ಟ್ಯಾಕ್ಸಿ ಡ್ರೈವರ್‌ಗಳಿಗೆ ಕೋವಿಡ್‌ ರಿಲೀಫ್‌: 1.20 ಲಕ್ಷ ಚಾಲಕರ ಖಾತೆಗೆ ತಲಾ ₹3000 ಜಮೆ

ಲಾಕ್‌ಡೌನ್‌ ಜಾರಿ ಹಿನ್ನೆಲೆ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಚಾಲಕರ ಪೈಕಿ 1.20 ಲಕ್ಷಕ್ಕೂ ಹೆಚ್ಚು ಆಟೊ ಮತ್ತು ಕ್ಯಾಬ್‌ ಚಾಲಕರ ಖಾತೆಗೆ ಶನಿವಾರ ತಲಾ 3 ಸಾವಿರ ರೂ. ನೇರ ಜಮೆ ಮಾಡಲಾಗಿದೆ.

ಟ್ಯಾಕ್ಸಿ ಡ್ರೈವರ್‌ಗಳಿಗೆ ಕೋವಿಡ್‌ ರಿಲೀಫ್‌: 1.20 ಲಕ್ಷ ಚಾಲಕರ ಖಾತೆಗೆ ತಲಾ ₹3000 ಜಮೆ
Linkup
ಬೆಂಗಳೂರು: ಲಾಕ್‌ಡೌನ್‌ ಜಾರಿ ಹಿನ್ನೆಲೆ ಆರ್ಥಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಚಾಲಕರ ಪೈಕಿ 1.20 ಲಕ್ಷಕ್ಕೂ ಹೆಚ್ಚು ಆಟೊ ಮತ್ತು ಕ್ಯಾಬ್‌ ಚಾಲಕರ ಖಾತೆಗೆ ಶನಿವಾರ ತಲಾ 3 ಸಾವಿರ ರೂ. ನೇರ ಜಮೆ ಮಾಡಲಾಗಿದೆ. ಸಹಾಯಧನ ಪಡೆಯಲು ಕಳೆದ ಒಂದು ವಾರದಲ್ಲಿ 2.20 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಮೊದಲನೇ ಹಂತದಲ್ಲಿ 1.20 ಲಕ್ಷ ಜನರಿಗೆ ಹಣ ಜಮೆ ಮಾಡಲಾಗಿದೆ. ಇನ್ನೊಂದು ವಾರದೊಳಗೆ ಉಳಿದವರಿಗೆ ವಿತರಣೆ ನಡೆಯಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ವೀಕೃತ ಅರ್ಜಿಗಳಲ್ಲಿ 12827 ಅರ್ಜಿಗಳ ಸಿಂಧುತ್ವ ಪರಿಶೀಲನೆ ನಡೆಯುತ್ತಿದೆ. ಆಧಾರ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ಇರುವ ಹೆಸರು ಮತ್ತು ದಿನಾಂಕ ತಾಳೆ ಆಗದಿರುವುದು, ಲೈಸೆನ್ಸ್‌ ಅವಧಿ ವಿಸ್ತರಣೆ ಆಗದಿರುವುದು ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಗಳಿಂದಾಗಿ ಪರಿಶೀಲನೆ ಬಾಕಿ ಇದೆ. ನಕಲಿ ದಾಖಲೆಗಳನ್ನು ಸಲ್ಲಿಸಿರುವ 538 ಅರ್ಜಿಗಳನ್ನು ಇಲಾಖೆ ತಿರಸ್ಕರಿಸಿದೆ. ಕೊರೊನಾ ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ ನಂತರ ಆಟೋ ಮತ್ತು ಕ್ಯಾಬ್‌ ಚಾಲಕರ ಆಸರೆಗೆ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿತ್ತು. ಸೇವಾ ಸಿಂಧು ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಲು ಸರಕಾರ ಸೂಚಿಸಿತ್ತು. ಪ್ರಾಯೋಗಿಕವಾಗಿ 5 ಖಾತೆಗಳಿಗೆ ಹಣ ಜಮೆ ಮಾಡಲು ಖಜಾನೆ ಇಲಾಖೆಗೆ ಕಳುಹಿಸಲಾಗಿತ್ತು. ಅದು ಯಶಸ್ವಿಯಾದ ಬಳಿಕ 1.20ಲಕ್ಷ ಜನರಿಗೆ ಜಮೆ ಮಾಡಲಾಯಿತು. ಅನರ್ಹರಿಗೂ ಸಹಾಯಧನ: ಕ್ಯಾಬ್‌ಗಳನ್ನು ಬಾಡಿಗೆ ನೀಡಿದ್ದ ಮಾಲೀಕರು ಡ್ರೈವಿಂಗ್‌ ಲೈಸೆನ್ಸ್‌ ಜತೆಗೆ ಮತ್ತು ದಾಖಲೆಗಳನ್ನು ಸೇವಾಸಿಂಧು ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯುತ್ತಿದ್ದಾರೆ. ನಿಜವಾದ ವಾಹನ ಚಾಲಕರಿಗೆ ಸಹಾಯಧನ ಸಿಗುತ್ತಿಲ್ಲಎಂಬ ಆರೋಪ ಕೇಳಿಬರುತ್ತಿದೆ. ಈ ಸಮಸ್ಯೆ ನಿರ್ವಹಣೆಗೆ ಸರಕಾರ ತಂತ್ರಾಂಶದ ಮೂಲಕ ಪರಿಹಾರ ಕಂಡುಹಿಡಿಯಬೇಕಿದೆ ಎಂದು ಅಧಿಕಾರಿಯೊಬ್ಬರು ವಿಕಗೆ ತಿಳಿಸಿದ್ದಾರೆ. ಹೆಚ್ಚು ಅರ್ಜಿ ಸಲ್ಲಿಸಿದ 3 ಜಿಲ್ಲೆಗಳು:
  • ಬೆಂಗಳೂರು ನಗರ - 83797
  • ದಕ್ಷಿಣ ಕನ್ನಡ - 13175
  • ಮೈಸೂರು - 12706
ಕಡಿಮೆ ಅರ್ಜಿ ಸಲ್ಲಿಸಿದ 3 ಜಿಲ್ಲೆಗಳು:
  • ಯಾದಗಿರಿ - 824
  • ಗದಗ - 920
  • ಕೊಪ್ಪಳ - 1091
ಆಟೊ ಚಾಲಕರು - 1.15 ಲಕ್ಷ
  • ಆಟೊ ಕ್ಯಾಬ್‌ - 75175
  • ಮ್ಯಾಕ್ಸಿ ಕ್ಯಾಬ್‌ - 12482