50 ವರ್ಷಕ್ಕೆ ಸ್ಟಾರ್ಟಪ್‌ ಆರಂಭಿಸಿ 1 ಲಕ್ಷ ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಫಲ್ಗುಣಿ ನಾಯರ್‌!

ಕಾಸ್ಮೆಟಿಕ್ಸ್‌ ವಲಯದ ಇ-ಕಾಮರ್ಸ್‌ ಕಂಪನಿ ನೈಕಾವನ್ನು 9 ವರ್ಷಗಳ ಹಿಂದೆ ಸ್ಥಾಪಿಸಿದ್ದ ಮಹಿಳಾ ಉದ್ಯಮಿ ಫಲ್ಗುಣಿ ನಾಯರ್‌ ಅವರೀಗ ನೈಕಾವನ್ನು 1 ಲಕ್ಷ ಕೋಟಿ ರೂ.ಗಳ ದಿಗ್ಗಜ ಕಂಪನಿಯನ್ನಾಗಿ ಪರಿವರ್ತಿಸಿದ್ದಲ್ಲದೆ ಭಾರತದ ಮೊದಲ ಸೆಲ್ಫ್‌ ಮೇಡ್‌ ಬಿಲಿಯನೇರ್‌ ಮಹಿಳೆ ಪಟ್ಟ ಅಲಂಕರಿಸಿದ್ದಾರೆ.

50 ವರ್ಷಕ್ಕೆ ಸ್ಟಾರ್ಟಪ್‌ ಆರಂಭಿಸಿ 1 ಲಕ್ಷ ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಫಲ್ಗುಣಿ ನಾಯರ್‌!
Linkup
ಮುಂಬಯಿ: ಕಾಸ್ಮೆಟಿಕ್ಸ್‌ ವಲಯದ ಇ - ಕಾಮರ್ಸ್‌ ಕಂಪನಿ ನೈಕಾವನ್ನು ಕೇವಲ 9 ವರ್ಷಗಳ ಹಿಂದೆ ಸ್ಥಾಪಿಸಿದ ಮಹಿಳಾ ಉದ್ಯಮಿ ಅವರೀಗ ನೈಕಾವನ್ನು 1 ಲಕ್ಷ ಕೋಟಿ ರೂ.ಗಳ ದಿಗ್ಗಜ ಕಂಪನಿಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನ್‌ಲೈನ್‌ ಮೂಲಕ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುವ ನೈಕಾದ ಮಾರುಕಟ್ಟೆ ಮೌಲ್ಯ ಷೇರು ವಿನಿಮಯ ಕೇಂದ್ರದಲ್ಲಿ ಬುಧವಾರ 1 ಲಕ್ಷ ಕೋಟಿ ರೂ.ಗಳ ಗಡಿಯನ್ನು ದಾಟಿತು. 2012ರಲ್ಲಿ ಸ್ಟಾರ್ಟಪ್‌ ಆಗಿದ್ದ ನೈಕಾ ಇದೀಗ ದೊಡ್ಡ ಇ - ಕಾಮರ್ಸ್‌ ಕಂಪನಿಯಾಗಿ ಹೊರಹೊಮ್ಮಿದೆ. ಮುಂಬಯಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ಕೋಲ್‌ ಇಂಡಿಯಾ, ಬಿಪಿಸಿಎಲ್‌, ಬ್ರಿಟಾನಿಯಾ ಇತ್ಯಾದಿ ದಿಗ್ಗಜ ಕಂಪನಿಗಳನ್ನೂ ಮಾರುಕಟ್ಟೆ ಮೌಲ್ಯದಲ್ಲಿ ಹಿಂದಿಕ್ಕಿರುವ ನೈಕಾ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಬಜಾಜ್‌ ಆಟೋಗಿಂತ ಸ್ವಲ್ಪ ಕೆಳಗಿದೆ. ಗುಜರಾತ್‌ ಮೂಲದ ಕುಟುಂಬದಲ್ಲಿ ಜನಿಸಿದ ಫಲ್ಗುಣಿ ಅವರು ಮುಂಬಯಿನಲ್ಲಿ ಬೆಳೆದವರು. ತಂದೆ ಸಣ್ಣ ಉದ್ದಿಮೆಯೊಂದನ್ನು ನಡೆಸುತ್ತಿದ್ದರು. ಎಂಬಿಎ ಓದಿರುವ ಫಲ್ಗುಣಿ ನಂತರ ಸಂಜಯ್‌ ನಾಯರ್‌ ಅವರನ್ನು ವಿವಾಹವಾದರು. ಕೋಟಕ್‌ ಮಹೀಂದ್ರಾ ಗ್ರೂಪ್‌ನಲ್ಲಿ ಕನ್ಸಲ್ಟೆಂಟ್‌ ಆಗಿದ್ದ ಫಲ್ಗುಣಿ ಅವರು 2012ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ ನೈಕಾ ಸ್ಟಾರ್ಟಪ್‌ ಅನ್ನು ಸ್ಥಾಪಿಸಿದರು. ಈಗ ಅವರ ನಿವ್ವಳ ಸಂಪತ್ತು 7 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಅಂದಾಜು 51,800 ಕೋಟಿ ರೂ.). ನೈಕಾದ ಪ್ರವರ್ತಕ ಕಂಪನಿಯಾದ ಎಫ್‌ಎಸ್‌ಎನ್‌ ಇ - ಕಾಮರ್ಸ್‌ನ ಪ್ರತಿ ಷೇರಿನ ದರ 2,001 ರೂ.ಗೆ ಏರಿದ್ದು, ಬಹುತೇಕ ಇಮ್ಮಡಿಯಾಗಿದೆ. ಮಾರುಕಟ್ಟೆ ಮೌಲ್ಯ 1.04 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಷೇರು ಮಾರುಕಟ್ಟೆಯಲ್ಲಿ ಕಂಪನಿಯ 5,350 ಕೋಟಿ ರೂ.ಗಳ ಐಪಿಒ ಭಾರಿ ಯಶಸ್ವಿಯಾಗಿದೆ. ಕೋಟಕ್‌ ಗ್ರೂಪ್‌ನಲ್ಲಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಆಗಿದ್ದ ನಾಯರ್‌ ಅವರು ಉದ್ಯಮಿಗಳಿಗೆ ಹಣಕಾಸು ಹಾಗೂ ಬ್ಯಾಂಕಿಂಗ್‌ ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದರು. ಉದ್ಯಮ ವಲಯದ ಆಗುಹೋಗುಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದರು. ಹಾಗಾಗಿ ಸ್ವತಃ ಉದ್ಯಮಿಯಾಗಲು ಬಯಿಸಿದರು. ''ಉದ್ಯಮಿಯಾಗಬೇಕು ಎಂಬ ಹಂಬಲದಿಂದ ಮಾರುಕಟ್ಟೆಯನ್ನು ಅಧ್ಯಯನ ಮಾಡುತ್ತಿದ್ದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಅಥವಾ ಜಪಾನ್‌, ದಕ್ಷಿಣ ಕೊರಿಯಾಗೂ ಹೋಲಿಸಿದರೂ ಭಾರತದಲ್ಲಿ ಸೌಂದರ್ಯ ವರ್ಧಕಗಳ ಮಾರುಕಟ್ಟೆ ಇನ್ನೂ ಬೆಳೆಯದಿರುವುದು ನನ್ನ ಗಮನವನ್ನು ಸೆಳೆಯಿತು. ಅಂದಿನಿಂದ ಕಾಸ್ಮೆಟಿಕ್ಸ್‌ ವಲಯದ ಕಂಪನಿ ಸ್ಥಾಪಿಸಲು ನಿರ್ಧರಿಸಿದೆ," ಎನ್ನುತ್ತಾರೆ ಫಲ್ಗುಣಿ ನಾಯರ್‌. ಹೊಸ ಗ್ರಾಹಕರನ್ನು ಗಳಿಸುವುದು ಹಾಗೂ ಗ್ರಾಹಕರನ್ನು ಉಳಿಸಿಕೊಳ್ಳುವುದು ಮುಖ್ಯವಾದ ಸಂಗತಿ ಎನ್ನುತ್ತಾರೆ ಅವರು. ನೈಕಾದ ಶೇ. 95 ವ್ಯಾಪಾರ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಉಳಿದಂತೆ ನಾನಾ ಕಡೆ 80 ಮಳಿಗೆಗಳನ್ನೂ ಒಳಗೊಂಡಿದೆ. ನೈಕಾದಲ್ಲಿ 1,500 ಬ್ರ್ಯಾಂಡ್‌ಗಳ ಉತ್ಪನ್ನಗಳು ಇವೆ. ಮೇಕಪ್‌ ಕಿಟ್‌, ಹೇರ್‌ಕೇರ್‌, ಪರ್ಸನಲ್‌ ಕೇರ್‌, ಸುಗಂಧ ದ್ರವ್ಯಗಳು, ಐಷಾರಾಮಿ ಸೌಂದರ್ಯ ವರ್ಧಕಗಳು ಇವೆ. ಕಳೆದ 2020-21ರಲ್ಲಿ ಕಂಪನಿ 2,440 ಕೋಟಿ ರೂ. ಆದಾಯ ಗಳಿಸಿತ್ತು. 62 ಕೋಟಿ ರೂ. ಲಾಭದಲ್ಲಿತ್ತು.