರೀಕ್ಷೆಯಿಲ್ಲ ಎಂದು ತಿಳಿಸಿದ್ದಾರೆ. ಲಸಿಕೆ ಹಂಚಿಕೆ ವ್ಯವಸ್ಥೆಯ ವಿಚಾರದಲ್ಲಿ ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಸಿಸೋಡಿಯಾ, ರಾಜ್ಯ ಸರ್ಕಾರಗಳಿಗೆ ವಿತರಿಸಲು ಕೇಂದ್ರದ ಬಳಿ ಸಾಕಷ್ಟು ಸಂಗ್ರಹ ಇಲ್ಲದೆ ಇದ್ದರೆ, ಖಾಸಗಿ ಆಸ್ಪತ್ರೆಗಳು ಹೇಗೆ ಡೋಸ್‌ಗಳನ್ನು ಪಡೆದುಕೊಳ್ಳುತ್ತಿವೆ ಎಂದು ಪ್ರಶ್ನಿಸಿದ್ದಾರೆ. 'ಯುವಜನರಿಗೆ ಲಸಿಕೆಗಳು ಜೂನ್ ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ನಮಗೆ ತಿಳಿಸಿದೆ. ಆದರೆ ಜೂನ್ 10 ಒಳಗಂತೂ ಅವು ನಮಗೆ ಸಿಗುವುದಿಲ್ಲ' ಎಂದು ಹೇಳಿದ್ದಾರೆ. 18-44 ವರ್ಷದ ಗುಂಪಿನ 92 ಲಕ್ಷ ಫಲಾನುಭವಿಗಳಿಗಾಗಿ ದಿಲ್ಲಿಯು 5.5 ಲಕ್ಷ ಡೋಸ್ ಲಸಿಕೆ ಪಡೆಯುವ ನಿರೀಕ್ಷೆಯಿದೆ. ಆದರೆ ಈ ವರ್ಗದ ಜನತೆಗಾಗಿ ನಮಗೆ 1.84 ಕೋಟಿ ಡೋಸ್‌ಗಳು ಬೇಕಿವೆ. ಕೇಂದ್ರವು ಏಪ್ರಿಲ್‌ನಲ್ಲಿ 4.5 ಲಕ್ಷ ಡೋಸ್ ಮತ್ತು ಮೇ ತಿಂಗಳಲ್ಲಿ 3.67 ಲಕ್ಷ ಡೋಸ್‌ಗಳಷ್ಟು ನೀಡಿತ್ತು. ಒಟ್ಟು 8.17 ಲಕ್ಷ ಡೋಸ್‌ಗಳನ್ನು ಉತ್ಪಾದಕರಿಂದ ಖರೀದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.