ಈ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ!: ತೆಲಂಗಾಣ ಸಚಿವರಿಗೆ ಟ್ವಿಟ್ಟರ್‌ನಲ್ಲಿ ದೂರು

ತಾವು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯಲ್ಲಿ ಲೆಗ್ ಪೀಸ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ ಟ್ವಿಟ್ಟರ್‌ನಲ್ಲಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ಯಾಗ್ ಮಾಡಿ ದೂರು ನೀಡಿದ್ದು, ತಮಾಷೆಯ ವಿಚಾರವಾಗಿ ಪರಿಣಮಿಸಿದೆ.

ಈ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ!: ತೆಲಂಗಾಣ ಸಚಿವರಿಗೆ ಟ್ವಿಟ್ಟರ್‌ನಲ್ಲಿ ದೂರು
Linkup
ಹೈದರಾಬಾದ್: ದೇಶಾದ್ಯಂತ ಪ್ರಿಯರಿಗೇನೂ ಕಡಿಮೆ ಇಲ್ಲ. ಈ ಬಿರಿಯಾನಿಗಳಲ್ಲಿ ಹೈದರಾಬಾದ್ ಬಿರಿಯಾನಿಗೆ ವಿಶಿಷ್ಟ ಸ್ಥಾನವಿದೆ. ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿಯೂ 'ಬಿರಿಯಾನಿ ಮನೆ'ಗಳು ಹುಟ್ಟಿಕೊಂಡಿವೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಬಿರಿಯಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ತೆಲಂಗಾಣದಲ್ಲಿ ಬಿರಿಯಾನಿಯೊಂದರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಹಾಗೂ ಸಂಸದರನ್ನೂ ಚರ್ಚೆಗೆ ಎಳೆದು ತಂದಿದೆ. ಬಿರಿಯಾನಿ ಪ್ರಿಯನೊಬ್ಬನ ಕಿತಾಪತಿ ಈಗ ತಮಾಷೆಯ ವಿಚಾರವಾಗಿ ಚರ್ಚೆಯಾಗುತ್ತಿದೆ. ಬಿರಿಯಾನಿ ಆರ್ಡರ್ ಮಾಡಿ ಮನೆಗೆ ತರಿಸಿಕೊಂಡಾತನೊಬ್ಬ ಅದರ ಗುಣಮಟ್ಟದ ಬಗ್ಗೆ ಜೊಮ್ಯಾಟೋಗೆ ದೂರು ನೀಡಿದ್ದಾನೆ. ಆದರೆ ತನ್ನ ಪೋಸ್ಟ್‌ನಲ್ಲಿ ತೆಲಂಗಾಣದ ನಗರಾಭಿವೃದ್ಧಿ ಸಚಿವ ಅವರನ್ನೂ ಟ್ಯಾಗ್ ಮಾಡಿದ್ದಾನೆ. ತೊಟಕುರಿ ರಘುಪತಿ ಎಂಬಾತ ತಾನು ಆರ್ಡರ್ ಮಾಡಿ ತರಿಸಿಕೊಂಡ ಬಿರಿಯಾನಿಯ ಬಗ್ಗೆ ಟ್ವಿಟ್ಟರ್‌ನಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾನೆ. ಬಿರಿಯಾನಿಯ ಗುಣಮಟ್ಟ ಚೆನ್ನಾಗಿರಲಿಲ್ಲ ಎನ್ನುವುದು ಆತನ ತಕರಾರು. ತಾನು ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹೆಚ್ಚುವರಿ ಮಸಾಲೆ ಮತ್ತು ಹೆಚ್ಚುವರಿ ಚಿಕನ್ ಲೆಗ್ ಪೀಸ್ ಇರಲಿಲ್ಲ ಎಂದು ಅದರ ಫೋಟೊದೊಂದಿಗೆ ಅಸಮಾಧಾನ ಹಂಚಿಕೊಂಡಿದ್ದ. ಆದರೆ, ಆತ ಕೆಟಿ ರಾಮರಾವ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನ್ನು ಕೂಡ ಟ್ಯಾಗ್ ಮಾಡಿದ್ದು ಇದಕ್ಕೆ ತಮಾಷೆಯ ತಿರುವು ನೀಡಿದೆ. ಟ್ವಿಟ್ಟರ್‌ನಲ್ಲಿ ಕೋವಿಡ್ ಸಂಬಂಧಿ ಮನವಿಗಳು ಹಾಗೂ ಅಹವಾಲುಗಳನ್ನು ಪರಿಶೀಲಿಸಿ ಅದಕ್ಕೆ ನೆರವು ನೀಡುವ ಕೆಲಸ ಮಾಡುತ್ತಿರುವ ಕೆಟಿಆರ್, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಜನರ ಗಮನ ಸೆಳೆಯುತ್ತಿದ್ದಂತೆಯೇ ರಘುಪತಿ ಅದನ್ನು ಡಿಲೀಟ್ ಮಾಡಿದ್ದಾನೆ. ಆದರೆ ಅದರ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. 'ಇದಕ್ಕೆ ನನ್ನನ್ನೇಕೆ ಟ್ಯಾಗ್ ಮಾಡಿದ್ದೀರಿ ಸಹೋದರ? ನನ್ನಿಂದ ನೀವು ಏನನ್ನು ನಿರೀಕ್ಷಿಸಿದ್ದೀರಿ?' ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ. ಅದಕ್ಕೆ ರಘುಪತಿ ಉತ್ತರ ನೀಡಲು ಹೋಗದಿದ್ದರೂ, ಕೆಟಿಆರ್ ಪ್ರತಿಕ್ರಿಯೆ ನೀಡಿದ್ದು ಮೀಮ್‌ಗಳಿಗೆ ಆಹಾರವಾಗಿದೆ. ಅಷ್ಟೇ ಅಲ್ಲ, ಈ ಟ್ವೀಟ್ ಅನ್ನು ಸಂಸದ ಅಸಾದುದ್ದೀನ್ ಓವೈಸಿ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿಕೊಂಡಿದ್ದಾರೆ. 'ಕೆಟಿಆರ್ ಕಚೇರಿ ಕೂಡಲೇ ಪ್ರತಿಕ್ರಿಯೆ ನೀಡಬೇಕು' ಎಂದು ನಗುವಿನ ಎಮೋಜಿ ಹಾಕಿ ಓವೈಸಿ ಕಾಲೆಳೆದಿದ್ದಾರೆ. 'ಸಚಿವ ಕೆಟಿಆರ್ ಮತ್ತು ಅವರ ತಂಡವು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ವೈದ್ಯಕೀಯ ಅಗತ್ಯಗಳಿಗೆ ಸ್ಪಂದಿಸುತ್ತಿವೆ ಎಂದು ಹೇಳಬೇಕು' ಎಂದು ಓವೈಸಿ ಹೇಳಿದ್ದಾರೆ. ಈ ಟ್ವೀಟ್ ಸಾಂಕ್ರಾಮಿಕದಿಂದ ನಲುಗಿದ್ದ ಜನರಲ್ಲಿ ನಗುಮೂಡಿಸಲು ನೆರವಾಗುತ್ತಿದೆ. ನೆಟ್ಟಿಗರು ಕೆಟಿಆರ್ ಅವರ ಪ್ರತಿಕ್ರಿಯೆಯನ್ನು ಮೀಮ್‌ಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. 'ಲೆಕ್ ಪೀಸ್ ಅನ್ನು ಕಡ್ಡಾಯ ಮಾಡಿಸಿ' ಎಂದು ಕೆಲವರು ಕೆಟಿಆರ್‌ಗೆ ಸಲಹೆ ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಗುವಂತೆ ಮಾಡಿದ್ದಕ್ಕೆ ಕೆಟಿಆರ್‌ಗೆ ಧನ್ಯವಾದ ಎಂದು ಕೆಲವು ಹೇಳಿದ್ದಾರೆ. 'ಉತ್ತಮ ಬಿರಿಯಾನಿ ಪಡೆಯುವುದು ನಿಜಕ್ಕೂ ರಾಷ್ಟ್ರೀಯ ಮಹತ್ವದ ಸಂಗತಿಯಾಗಿದೆ' ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.