ಗ್ರಾಹಕರಿಗೆ ಆಘಾತ ನೀಡಿದ ಏರ್‌ಟೆಲ್‌, ಪ್ರಿಯೇಪ್ಡ್‌ ಪ್ಲ್ಯಾನ್‌ ದರ 25% ಏರಿಕೆ; ಷೇರು ಬೆಲೆ ಭಾರಿ ಹೆಚ್ಚಳ

ಭಾರ್ತಿ ಏರ್‌ಟೆಲ್‌ ಪ್ರಿಪೇಯ್ಡ್‌ ಚಂದಾ ದರಗಳನ್ನು ಶೇ. 25ರಷ್ಟು ಏರಿಕೆ ಮಾಡುತ್ತಿರುವುದಾಗಿ ಸೋಮವಾರ ಘೋಷಿಸಿದೆ. ನ. 26ರಿಂದ ಈ ಹೊಸ ದರಗಳು ದೇಶದಲ್ಲಿ ಜಾರಿಗೆ ಬರಲಿವೆ ಎಂದಿದ್ದು, ಬಳಕೆದಾರರಿಗೆ ಏರ್‌ಟೆಲ್‌ ಶಾಕ್‌ ನೀಡಿದೆ.

ಗ್ರಾಹಕರಿಗೆ ಆಘಾತ ನೀಡಿದ ಏರ್‌ಟೆಲ್‌, ಪ್ರಿಯೇಪ್ಡ್‌ ಪ್ಲ್ಯಾನ್‌ ದರ 25% ಏರಿಕೆ; ಷೇರು ಬೆಲೆ ಭಾರಿ ಹೆಚ್ಚಳ
Linkup
ಹೊಸದಿಲ್ಲಿ: ಟೆಲಿಕಾಂ ದೈತ್ಯ ಭಾರ್ತಿ ಪ್ರಿಪೇಯ್ಡ್‌ ಚಂದಾ ದರಗಳನ್ನು ಶೇ. 25ರಷ್ಟು ಏರಿಕೆ ಮಾಡುವುದಾಗಿ ಸೋಮವಾರ ಘೋಷಿಸಿದೆ. ನವೆಂಬರ್‌ 26ರಿಂದ ಈ ಹೊಸ ದರಗಳು ದೇಶದಲ್ಲಿ ಜಾರಿಗೆ ಬರಲಿವೆ ಎಂದಿದ್ದು, ಬಳಕೆದಾರರಿಗೆ ಆಘಾತದ ಸುದ್ದಿ ನೀಡಿದೆ. ಈ ನಿರ್ಧಾರ ಗ್ರಾಹಕರಿಗೆ ಆಘಾತ ಉಂಟು ಮಾಡಿದ್ದರೆ, ಏರ್‌ಟೆಲ್‌ ಷೇರುಗಳ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಶುಭ ಸುದ್ದಿಯಾಗಿ ಪರಿಣಮಿಸಿದೆ. ಪರಿಣಾಮ ಏರ್‌ಟೆಲ್‌ ಷೇರುಗಳು 52 ವಾರಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಬಾಂಬೆ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ಕಂಪನಿಯು, "ಆರ್ಥಿಕವಾಗಿ ಆರೋಗ್ಯಕರ ವ್ಯಾಪಾರ ಮಾದರಿಗಾಗಿ, ಬಂಡವಾಳದ ಮೇಲೆ ಸಮಂಜಸವಾದ ಲಾಭವನ್ನು ಪಡೆದುಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ," ಎಂದು ಸಮಜಾಯಿಷಿ ನೀಡಿದೆ. ಪ್ರತಿ ಬಳಕೆದಾರರಿಂದ ಪಡೆಯುವ ಸರಾಸರಿ ಆದಾಯ (ಎಆರ್‌ಪಿಯು) 200 ರೂ. ಇರಬೇಕು ಎಂದು ಭಾರ್ತಿ ಏರ್‌ಟೆಲ್‌ ಪ್ರತಿಪಾದಿಸುತ್ತಾ ಬಂದಿದೆ. ಅಂತಿಮವಾಗಿ ಇದು 300 ರೂ. ಇರಬೇಕು ಎಂದು ಏರ್‌ಟೆಲ್‌ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲೇ ಏರ್‌ಟೆಲ್‌ನ ಎಆರ್‌ಪಿಯು ಗರಿಷ್ಠ ಮಟ್ಟದಲ್ಲಿದ್ದು 150 ರೂ. ಆಸುಪಾಸಿನಲ್ಲಿದೆ. "ಎಆರ್‌ಪಿಯು ಏರಿಕೆಯಿಂದ ನೆಟ್‌ವರ್ಕ್‌ಗಳು ಮತ್ತು ಸ್ಪೆಕ್ಟ್ರಮ್‌ಗೆ ಅಗತ್ಯವಿರುವ ಗಣನೀಯ ಹೂಡಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಾವು ನಂಬುತ್ತೇವೆ. ಇನ್ನೂ ಮುಖ್ಯವಾಗಿ, ಇದು ಭಾರತದಲ್ಲಿ 5G ಅನ್ನು ಹೊರತರಲು ಏರ್‌ಟೆಲ್‌ಗೆ ಸಹಾಯ ಮಾಡಲಿದೆ. ಆದ್ದರಿಂದ, ಮೊದಲ ಹಂತವಾಗಿ, ನವೆಂಬರ್‌ನಿಂದ ಮೊಬೈಲ್‌ ಚಂದಾದಾರಿಕೆ ಶುಲ್ಕವನ್ನು ಹೆಚ್ಚಿಸುತ್ತಿದ್ದೇವೆ. ಅದರಂತೆ ನಮ್ಮ ಹೊಸ ಶುಲ್ಕಗಳು ನವೆಂಬರ್ 26, 2021 ರಿಂದ ಜಾರಿಗೆ ಬರಲಿವೆ," ಎಂದು ಏರ್‌ಟೆಲ್‌ ವಿವರ ನೀಡಿದೆ. ಈಗಿರುವ 79 ರೂ.ಗಳ ಪ್ಲ್ಯಾನ್‌ಗೆ ಶುಕ್ರವಾರದಿಂದ ಬಳಕೆದಾರರು 99 ರೂ. ಪಾವತಿಸಬೇಕಾಗುತ್ತದೆ. 149 ರೂ. ಪ್ಲ್ಯಾನ್‌ ದರ 179 ರೂ.ಗೆ, 1498 ರೂ. ಪ್ಲ್ಯಾನ್‌ ದರ 1,799 ರೂ.ಗೆ ಹಾಗೂ 2,498 ರೂ. ಪ್ಲ್ಯಾನ್‌ ದರ 2,999 ರೂ.ಗೆ ಏರಿಕೆಯಾಗಲಿದೆ. ಡಾಟಾ ಟಾಪ್‌ಅಪ್‌ ದರಗಳು 48 ರೂ.ನಿಂದ 58 ರೂ.ಗೆ, 98 ರೂ.ನಿಂದ 118 ರೂ.ಗೆ, 251 ರೂ.ನಿಂದ 301 ರೂ.ಗೆ ಏರಿಕೆಯಾಗಲಿದೆ. ಈ ಬೆಳವಣಿಗೆ ಬೆನ್ನಲ್ಲೇ ಹೂಡಿಕೆದಾರರು ಏರ್‌ಟೆಲ್‌ ಷೇರುಗಳಿಗೆ ಮುಗಿಬಿದ್ದಿದ್ದು ಸೋಮವಾರದ ಟ್ರೇಡಿಂಗ್‌ ವೇಳೆ ಒಂದು ಹಂತದಲ್ಲಿ ಶೇ. 5ರಷ್ಟು ಏರಿಕೆ ಕಂಡು 52 ವಾರಗಳ ಗರಿಷ್ಠ ದರ 756 ರೂ.ಗೆ ಹೆಚ್ಚಳವಾಗಿತ್ತು. ನಂತರ ಸ್ವಲ್ಪ ಇಳಿಕೆ ಕಂಡು 740 ರೂ.ಗೆ ತಲುಪಿದೆ.