Kiccha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ 'ಕಿಚ್ಚ' ಸುದೀಪ್; ಕಾರಣವೇನು?

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗ ನಟ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದರು. ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸುದೀಪ್ ಭೇಟಿಯಾಗಿದ್ದಾರೆ.

Kiccha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ 'ಕಿಚ್ಚ' ಸುದೀಪ್; ಕಾರಣವೇನು?
Linkup
ಮುಖ್ಯಮಂತ್ರಿ ಅವರನ್ನು ನಟ 'ಕಿಚ್ಚ' ಅವರು ಮಂಗಳವಾರ (ಆ.31) ಭೇಟಿಯಾಗಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಅವರನ್ನು ಭೇಟಿಯಾದ ಸುದೀಪ್, ಕೆಲಹೊತ್ತು ಅವರೊಂದಿಗೆ ಸಮಯ ಕಳೆದಿದ್ದಾರೆ. ಆದರೆ, ಇದೊಂದು ಸೌಹಾರ್ದಯುತ ಭೇಟಿ ಎಂಬ ಮಾಹಿತಿ ತಿಳಿದುಬಂದಿದೆ. ಬೊಮ್ಮಾಯಿ ಕುಟುಂಬದ ಜೊತೆಗೆ ನಂಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದೀಪ್ ಅವರ ಕುಟುಂಬಕ್ಕೆ ಹಲವು ವರ್ಷಗಳ ನಂಟು ಇದೆ. ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ಪಡೆದಾಗ, ಸುದೀಪ್ ಟ್ವೀಟ್ ಮಾಡಿ, ಅಭಿನಂದಿಸಿದ್ದರು. 'ಅವರ ಸರಳತೆಯನ್ನು ನೋಡಿ ಬೆಳೆದವನು ನಾನು. ನನ್ನ ವೃತ್ತಿಜೀವನದ ಆರಂಭದಲ್ಲಿ ವೈಯಕ್ತಿಕವಾಗಿ ನನಗೆ ಅವರು ಬಹಳ ಬೆಂಬಲ ನೀಡಿದ್ದರು. ನಿಮಗೆ ಒಳ್ಳೆಯದಾಗಲಿ ಮಾಮಾ' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು. ಸೆ.2ರಂದು ಸುದೀಪ್ ಜನ್ಮದಿನ ನಟ ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2ರಂದು 50ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಸುದೀಪ್ ಜನ್ಮದಿನ ಆಚರಣೆ ಮಾಡ್ತಾ ಇಲ್ಲ. 'ನನ್ನೆಲ್ಲಾ ಪ್ರೀತಿಯ ಅಭಿಮಾನಿ ಸ್ನೇಹಿತರಲ್ಲಿ ಮನವಿ.. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ. ನಿಮ್ಮ ಆರೋಗ್ಯವೇ ನನಗೆ ಮುಖ್ಯ' ಎಂದು ಹೇಳಿದ್ದಾರೆ. ಇನ್ನು, ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಚಿತ್ರದ ಸಣ್ಣ ಝಲಕ್ ಬಿಡುಗಡೆಯಾಗಲಿದೆ. ಸೆ.2ರಂದು ಬೆಳಗ್ಗೆ 11.05ಕ್ಕೆ 'ವಿಕ್ರಾಂತ್ ರೋಣ' ಚಿತ್ರದ 'ದಿ ಡೆಡ್ ಮ್ಯಾನ್ಸ್ ಆಂಥೆಮ್' ರಿಲೀಸ್ ಆಗಲಿದೆ. ಆ ಮೂಲಕ ಸುದೀಪ್ ಜನ್ಮದಿನದಂದು 'ವಿಕ್ರಾಂತ್ ರೋಣ'ನ ದರ್ಶನ ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿಗಲಿದೆ. ಕೋವಿಡ್ ಕಾರಣದಿಂದಾಗಿ ಫ್ಯಾಂಟಸಿ, ಆಕ್ಷನ್, ಅಡ್ವೆಂಚರ್, ಥ್ರಿಲ್ಲರ್ ಅಂಶಗಳಿರುವ 'ವಿಕ್ರಾಂತ್ ರೋಣ' ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ 'ಗಡಂಗ್ ರಕ್ಕಮ್ಮ' ಆಗಿ ಹೆಜ್ಜೆ ಹಾಕಿರುವುದು 'ವಿಕ್ರಾಂತ್ ರೋಣ' ಸಿನಿಮಾದ ವಿಶೇಷತೆಗಳಲ್ಲೊಂದು. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ, ರವಿಶಂಕರ್ ಗೌಡ, ನೀತಾ ಅಶೋಕ್ ಇದ್ದಾರೆ. ಜಾಕ್ ಮಂಜುನಾಥ್, ಅಲಂಕಾರ್ ಪಾಂಡ್ಯನ್ ಇದರ ನಿರ್ಮಾಪಕರು. ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.