ಲಸಿಕಾ ಅಭಿಯಾನದಲ್ಲಿ ಗುರಿ ಮುಟ್ಟದ ಬಿಬಿಎಂಪಿ: 3ನೇ ಅಲೆ ಭೀತಿಯಲ್ಲೂ ಹೆಚ್ಚುತ್ತಿಲ್ಲ ವೇಗ..!

ಬೆಂಗಳೂರು ನಗರದಲ್ಲಿ ಅಪಾರ್ಟ್‌ಮೆಂಟ್‌ ಸಿಬ್ಬಂದಿಗಳೂ ಸೇರಿ ಸುಮಾರು 11 ಲಕ್ಷ ಜನರು ವಾಸಿಸುತ್ತಿದ್ದಾರೆ. ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಆದರೂ ಲಕ್ಷದ ಗುರಿ ತಲುಪಲಾಗುತ್ತಿಲ್ಲ.

ಲಸಿಕಾ ಅಭಿಯಾನದಲ್ಲಿ ಗುರಿ ಮುಟ್ಟದ ಬಿಬಿಎಂಪಿ: 3ನೇ ಅಲೆ ಭೀತಿಯಲ್ಲೂ ಹೆಚ್ಚುತ್ತಿಲ್ಲ ವೇಗ..!
Linkup
: ಬೃಹತ್‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್‌ ಅಂದುಕೊಂಡಷ್ಟು ಗುರಿ ತಲುಪುತ್ತಿಲ್ಲ. ಪ್ರತಿ ದಿನ ಒಂದು ಲಕ್ಷ ಜನರಿಗೆ ನೀಡುವ ಗುರಿ ಇಟ್ಟುಕೊಂಡಿತ್ತು. ಆದರೆ ಇದುವರೆಗೆ ಕೇವಲ ನಾಲ್ಕು ಬಾರಿ ಮಾತ್ರ ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಉಳಿದಂತೆ ಸರಾಸರಿ 70 ರಿಂದ 80 ಸಾವಿರ ಜನರಿಗೆ ಮಾತ್ರ ಪ್ರತಿದಿನ ಲಸಿಕೆ ನೀಡಲಾಗುತ್ತಿದೆ. ಅಂದುಕೊಂಡ ಗುರಿ ಸಾಧಿಸಿದ್ದೇ ಆದಲ್ಲಿ ಬಿಬಿಎಂಪಿ ದೇಶದ ಲಸಿಕಾ ಅಭಿಯಾನದಲ್ಲಿ ಎರಡನೇ ಸ್ಥಾನದಲ್ಲಿಇರುತ್ತಿತ್ತು. ಸದ್ಯ ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನದಲ್ಲಿ ದಿಲ್ಲಿ ಮತ್ತು ಮುಂಬಯಿ ನಗರಗಳಿವೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟ ಶೇ. 71 ಹಾಗೂ 18-44 ವರ್ಷ ವಯೋಮಾನದ ಶೇ.34ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಬಿಬಿಎಂಪಿ ಇದುವರೆಗೆ 48 ಲಕ್ಷ ಕೋವಿಡ್‌ ಲಸಿಕೆ ನೀಡಿದೆ. ನಗರ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ 90,60,327 ಜನರಿದ್ದು, ಇದರಲ್ಲಿ 41,41,083 ಜನರಿಗೆ ಮೊದಲ ಲಸಿಕೆ ನೀಡಲಾಗಿದೆ. ನಗರದಲ್ಲಿ 45 ವರ್ಷ ಮೇಲ್ಪಟ್ಟ 25 ಲಕ್ಷ ಜನರಿದ್ದು, ಈ ಪೈಕಿ 18 ಲಕ್ಷ ಜನರು ಮೊದಲ ಲಸಿಕೆ ಹಾಗೂ 7 ಲಕ್ಷ ಜನರು ಎರಡೂ ಡೋಸ್‌ ಪಡೆದಿದ್ದಾರೆ. ಜನರಿದ್ದಲ್ಲಿಗೆ ಲಸಿಕೆ ಹೋದರೂ ಗುರಿ ತಲುಪಲಾಗುತ್ತಿಲ್ಲ: ಎಲ್ಲರಿಗೂ ಆದಷ್ಟು ಶೀಘ್ರ ಲಸಿಕೆ ನೀಡುವ ಸಂಬಂಧ ದೊಡ್ಡ ಆಸ್ಪತ್ರೆಗಳ ಜತೆಗೆ ಆರೋಗ್ಯ ಕೇಂದ್ರಗಳಲ್ಲಿ, ಕೆಲವು ಕಡೆ ಲಸಿಕಾ ಶಿಬಿರಗಳನ್ನು ಮಾಡಿಯೂ ಲಸಿಕೆ ನೀಡಲಾಗುತ್ತಿದೆ. 30ಕ್ಕೂ ಹೆಚ್ಚು ಆದ್ಯತಾ ಗುಂಪುಗಳನ್ನು ಮಾಡಿ ಅವರಿಗೆ ಅವರಿದ್ಧ ಸ್ಥಳಗಳಿಗೆ ಹೋಗಿ ಲಸಿಕೆ ನೀಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳು, ಕಚೇರಿ ಸಿಬ್ಬಂದಿಗಳು ಹಾಗೂ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈಗಾಗಲೇ ಬಹುತೇಕರಿಗೆ ಲಸಿಕೆ ನೀಡಲಾಗಿದೆ. ನಗರದಲ್ಲಿ ಅಪಾರ್ಟ್‌ಮೆಂಟ್‌ ಸಿಬ್ಬಂದಿಗಳೂ ಸೇರಿ ಸುಮಾರು 11 ಲಕ್ಷ ಜನರು ವಾಸಿಸುತ್ತಿದ್ದಾರೆ. ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಆದರೂ ಲಕ್ಷದ ಗುರಿ ತಲುಪಲಾಗುತ್ತಿಲ್ಲ. ಲಸಿಕೆಯ ಕೊರತೆಯೋ, ಸಿಬ್ಬಂದಿ ಕೊರತೆಯೋ: ಬಿಬಿಎಂಪಿ ಲಸಿಕಾ ಅಭಿಯಾನ ಚುರುಕುಗೊಳಿಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿಲ್ಲ. ಇನ್ನಷ್ಟು ಲಸಿಕಾ ಕೇಂದ್ರಗಳನ್ನು ತೆರೆಯಬಹುದಿತ್ತು. ಆದರೆ, ತೆರೆಯುತ್ತಿಲ್ಲ. ಒಂದೆಡೆ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಸಿಗದ ಹಿನ್ನೆಲೆಯಲ್ಲಿ ನಿಗದಿತ ಗುರಿ ತಲುಪಲಾಗದೆ ಒದ್ದಾಡುತ್ತಿದೆ.