'ಕಾಣೆಯಾಗಿದ್ದಾಳೆ' ಚಿತ್ರಕ್ಕೆ ಸಾಥ್ ನೀಡಿದ ಓಂ ಸಾಯಿಪ್ರಕಾಶ್; ಇದು ಹುಡುಕಾಟದ ಲವ್ ಸ್ಟೋರಿ!

ಸ್ಯಾಂಡಲ್‌ವುಡ್‌ಗೆ ಹೊಸ ತಂಡಗಳ ಪ್ರವೇಶ ಸಾಮಾನ್ಯ. ಹಾಗೆಯೇ ಇಲ್ಲೊಂದು ತಂಡ 'ಕಾಣೆಯಾಗಿದ್ದಾಳೆ' ಶೀರ್ಷಿಕೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದೆ. ಚಿತ್ರಕ್ಕೆ ಓಂ ಸಾಯಿಪ್ರಕಾಶ್ ಶುಭ ಹಾರೈಸಿದ್ದಾರೆ.

'ಕಾಣೆಯಾಗಿದ್ದಾಳೆ' ಚಿತ್ರಕ್ಕೆ ಸಾಥ್ ನೀಡಿದ ಓಂ ಸಾಯಿಪ್ರಕಾಶ್; ಇದು ಹುಡುಕಾಟದ ಲವ್ ಸ್ಟೋರಿ!
Linkup
ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗತ್ತಿರುವ ಆರ್.ಕೆ. ನಿರ್ದೇಶನದ '' ಹುಡುಕಿ ಕೊಟ್ಟವರಿಗೆ ಬಹುಮಾನ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಧರ್ಮಗಿರಿ ಶ್ರೀಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಚಿತ್ರತಂಡಕ್ಕೆ ಹಾರೈಸಿದ ಸಾಯಿಪ್ರಕಾಶ್‌'ಚಿತ್ರದ ಶೀರ್ಷಿಕೆ ಇಷ್ಟವಾಯಿತು. ಮೊದಲ ದೃಶ್ಯದಲ್ಲಿ ನಾಯಕ ಉದ್ದನೆಯ ಸಂಭಾಷಣೆ ಹೇಳಿದ್ದು, ಆತನಲ್ಲಿರುವ ಉತ್ಸಾಹ ಕಾಣಿಸಿತು. ನಿರ್ದೇಶಕ, ನಿರ್ಮಾಪಕ ಹಾಗೂ ಇಡೀ ತಂಡ ಸೇರಿ ಚಿತ್ರ ನಿರ್ಮಾಣ ಮಾಡುತ್ತಾರೆ. ಕೊನೆಯದಾಗಿ ಪ್ರೇಕ್ಷಕ ಆ ಚಿತ್ರ ಮೆಚ್ಚಬೇಕು. ಅಂತಹ ಉತ್ತಮ ಚಿತ್ರಗಳ ನಿರ್ಮಾಣ ಹೆಚ್ಚಾಗಲಿ' ಎಂದು ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆರ್‌ಕೆ, 'ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಮಂಡ್ಯ ಹಾಗೂ ಬೆಂಗಳೂರು ಎರಡು ಪ್ರಾಂತ್ಯಗಳ ಭಾಷೆಗಳಲ್ಲಿ ಈ ಚಿತ್ರದ ಸಂಭಾಷಣೆ ಇರುತ್ತದೆ. ಅರ್ಧ ಕಾಲ್ಪನಿಕ ಹಾಗೂ ಅರ್ಧ ನೈಜಘಟನೆ ಆಧರಿಸಿದ ಕಥೆ ಇರುತ್ತದೆ. ಹಳ್ಳಿ ಹುಡುಗಿಯೊಬ್ಬಳು ಐಎಎಸ್ ಓದುವ ಸಲುವಾಗಿ ಪಟ್ಟಣಕ್ಕೆ ಬರುತ್ತಾಳೆ. ಸಿಟಿಗೆ ಬಂದ ಹುಡುಗಿ 2-3 ವರ್ಷಗಳ ಕಾಲ ಹಳ್ಳಿಗೆ ಬಂದಿರುವುದಿಲ್ಲ. ಆ ಹುಡುಗಿಯನ್ನು ಹುಡುಕಿಕೊಂಡು ನಾಯಕ ಹಾಗೂ ಆತನ ಸ್ನೇಹಿತರು ಸಿಟಿಗೆ ಬರುತ್ತಾರೆ. ನಂತರ ಏನಾಗುತ್ತದೆ ಎಂಬುದು ಚಿತ್ರದಲ್ಲಿ ನೋಡಬೇಕು. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ನಮ್ಮದು. ಬೆಂಗಳೂರು, ಮಂಡ್ಯ, ಸಾಗರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾನು ಈ ಹಿಂದೆ 'ಮದರ್ ಸವಿತಾ', 'ನನ್ನ ಕನಸುಗಳು' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ನನ್ನ ಮೂರನೇ ಚಿತ್ರ' ಎಂದರು. ನಾಯಕರಾಗಿ ವಿನಯ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. 'ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಇದರಲ್ಲಿ ನನ್ನದು ಕಾಲೇಜು ಹುಡುಗನ ಪಾತ್ರ. ಹಳ್ಳಿಯಲ್ಲಿ ಓದುತ್ತಿರುವಾಗಲೇ ಆತ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಸಿಟಿಗೆ ಓದಲು ಹೋದ ಪ್ರೇಯಸಿ‌ ಕಾಣೆಯಾದಾಗ‌ ಅವಳನ್ನು ಹುಡುಕುತ್ತ‌‌ ನಗರಕ್ಕೆ ತನ್ನ ಗೆಳೆಯರೊಂದಿಗೆ ಬರುತ್ತಾನೆ' ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು ವಿನಯ್‌ ನಾಯಕಿಯಾಗಿ ಕೀರ್ತಿ ಭಟ್ ನಟಿಸುತ್ತಿದ್ದಾರೆ. 'ನಾನು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಹಳ್ಳಿ ಹುಡುಗಿಯೊಬ್ಬಳು ಐಎಎಸ್ ಓದುವ ಹಂಬಲದಿಂದ ನಗರಕ್ಕೆ ಬರುತ್ತಾಳೆ. ಓದಲು ಬಂದ ಹುಡುಗಿ,‌ ಕೆಲವು ದಿನಗಳ ಕಾಲ ತನ್ನ ಪ್ರಿಯಕರ ಸೇರಿದಂತೆ ಯಾರ ಸಂಪರ್ಕಕ್ಕೂ ಸಿಕ್ಕಿರುವುದಿಲ್ಲ. ಆಕೆಯನ್ನು ಹುಡುಕಿಕೊಂಡು ನಾಯಕ ನಗರಕ್ಕೆ ಆಗಮಿಸುತ್ತಾನೆ. ನಂತರ ನಾಯಕ - ನಾಯಕಿಯ ಜೀವನದಲ್ಲಿ ಏನಾಗುತ್ತದೆ ಎಂಬುದೆ ಈ ಚಿತ್ರದ ಕಥಾಹಂದರ' ಎಂದು ತಿಳಿಸಿದರು ಕೀರ್ತಿ ಭಟ್. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ‌ನಟಿ‌ ಗಿರಿಜಾ‌ ಲೋಕೇಶ್ ಕಾಣಿಸಿಕೊಂಡಿದ್ದಾರೆ. ವಿನಯಾಪ್ರಸಾದ್, ಬಿರಾದಾರ್, ಜಯರಾಂ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆರ್‌ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೌಶಿಕ್ ಸಂಗೀತ ನಿರ್ದೇಶನವಿದೆ. ನಾಗರಾಜ್ ಛಾಯಾಗ್ರಹಣ ಮಾಡುತ್ತಿದ್ದು, ಶಿವರಾಜ್ ಮೇಹು ಅವರ ಸಂಕಲನವಿದೆ.