Pegasus Spyware ಸರಕಾರದ ವಿರುದ್ಧ ದಾಳಿಗೆ ಸಂಸತ್‌ನಲ್ಲಿ ಪ್ರತಿಪಕ್ಷಗಳ ಸಭೆ

ರಾಜಕೀಯ ಮುಖಂಡರು, ಪತ್ರಕರ್ತರು ಸೇರಿದಂತೆ ಅನೇಕರ ಫೋನ್ ವಿವರಗಳ ಮೇಲೆ ಇಸ್ರೇಲ್‌ನ ಪೆಗಾಸಸ್ ಸ್ಪೈವೇರ್ ಮೂಲಕ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವಿವಾದದ ಕುರಿತು ವಿಪಕ್ಷಗಳು ಮಂಗಳವಾರ ಸಭೆ ನಡೆಸುತ್ತಿವೆ.

Pegasus Spyware ಸರಕಾರದ ವಿರುದ್ಧ ದಾಳಿಗೆ ಸಂಸತ್‌ನಲ್ಲಿ ಪ್ರತಿಪಕ್ಷಗಳ ಸಭೆ
Linkup
ಹೊಸದಿಲ್ಲಿ: ಭಾರತದ ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರನ್ನು ಗುರಿಯಾಗಿರಿಸಿಕೊಂಡು ಪೆಗಾಸಸ್ ಎಂಬ ಸ್ಪೈವೇರ್ ಕಾರ್ಯಾಚರಣೆ ನಡೆಸಿರುವ ವಿವಾದ, ಆಡಳಿತಾರೂಢ ಎನ್‌ಡಿಎ ವಿರುದ್ಧ ವಿರೋಧಪಕ್ಷಗಳಿಗೆ ಅಸ್ತ್ರವಾಗಿ ದೊರಕಿದೆ. ಇಸ್ರೇಲ್ ಸ್ಪೈವೇರ್ ಪೆಗಾಸಸ್ ಮೂಲಕ ರಾಜಕೀಯ ಮುಖಂಡರು, ಪತ್ರಕರ್ತರು, ಅಧಿಕಾರಿಗಳು ಮತ್ತು ಇತರರ ಮೇಲೆ ಅಕ್ರಮವಾಗಿ ನಿಗಾ ಇರಿಸುವ ಚಟುವಟಿಕೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯತಂತ್ರ ಸಭೆ ಆಯೋಜಿಸಿವೆ ಎಂದು ಮೂಲಗಳು ತಿಳಿಸಿವೆ. ಪೆಗಾಸಸ್ ಕುರಿತಾದ ಚರ್ಚೆಗಾಗಿ ರಾಜ್ಯಸಭೆಯ ವ್ಯವಹಾರಗಳ ನಿಯಮಗಳನ್ನು ಅಮಾನತುಗೊಳಿಸುವಂತೆ ಕೋರಿ ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಶೇಖರ್ ರಾಯ್ 267 ನೋಟಿಸ್ ನೀಡಿದ್ದಾರೆ. ಮೇಲ್ಮನೆಯಲ್ಲಿ ಮಧ್ಯಾಹ್ನ ನಡೆಯುವ ಕಲಾಪದಲ್ಲಿ 'ಕೋವಿಡ್ ನಿರ್ವಹಣೆ' ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಪೆಗಾಸಸ್ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೋವಿಡ್ ವಿಚಾರದಂತೆಯೇ ಇದು ಅಪಾಯಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅದರ ಕುರಿತು ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿವೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೆಲವು ವ್ಯಕ್ತಿಗಳ ಫೋನ್ ದತ್ತಾಂಶಗಳನ್ನು ಕದಿಯಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೇಳಿಕೆ ನೀಡುವುದಾಗಿ ನೂನತ ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 'ಇದು ಯಾವುದೇ ಪುರಾವೆಗಳಿಲ್ಲದ ವೈಭವೀಕರಿಸಲಾದ ಸುದ್ದಿ' ಎಂದು ಲೋಕಸಭೆಯಲ್ಲಿ ಸೋಮವಾರ ಸಚಿವರು ಹೇಳಿಕೆ ನೀಡಿದ್ದರು. ತಾನು ಸಾಫ್ಟ್‌ವೇರ್ ಅನ್ನು ಪರಾಮರ್ಶಿಸಿದ ಸರಕಾರಗಳಿಗೆ ಮಾತ್ರವೇ ಪೂರೈಕೆ ಮಾಡುವುದಾಗಿ ಪೆಗಾಸಸ್ ಸೃಷ್ಟಿಕರ್ತ ಸಂಸ್ಥೆ ಎನ್‌ಎಸ್‌ಒ ಪ್ರಕಟಿಸಿದೆ. ಹೀಗಾಗಿ ಈ ವಿಚಾರದ ಬಗ್ಗೆ ಪ್ರಧಾನಿ ಅವರಿಂದ ವಿಪಕ್ಷಗಳು ವಿವರಣೆ ಕೇಳಿವೆ. ಜತೆಗೆ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಹಾಗೂ ಪ್ರಧಾನಿ ಮೋದಿ ವಿರುದ್ಧ ತನಿಖೆ ನಡೆಯಬೇಕೆಂದು ಆಗ್ರಹಿಸಿವೆ.