ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ಹಾಹಾಕಾರ..! ಅಡ್ಮಿಶನ್‌ ನಿಲ್ಲಿಸಿವೆ ಸಣ್ಣ ಆಸ್ಪತ್ರೆಗಳು

ಕೊರೊನಾ ಆಸ್ಪತ್ರೆಗಳಾಗಿ ಬದಲಾದ ವಿಕ್ಟೋರಿಯಾ, ಕೆ.ಸಿ. ಜನರಲ್‌, ಬೌರಿಂಗ್‌ ಆಸ್ಪತ್ರೆ ಮತ್ತು ಜಯನಗರ ಆಸ್ಪತ್ರೆಗಳಲ್ಲಿ ಸಾಕಷ್ಟು ಆಕ್ಸಿಜನ್‌ ಪೂರೈಕೆಯಾಗುತ್ತಿದ್ದು, ಇಲ್ಲಿ ಆಕ್ಸಿಜನ್‌ ಅವಶ್ಯವಿರುವ ಸೋಂಕಿತರೆಲ್ಲರಿಗೂ ಆಕ್ಸಿಜನ್‌ ಲಭ್ಯವಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ಹಾಹಾಕಾರ..! ಅಡ್ಮಿಶನ್‌ ನಿಲ್ಲಿಸಿವೆ ಸಣ್ಣ ಆಸ್ಪತ್ರೆಗಳು
Linkup
: ಕೊರೊನಾ ಹೆಚ್ಚಳದಿಂದ ಎಲ್ಲೆಡೆ ಆಕ್ಸಿಜನ್‌ಗೆ ಹಾಹಾಕಾರ ಉಂಟಾಗಿದ್ದು, ಸೋಂಕಿತರು ತತ್ತರಿಸಿ ಹೋಗಿದ್ದಾರೆ. ಕೆಲವು ಕಡೆ ರೋಗಿಗಳು ಆಕ್ಸಿಜನ್‌ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಆಮ್ಲಜನಕದ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಸರಕಾರಿ ಆಸ್ಪತ್ರೆಗಳೇ ಎಷ್ಟೋ ವಾಸಿ. ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕ್ಷಣಕ್ಷಣಕ್ಕೂ ಪ್ರಾಣವಾಯುವಿಗಾಗಿ ಪರಿತಪಿಸುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. 'ಸರಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆಂದು ಹಾಸಿಗೆಗಳನ್ನು ಮೀಸಲಿಟ್ಟಿವೆ. ಆದರೆ ಮುಖ್ಯವಾಗಿ ಬೇಕಾದ ಆಕ್ಸಿಜನ್‌ ಪೂರೈಕೆಯ ಜವಾಬ್ದಾರಿಯನ್ನು ಸರಕಾರ ನಿರ್ವಹಿಸುತ್ತಿಲ್ಲ. ಐಸಿಯು ಮತ್ತು ಎಚ್‌ಡಿಯು ಹಾಸಿಗೆಗಳಿಗೆ ಅಗತ್ಯ ಇರುವುದೇ ಆಕ್ಸಿಜನ್‌. ಅದೇ ಪೂರೈಕೆಯಾಗದಿದ್ದರೆ ಹಾಸಿಗೆ ಹೆಚ್ಚಿಸಿ ಏನು ಪ್ರಯೋಜನ' ಎಂದು ಪ್ರಶ್ನಿಸುತ್ತಾರೆ, ಮತ್ತು ನರ್ಸಿಂಗ್‌ ಹೋಮ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ. ಪ್ರಸನ್ನ. 'ಸದ್ಯ ಖಾಸಗಿ ಆಸ್ಪತ್ರೆಗಳಿಗೆ 300 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅಗತ್ಯವಿದೆ. ಸದ್ಯಕ್ಕೆ ಪೂರೈಕೆಯಾಗುತ್ತಿರುವುದು ಕೇವಲ 150 ಮೆಟ್ರಿಕ್‌ ಟನ್‌ ಮಾತ್ರ. ಅದು ಕೂಡ ಸರಿಯಾದ ಸಮಯಕ್ಕೆ ಪೂರೈಕೆಯಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸೋಂಕಿತರಿಗೆ ಹೇಗೆ ತಾನೆ ಆಕ್ಸಿಜನ್‌ ನೀಡಲು ಸಾಧ್ಯ. ಸರಕಾರ ಭರವಸೆಯಲ್ಲಿಯೇ ದಿನಗಳನ್ನು ಮುಂದೂಡುತ್ತಿದೆಯೇ ಹೊರತು ಪೂರೈಕೆ ಮಾಡುತ್ತಿಲ್ಲ' ಎಂದು 'ಫನಾ' ಆರೋಪಿಸಿದೆ. 'ಆಕ್ಸಿಜನ್‌ ಕೊರತೆಯಿಂದ ಬಹಳಷ್ಟು ಚಿಕ್ಕ ಪುಟ್ಟ ಆಸ್ಪತ್ರೆಗಳು ಕೋವಿಡ್‌ ಸೋಂಕಿತರ ದಾಖಲಾತಿಯನ್ನೇ ನಿಲ್ಲಿಸಿವೆ. ಆಸ್ಪತ್ರೆಯ ಒಳಗೆ ಸೇರಿಸಿಕೊಂಡ ಬಳಿಕ ರೋಗಿಯ ಆರೈಕೆಗೆ ಬೇಕಾಗುಷ್ಟು ಆಕ್ಸಿಜನ್‌ ಪೂರೈಕೆ ಇರಬೇಕು. ಪ್ರಾಣದ ಜತೆ ಚೆಲ್ಲಾಟವಾಡಲು ಸಾಧ್ಯವಿಲ್ಲ' ಎನ್ನುತ್ತಾರೆ ಫನಾ ಅಧ್ಯಕ್ಷರು. 'ಆಕ್ಸಿಜನ್‌ ಕೊರತೆ ಇಲ್ಲಎಂದು ಸರಕಾರ ಹೇಳುತ್ತಲೇ ಇದೆ. ಆದರೆ ಪೂರೈಕೆ ಮಾತ್ರ ಆಗುತ್ತಿಲ್ಲ. ಸಣ್ಣ ಪುಟ್ಟ ಆಸ್ಪತ್ರೆಗಳಿಗೂ ಆಕ್ಸಿಜನ್‌ ಪೂರೈಕೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮ ಸ್ಥಿತಿ ತಲುಪಲಿದೆ' ಎನ್ನುತ್ತಾರೆ ಡಾ. ಪ್ರಸನ್ನ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆಯತ್ತ ಗಮನ ನೀಡದಿದ್ದರೆ ಇನ್ನಷ್ಟು ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. ಸರಕಾರಿ ಆಸ್ಪತ್ರೆಗಳೇ ವಾಸಿ: ಕೊರೊನಾ ಆಸ್ಪತ್ರೆಗಳಾಗಿ ಬದಲಾದ ವಿಕ್ಟೋರಿಯಾ, ಕೆ.ಸಿ. ಜನರಲ್‌, ಬೌರಿಂಗ್‌ ಆಸ್ಪತ್ರೆ ಮತ್ತು ಜಯನಗರ ಆಸ್ಪತ್ರೆಗಳಲ್ಲಿ ಸಾಕಷ್ಟು ಆಕ್ಸಿಜನ್‌ ಪೂರೈಕೆಯಾಗುತ್ತಿದ್ದು, ಇಲ್ಲಿ ಆಕ್ಸಿಜನ್‌ ಅವಶ್ಯವಿರುವ ಸೋಂಕಿತರೆಲ್ಲರಿಗೂ ಆಕ್ಸಿಜನ್‌ ಲಭ್ಯವಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. 'ನಗರದ ಬಹುತೇಕ ಸರಕಾರಿ ಆಸ್ಪತ್ರೆಗಳಿಗೆ ಪ್ರಾಕ್ಸಿಯರ್‌ ಪ್ರೈ. ಲಿ. ಆಕ್ಸಿಜನ್‌ ಪೂರೈಕೆ ಮಾಡುತ್ತಿದ್ದು, ಸಕಾಲದಲ್ಲಿ ಪೂರೈಕೆಯಾಗುತ್ತಿದೆ. ಆರಂಭದಲ್ಲಿ ಕೆಲವು ಸಮಯ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ ತೊಂದರೆ ಏನೂ ಆಗಿರಲಿಲ್ಲ. ಎಲ್ಲಾ ಆಸ್ಪತ್ರೆಗೆ ಆಕ್ಸಿಜನ್‌ ಪೂರೈಕೆ ಮಾಡುವುದರಿಂದ ಬರುವುದು ತುಸು ವಿಳಂಬವಾಗಬಹುದೇ ಹೊರತು ಆಕ್ಸಿಜನ್‌ ಕೊರತೆ ಆಗುತ್ತಿಲ್ಲ' ಎನ್ನುತ್ತಾರೆ ಅಧಿಕಾರಿಯೊಬ್ಬರು.