![](https://vijaykarnataka.com/photo/83397691/photo-83397691.jpg)
: ಒಂದೆಡೆ ಕೊರೊನಾ ಸೋಂಕು, ಮತ್ತೊಂದೆಡೆ ಲಾಕ್‌ಡೌನ್.. ಇದರ ನಡುವೆ ಹಣವಿಲ್ಲದ ಅಸಹಾಯಕತೆ.. ಇವೆಲ್ಲದರಿಂದಾಗಿ ಒಂದು ಕುಟುಂಬ ಅನುಭವಿಸಿದ ಅಸಹನೀಯ ಯಾತನೆಯ ಕಥೆ ಇದು..
ಕೆಆರ್ ಪುರಂ ನಿವಾಸಿಯಾದ ಜಾನ್ ಕೆನಡಿ ಹಾಗೂ ಅಮ್ಮು ದಂಪತಿಯ 17 ವರ್ಷದ ಪುತ್ರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಜೀವ ಬಿಟ್ಟಾಗ ಆ ದಂಪತಿಗೆ ದಿಕ್ಕೇ ತೋಚದಂತಾಗಿತ್ತು.
ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಜಾನ್, ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ವಾಪಸ್ ಬಂದು ನೋಡಿದರೆ, ತಮ್ಮ ಮೂವರು ಹೆಣ್ಣು ಮಕ್ಕಳಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಹಿರಿಯ 17 ವರ್ಷದ ಸವಿತಾಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.
ಈ ದಂಪತಿ ಬಳಿ ಆಸ್ಪತ್ರೆಗೆ ಹೋಗಲು ಆಟೋ ರಿಕ್ಷಾಗೆ ಹಣ ನೀಡಲೂ ಶಕ್ತಿ ಇರಲಿಲ್ಲ. ಹೇಗೆ ಹಣ ಹೊಂದಿಸಿಕೊಂಡು ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗಳ ಸ್ಥಿತಿ ಗಂಭೀರವಾಗಿತ್ತು. ಆದ್ರೆ, ಕೋವಿಡ್ ಟೆಸ್ಟ್ ಮಾಡಿಸೋದಕ್ಕೂ ಈ ದಂಪತಿ ಬಳಿ ಹಣ ಇರಲಿಲ್ಲ. ಅಷ್ಟರಲ್ಲಿ ಸಂಬಂಧಿಕರು ಲಾಕ್‌ಡೌನ್ ಮಧ್ಯೆಯೂ ಈ ದಂಪತಿಯ ನೆರವಿಗೆ ಧಾವಿಸಿದರು.
ಆಂಬುಲೆನ್ಸ್‌ಗೆ ಹಣವಿಲ್ಲದ ಕಾರಣ ಸಂಬಂಧಿಕರೊಬ್ಬರ ಕಾರ್‌ನ ಮೂಲಕ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಸವಿತಾ ಸಾವನ್ನಪ್ಪಿದಳು. ದಿಕ್ಕೇ ತೋಚದಂತಾದ ದಂಪತಿ, ಆಸ್ಪತ್ರೆಗೆ ಶವವನ್ನು ಕೊಂಡೊಯ್ದ ಬಳಿಕ, ತಮ್ಮ ಮಗಳಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತು.
ಕೊರೊನಾ ನಿಯಮಾವಳಿ ಪಾಲನೆ ಮಾಡುತ್ತಾ ಅಂತ್ಯಸಂಸ್ಕಾರ ನೆರವೇರಿಸಲು ದಂಪತಿಗೆ ಸಾಧ್ಯವಾಗಲಿಲ್ಲ. ಪಿಪಿಇ ಕಿಟ್ ಖರೀದಿಸಲೂ ಹಣವಿರಲಿಲ್ಲ. ಕ್ರೈಸ್ತ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲು ಕಫೀನ್ ಬಾಕ್ಸ್ ಖರೀದಿಸಲು ಶಕ್ತರಾಗಿರಲಿಲ್ಲ. ಈ ವೇಳೆ, ಸಂಬಂಧಿಕರು ನೆರವಾಗಿ ಕಫೀನ್ ಬಾಕ್ಸ್ ಖರೀದಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.
ಈ ದಂಪತಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 14 ಹಾಗೂ 11 ವರ್ಷದ ಇಬ್ಬರು ಹೆಣ್ಣು ಮಕ್ಕಳು ಶಾಲೆಯ ಆನ್‌ಲೈನ್ ತರಗತಿಗೂ ಹೋಗುತ್ತಿಲ್ಲ. ಏಕೆಂದರೆ, ಆನ್‌ಲೈನ್ ತರಗತಿಗೆ ಹಣ ಕಟ್ಟಲು ದಂಪತಿಗೆ ಸಾಧ್ಯವಾಗಿಲ್ಲ. ಕೊರೊನಾ 2ನೇ ಅಲೆಯಿಂದಾಗಿ ಕೆಲಸ ಕಳೆದುಕೊಂಡ ಜಾನ್ ಹಾಗೂ ಗೃಹಿಣಿಯಾದ ಆತನ ಪತ್ನಿ ಅಮ್ಮು ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತೆ ದಿಕ್ಕೇ ತೋಚದಂತಾಗಿದ್ದಾರೆ.
ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಸವಿತಾ. ನೂರೆಂಟು ಕನಸುಗಳನ್ನು ಕಂಡಿದ್ದಳು. ಎಂಬ್ರಾಯಿಡರಿ ಕಲಿಯಬೇಕು, ವಸ್ತ್ರ ವಿನ್ಯಾಸಕಿ ಆಗಬೇಕು ಎಂದುಕೊಂಡಿದ್ದ ಅವಳ ಕನಸುಗಳೆಲ್ಲವೂ ಸಮಾಧಿಯಾಗಿವೆ.
ಕೆಲವು ಸ್ವಯಂ ಸೇವಕರು, ಸಂಬಂಧಿಕರು ಹಾಗೂ ಹಿತೈಶಿಗಳ ನೆರವಿನೊಂದಿಗೆ ಈ ದಂಪತಿ ತಮ್ಮ ಮೃತ ಪುತ್ರಿಯ ಅಂತ್ಯಸಂಸ್ಕಾರವನ್ನೇನೋ ಮುಗಿಸಿದ್ದಾರೆ. ಆದ್ರೆ, ಈ ಮಧ್ಯದಲ್ಲೇ ಕುಟುಂಬದ ಎಲ್ಲರೂ ಕೊರೊನಾ ಸೋಂಕಿತರಾಗಿದ್ದಾರೆ. ಇವರೆಲ್ಲರ ಚಿಕಿತ್ಸೆಗೆ ಹಣ ಹೊಂದಿಸೋದೇ ಇದೀಗ ಜಾನ್ ಅವರಿಗೆ ದೊಡ್ಡ ಸವಾಲಾಗಿದೆ.