ಕನ್ನಡಿಗರೇ ಸ್ಥಾಪಿಸಿದ ಜೆರೋಧಾ ಸಂಸ್ಥೆಗೆ ಕಳೆದ ವರ್ಷ 1000 ಕೋಟಿ ರೂ. ಲಾಭ!

ಬೆಂಗಳೂರು ಮೂಲದ ಜೆರೋಧಾ ಷೇರು ವಹಿವಾಟು ವಲಯದಲ್ಲಿ ಜನಪ್ರಿಯ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ವರ್ಷ 1000 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿದ್ದು, ಇದರ ಸ್ಥಾಪಕರು ಅಪ್ಪಟ ಕನ್ನಡಿಗರಾದ ನಿತಿನ್‌ ಕಾಮತ್‌ ಮತ್ತು ನಿಖಿಲ್‌ ಕಾಮತ್‌ ಎನ್ನುವುದು ವಿಶೇಷ.

ಕನ್ನಡಿಗರೇ ಸ್ಥಾಪಿಸಿದ ಜೆರೋಧಾ ಸಂಸ್ಥೆಗೆ ಕಳೆದ ವರ್ಷ 1000 ಕೋಟಿ ರೂ. ಲಾಭ!
Linkup
ಬೆಂಗಳೂರು: ಕೇವಲ 10 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರಿನ ಎಂಬ ರಿಟೇಲ್‌ ಸ್ಟಾಕ್‌ ಬ್ರೋಕರ್‌ ಸಂಸ್ಥೆ ಇದೀಗ ದೇಶದ ಅತಿ ದೊಡ್ಡ ಆನ್‌ಲೈನ್‌ ಬ್ರೋಕರೇಜ್‌ ಕಂಪನಿಯಾಗಿ ಹೊರಹೊಮ್ಮಿದೆ! ಕಳೆದ ಒಂದೇ ವರ್ಷದಲ್ಲಿ ಕಂಪನಿಯ ಲಾಭ ಇಮ್ಮಡಿಗೂ ಹೆಚ್ಚಳವಾಗಿದ್ದು, 1000 ಕೋಟಿ ರೂ. ದಾಟಿದೆ! ಅಪ್ಪಟ ಕನ್ನಡಿಗ ನಿತಿನ್‌ ಕಾಮತ್‌, ಅವರ ಸೋದರ ನಿಖಿಲ್‌ ಕಾಮತ್‌ ಸೇರಿ ಬೆಳೆಸಿದ ಜೆರೋಧಾ, ಹಲವು ಹೊಸ ದಾಖಲೆಗಳೊಂದಿಗೆ ಕಾರ್ಪೊರೇಟ್‌ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸಣ್ಣ ಸ್ಟಾರ್ಟಪ್‌ ಆಗಿ ಆರಂಭವಾದ ಜೆರೋಧಾ, ಕೆಲವೇ ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ತನ್ನ ಛಾಪು ಮೂಡಿಸಿದೆ. ಈಗ 1,100ಕ್ಕೂ ಹೆಚ್ಚು ಉದ್ಯೋಗಿಗಳನ್ನೂ ಒಳಗೊಂಡಿದೆ. 50 ಲಕ್ಷಕ್ಕೂ ಹೆಚ್ಚು ಮಂದಿ ಜೆರೋಧಾ ಮೂಲಕ ಷೇರು ವ್ಯವಹಾರ ನಡೆಸುತ್ತಾರೆ. ರಿಟೇಲ್‌ ಹೂಡಿಕೆದಾರಿಗೆ ಹೂಡಿಕೆ ಬಗ್ಗೆ ಆನ್‌ಲೈನ್‌ ಶಿಕ್ಷಣವನ್ನೂ ನೀಡುತ್ತದೆ. ರೈನ್‌ ನ್ಯಾಟರ್‌ ಎಂಬ ಇನ್‌ಕ್ಯುಬೇಟರ್‌ ಮೂಲಕ ಬಂಡವಾಳ ಮಾರುಕಟ್ಟೆಯ ಹಲವು ಸ್ಟಾರ್ಟಪ್‌ಗಳಿಗೆ ಹಣಕಾಸು ನೆರವು, ಮಾರ್ಗದರ್ಶನವನ್ನೂ ನೀಡುತ್ತದೆ. ನಿತಿನ್‌ ಕಾಮತ್‌ ಯಶೋಗಾಥೆ ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ರಿಟೇಲ್‌ ಹೂಡಿಕೆದಾರರಿಗೆ ಷೇರು ಹೂಡಿಕೆಗೆ ಸಕಲ ವ್ಯವಸ್ಥೆಗಳನ್ನು ಜೆರೋಧಾ ಕಲ್ಪಿಸುತ್ತದೆ. ಆನ್‌ಲೈನ್‌ ವೇದಿಕೆ ಒದಗಿಸುತ್ತದೆ. ಕಂಪನಿಯ ಉತ್ಪನ್ನದ ಗುಣಮಟ್ಟವೇ ಮರುಕಟ್ಟೆಯಲ್ಲಿ ಯಶಸ್ಸು ಗಳಿಸಲು ಕಾರಣವಾಯಿತು ಎನ್ನುತ್ತಾರೆ ನಿತಿನ್‌ ಕಾಮತ್‌. ಜೆರೋಧಾ ತನ್ನ ಗ್ರಾಹಕರಿಗೆ ಕೇವಲ 20 ರೂ.ಗಳ ಸ್ಪರ್ಧಾತ್ಮಕ ಡಿಸ್ಕೌಂಟ್‌ ದರದಲ್ಲಿ ಷೇರು ವ್ಯವಹಾರ ನಡೆಸಿಕೊಡುತ್ತದೆ. ಹೂಡಿಕೆಯ ಗಾತ್ರ ಎಷ್ಟೇ ದೊಡ್ಡದಿದ್ದರೂ ಡಿಸ್ಕೌಂಟ್‌ ದರ ಲಭ್ಯ. "ಜೆರೋಧಾದಲ್ಲಿ ಹೊರಗಿನ ಯಾವುದೇ ಹೂಡಿಕೆದಾರರು ಇಲ್ಲ. ಹೀಗಾಗಿ ನಮ್ಮ ಕಂಪನಿ ಸಂಪೂರ್ಣ ಗ್ರಾಹಕ ಕೇಂದ್ರಿತವಾಗಿದೆ. ಇತರ ಹೂಡಿಕೆದಾರರು ಇದ್ದಾಗ, ಅವರ ಬೇಡಿಕೆಗಳು, ನಿರೀಕ್ಷೆಗಳು ಕಂಪನಿಯ ವಹಿವಾಟು, ಉತ್ಪನ್ನಗಳ ಮೇಲೆ ಪ್ರಭಾವ ಬೀರುವುದು ಸಹಜ. ಆದರೆ ಅಂಥ ಯಾವುದೇ ಸಮಸ್ಯೆ ಜೆರೋಧಾದಲ್ಲಿ ಇಲ್ಲ. ನಾವೇ ಗ್ರಾಹಕರಿಗೆ ಬೇಕಾದ ಗುಣಮಟ್ಟದ ಉತ್ಪನ್ನ, ಸೇವೆ ಒದಗಿಸಲು ಸಾಧ್ಯವಾಗುತ್ತದೆ'' ಎನ್ನುತ್ತಾರೆ ನಿತಿನ್‌ ಕಾಮತ್‌. ಇತ್ತೀಚೆಗೆ ಜೆರೋಧಾದ ನಿತಿನ್‌ ಕಾಮತ್‌, ಸೋದರ ನಿಖಿಲ್‌ ಕಾಮತ್‌ ಹಾಗೂ ನಿಖಿಲ್‌ ಅವರ ಪತ್ನಿ ಸೀಮಾ ಪಾಟೀಲ್‌ ಅವರಿಗೆ ತಲಾ 100 ಕೋಟಿ ರೂ. ವೇತನವನ್ನು ನೀಡುವ ನಿರ್ಣಯವನ್ನೂ ಕಂಪನಿಯ ಆಡಳಿತ ಮಂಡಳಿ ಅನುಮೋದಿಸಿತು. ಇದು ಸಂಚಲನ ಸೃಷ್ಟಿಸಿತು. ಆದರೆ ಯಾವುದೇ ಇತರ ಹೂಡಿಕೆದಾರರೂ ಇಲ್ಲದಿರುವ, ಸರ್ವ ಸ್ವತಂತ್ರ ಖಾಸಗಿ ಕಂಪನಿಯಾಗಿರುವ ಜೆರೋಧಾದಲ್ಲಿ ಅದರ ಆಡಳಿತ ಮಂಡಳಿಗೆ ವೇತನ ನಿಗದಿಯ ಸಕಲ ಸ್ವಾತಂತ್ರ್ಯವೂ ಇದೆ. ಈ ವೇತನದ ಬಗ್ಗೆ ವಿವಾದ ಅನಪೇಕ್ಷಿತ ಎಂದೂ ಕಂಪನಿಯ ಸಿಇಒ ಆಗಿರುವ ನಿತಿನ್‌ ಕಾಮತ್‌ ಟ್ವೀಟ್‌ ಮಾಡಿ ಸ್ಪಷ್ಟನೆಯನ್ನೂ ನೀಡಿದರು. "ವೇತನ 100 ಕೋಟಿ ರೂ. ಎಂದು ಘೋಷಿಸಿದರೂ, 50 ಕೋಟಿ ರೂ. ತೆರಿಗೆಯೇ ಆಗುತ್ತದೆ. ಹೀಗಿದ್ದರೂ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ತೆರಿಗೆ ಪಾವತಿಸುತ್ತೇವೆ. ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದಲೂ ತೆರಿಗೆ ಪಾವತಿಸುವುದು ಮಹತ್ವದ್ದು" ಎನ್ನುತ್ತಾರೆ ನಿತಿನ್‌ ಕಾಮತ್‌. 2010ರಲ್ಲಿ ನಿತಿನ್‌ ಕಾಮತ್‌ ಸ್ಥಾಪಿಸಿದ ಜೆರೋಧಾ ಇಂದು ಷೇರು ಬ್ರೋಕಿಂಗ್‌ ಉದ್ದಿಮೆಯಲ್ಲೇ ಮುಂಚೂಣಿಗೆ ಬಂದಿರುವುದು ಗಮನಾರ್ಹ. ನಿತಿನ್‌ ಮತ್ತು ನಿಖಿಲ್‌ ಅವರಿಗೆ ಎಳೆಯ ಹರೆಯದಲ್ಲೇ ಷೇರು ವ್ಯವಹಾರದ ಕಡೆಗೆ ಕುತೂಹಲ ಇತ್ತು. ನಂತರ ರಿಲಯನ್ಸ್‌ ಮನಿ, ವೇ2 ವೆಲ್ತ್‌ನಲ್ಲಿ ಸಬ್‌ ಬ್ರೋಕರ್‌ ಆಗಿ ಅನುಭವ ಗಳಿಸಿದರು. 2008ರಲ್ಲಿ ಕಾಮತ್‌ ಸೋದರರು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ)ನಲ್ಲಿ ಸದಸ್ಯರಾದರು. 2010ರಲ್ಲಿ ತಮ್ಮದೇ ಜೆರೋಧಾ ಕಂಪನಿಯನ್ನು ಸ್ಥಾಪಿಸಿದರು. ಮೊದಲ ವರ್ಷ ಸುಮಾರು 10,000 ಮಂದಿ ಜೆರೋಧಾ ಸೇವೆ ಪಡೆದರು. ಕಡಿಮೆ ಶುಲ್ಕ ಆಕರ್ಷಣೆಯಾಗಿತ್ತು. ಕಾಮತ್‌ ಸೋದರರು ಜಾಹೀರಾತಿಗೋಸ್ಕರ ಖರ್ಚು ಮಾಡಲಿಲ್ಲ. ಸೇವೆಯ ಗುಣಮಟ್ಟದಿಂದ ಪರಿಣಾಮ ಜನರಿಂದ ಜನರಿಗೆ ವಿಷಯ ಪ್ರಚಾರವಾಯಿತು.