ಕೇಂದ್ರ ಸಂಪುಟ ವಿಸ್ತರಣೆ: ಸಿಂಧಿಯಾ, ಸೋನೊವಾಲ್ ಸೇರ್ಪಡೆ ಸಾಧ್ಯತೆ
ಕೇಂದ್ರ ಸಂಪುಟ ವಿಸ್ತರಣೆ: ಸಿಂಧಿಯಾ, ಸೋನೊವಾಲ್ ಸೇರ್ಪಡೆ ಸಾಧ್ಯತೆ
ಶೀಘ್ರದಲ್ಲಿಯೇ ಬಹುನಿರೀಕ್ಷಿತ ಕೇಂದ್ರ ಸಂಪುಟ ವಿಸ್ತರಣೆ ನಡೆಯಲಿದ್ದು, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಮಧ್ಯ ಪ್ರದೇಶದ ಪ್ರಭಾವಿ ಯುವ ನಾಯಕ ಜೋತಿರಾಧಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಹೊಸದಿಲ್ಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿಯೇ ನಡೆಯಲಿದೆ. ಕಾಂಗ್ರೆಸ್‌ನಿಂದ ಬಂದಿರುವ ಮಧ್ಯಪ್ರದೇಶದ ಪ್ರಭಾವಿ ಯುವ ನಾಯಕ ಜೋತಿರಾಧಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವಕಾಶ ಗಿಟ್ಟಿಸುವುದು ಬಹುತೇಕ ಖಚಿತವಾಗಿದೆ.
ಕಳೆದ ಕೆಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಡುವೆ ಬಿರುಸಿನ ಸಮಾಲೋಚನೆ ನಡೆದಿತ್ತು. ನಡ್ಡಾ ಅವರು ಒಂದು ತಿಂಗಳಿಂದ ಪ್ರಧಾನಿ ನಿವಾಸಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಸಂಭವನೀಯರ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಎನ್‌ಡಿಎ ಇತರೆ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಈ ಬಾರಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಶಿವಸೇನೆ ಮತ್ತು ಶಿರೋಮಣಿ ಅಕಾಲಿ ದಳ ಮೈತ್ರಿ ತೊರೆದು ಹೋದ ನಂತರ ಹಲವು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಲೋಕಶಕ್ತಿ ಪಾರ್ಟಿಯ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ಸ್ಥಾನ ಕೂಡ ಹಾಗೇ ಉಳಿದಿದೆ. ಅವಕಾಶ ಪಡೆಯುವವರ ಸಾಲಿನಲ್ಲಿ ಸೋನೊವಾಲ್ ಮತ್ತು ಸಿಂಧಿಯಾ ಅವರಂಥ ಪ್ರಬಲ ನಾಯಕರು ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸದ್ಯ ಕೆಲವು ಸಚಿವರ ಹೆಗಲ ಮೇಲೆ ಹತ್ತಾರು ಖಾತೆಗಳ ಜವಾಬ್ದಾರಿ ಬಿದ್ದಿದ್ದು, ಅವನ್ನು ಹಂಚಿಕೆ ಮಾಡಿ ಸುಗಮ ಕಾರ್ಯಕ್ಕೆ ಅನುವು ಮಾಡಿಕೊಡಲು ಪ್ರಧಾನಿ ಯೋಚಿಸಿದ್ದಾರೆ. 2019ರಲ್ಲಿ ಎರಡನೇ ಅವಧಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಸಂಪುಟ ವಿಸ್ತರಣೆ ಕಸರತ್ತು ಇದಾಗಿದೆ.