ಕೊರೊನಾ 2ನೇ ಅಲೆಯ ನಡುವೆಯೂ Q1ನಲ್ಲಿ ಇನ್ಫೋಸಿಸ್‌ಗೆ 5,195 ಕೋಟಿ ರೂ. ಲಾಭ

ಇನ್ಫೋಸಿಸ್‌ 2021-22ರ ಮೊದಲ ತ್ರೈಮಾಸಿಕದಲ್ಲಿ 5,195 ಕೋಟಿ ರೂ. ಲಾಭಗಳಿಸಿದ್ದು, ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭ ಶೇ. 2.3ರಷ್ಟು ಏರಿಕೆಯಾಗಿದೆ. ಇದೇ ವೇಳೆ 2021-22ರಲ್ಲಿ 35,000 ಹೊಸಬರನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿ ಹೇಳಿದೆ.

ಕೊರೊನಾ 2ನೇ ಅಲೆಯ ನಡುವೆಯೂ Q1ನಲ್ಲಿ ಇನ್ಫೋಸಿಸ್‌ಗೆ 5,195 ಕೋಟಿ ರೂ. ಲಾಭ
Linkup
ದೇಶದ ಎರಡನೇ ಅತೀ ದೊಡ್ಡ ಸೇವಾ ಸಂಸ್ಥೆ 2021-22ರ ಮೊದಲ ತ್ರೈಮಾಸಿಕದಲ್ಲಿ 5,195 ಕೋಟಿ ರೂ. ಲಾಭಗಳಿಸಿದೆ. ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಲಾಭದಲ್ಲಿ ಶೇ. 2.3ರಷ್ಟು ಏರಿಕೆಯಾಗಿದೆ. ಲಾಭ ಏರಿಕೆಯಾದ ಬೆನ್ನಿಗೆ ಈ ವರ್ಷದ ನಿವ್ವಳ ಲಾಭದ ನಿರೀಕ್ಷಿತ ಪ್ರಮಾಣವನ್ನೂ ಶೇ. 12-14 ರಿಂದ ಶೇ. 14-16ಕ್ಕೆ ಕಂಪನಿ ಏರಿಕೆ ಮಾಡಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿ 27,896 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ. 6ರಷ್ಟು ಏರಿಕೆಯಾಗಿದೆ. "ಉದ್ಯೋಗಿಗಳ ದಕ್ಷತೆ ಮತ್ತು ಗ್ರಾಹಕರ ನಂಬಿಕೆಯಿಂದ ಕಳೆದೊಂದು ದಶಕದಲ್ಲೇ ಮೊದಲ ಬಾರಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಶೇ. 16.9ರಷ್ಟು ಬೆಳವಣಿಗೆ ದಾಖಲಿಸಿದ್ದೇವೆ. ಸ್ಥಿರ ನಗದು ದರದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 4.8ರಷ್ಟು ಬೆಳವಣಿಗೆ ದಾಖಲಿಸಿದ್ದೇವೆ," ಎಂದು ಇನ್ಫೋಸಿಸ್‌ ಸಿಇಒ ಮತ್ತು ಎಂಡಿ ಸಲೀಲ್‌ ಪಾರೇಖ್‌ ಹೇಳಿದ್ದಾರೆ. ಇನ್ನು ಮೊದಲ ತ್ರೈಮಾಸಿಕದಲ್ಲಿ19,300 ಕೋಟಿ ರೂ. (2.6 ಬಿಲಿಯನ್‌ ಡಾಲರ್‌) ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಜೂನ್‌ ಅಂತ್ಯಕ್ಕೆ ಕಂಪನಿಯ ಗ್ರಾಹಕರ ಸಂಖ್ಯೆ 1,659ಕ್ಕೆ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಈ ಸಂಖ್ಯೆ 1,626 ಆಗಿತ್ತು. 2021-22ರಲ್ಲಿ ಜಾಗತಿಕವಾಗಿ 35,000 ಹೊಸ ಉದ್ಯೋಗಿಗಳನ್ನು ಕಾಲೇಜುಗಳಿಂದ ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಸಿಒಒ ಪ್ರವೀಣ್‌ ರಾವ್‌ ತಿಳಿಸಿದ್ದಾರೆ. ಸದ್ಯ ಕಂಪನಿಯಲ್ಲಿ 1.67 ಲಕ್ಷ ಉದ್ಯೋಗಿಗಳಿದ್ದಾರೆ. ಮಾರ್ಚ್‌ನಲ್ಲಿ ಈ ಸಂಖ್ಯೆ 2.59 ಲಕ್ಷ ಆಗಿತ್ತು. ಬುಧವಾರ ಇನ್ಫೋಸಿಸ್‌ ಷೇರುಗಳು ಶೇ. 2.07ರಷ್ಟು ಮೇಲೇರಿದ್ದು 1,576.90 ರೂ. ತಲುಪಿದೆ. 2021ರಲ್ಲೇ ಕಂಪನಿಯ ಷೇರುಗಳು ಶೇ. 26ರಷ್ಟು ಏರಿಕೆ ದಾಖಲಿಸಿವೆ.