ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು!

ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್‌’ ಸಿನಿಮಾದ ನಿರ್ದೇಶಕ ಶಂಕರ್‌ ಗುರು ಮತ್ತು ಇತರ ಕೆಲವು ಕಲಾವಿದರ ರಿಯಲ್‌ ಕಹಾನಿಯೂ ಇಂಟ್ರೆಸ್ಟಿಂಗ್‌ ಆಗಿದೆ.

ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು!
Linkup
ಹರೀಶ್‌ ಬಸವರಾಜ್‌ ಡಾಲಿ ನಟನೆಯ ‘ಬಡವ ರಾಸ್ಕಲ್‌’ ಸಿನಿಮಾದ ನಿರ್ದೇಶಕ ಶಂಕರ್‌ ಗುರು ಮತ್ತು ಇತರ ಕೆಲವು ಕಲಾವಿದರ ರಿಯಲ್‌ ಕಹಾನಿಯೂ ಇಂಟ್ರೆಸ್ಟಿಂಗ್‌ ಆಗಿದೆ. ಅತಿ ಸಾಮಾನ್ಯ ಜನರ ಕಥೆಯಿರುವ ‘ಬಡವ ರಾಸ್ಕಲ್‌’ ಸಿನಿಮಾ ಈಗಾಗಲೇ ತನ್ನ ವಿಶಿಷ್ಟವಾದ ಪ್ರಚಾರದಿಂದ ಗಮನ ಸೆಳೆದಿದೆ. ಇದರಲ್ಲಿ ನಟ ಧನಂಜಯ ಕೂಡ ಮಧ್ಯಮ ವರ್ಗದವರನ್ನು ಪ್ರತಿನಿಧಿಸುವ ಪಾತ್ರದಲ್ಲಿದ್ದಾರೆ. ಇದೇ ರೀತಿ ಈ ಸಿನಿಮಾ ನಿರ್ದೇಶನ ಮಾಡಿರುವ ಶಂಕರ್‌ ಗುರು ಈ ಹಿಂದೆ ಕೊರಿಯರ್‌ ಬಾಯ್‌ ಆಗಿ ಕೆಲಸ ಮಾಡಿದವರು ಎಂಬುದೂ ಇಲ್ಲಿ ವಿಶೇಷ. ಹೌದು, ‘ಬಡವ ರಾಸ್ಕಲ್‌’ ಸಿನಿಮಾ ನಿರ್ದೇಶಕ ಶಂಕರ್‌ ಗುರು ಅವರು ಬೆಂಗಳೂರಿನ ಶ್ರೀನಗರದಲ್ಲಿ ಕೊರಿಯರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಸಂಜೆ ಕಾಲೇಜಿನಲ್ಲಿ ಓದುತ್ತಾ ಸಿನಿಮಾ ಕನಸು ಕಾಣುತ್ತಿದ್ದ ಅವರು ನಂತರ ಸೇರಿದ್ದು ‘ಮಠ’ ಸಿನಿಮಾ ಖ್ಯಾತಿಯ ಗುರುಪ್ರಸಾದ್‌ ತಂಡಕ್ಕೆ. ಅವರು ‘ಎದ್ದೇಳು ಮಂಜುನಾಥ’ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ ಸಹ ನಿರ್ದೇಶಕರಾಗಿ ಸೇರಿಕೊಂಡ ಶಂಕರ್‌ ಅನೇಕ ವರ್ಷಗಳ ಕಾಲ ಗುರುಪ್ರಸಾದ್‌ ಜತೆಗೆ ಕೆಲಸ ಮಾಡಿದ್ದಾರೆ. ‘ನಮ್ಮದು ಮಧ್ಯಮ ವರ್ಗದ ಕುಟುಂಬ. ಮನೆಯಲ್ಲಿ ಕಷ್ಟವಿದ್ದ ಕಾರಣ ನಾನು 10ನೇ ತರಗತಿಯ ನಂತರ ಕೊರಿಯರ್‌ ಬಾಯ್‌ ಕೆಲಸ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ಆಮೇಲೆ ಗುರುಪ್ರಸಾದ್‌ ಅವರ ಬಳಿ ಕೆಲಸಕ್ಕೆ ಸೇರಿದೆ. ಆ ಸಮಯದಲ್ಲಿಯೇ ನನಗೆ ‘ಬಡವ ರಾಸ್ಕಲ್‌’ನ ಕಥೆ ಹೊಳೆಯಿತು. ಜತೆಗೆ ನನ್ನ ಸುತ್ತಮುತ್ತ ನಡೆದ ಅನೇಕ ಘಟನೆಗಳು ಈ ಕಥೆ ಬರೆಯಲು ಸ್ಪೂರ್ತಿಯಾದವು’ ಎಂದಿದ್ದಾರೆ ನಿರ್ದೇಶಕ ಶಂಕರ್‌. ‘ಬಡವ ರಾಸ್ಕಲ್‌ ಮಧ್ಯಮ ವರ್ಗದ ಯುವಕನ ಕಥೆ. ಅಂತಹ ಮನೆಗಳಲ್ಲಿ ಗಂಡ, ಹೆಂಡತಿ, ಮಗ, ಮತ್ತಿತರರು ಇರುತ್ತಾರೆ. ಕೆಲವು ವಿಷಯಗಳಿಗೆ ಅವರು ಕಿತ್ತಾಡುತ್ತಿರುತ್ತಾರೆ. ನಂತರ ಒಂದಾಗುತ್ತಾರೆ. ಈ ಕಿತ್ತಾಟದಲ್ಲೂಒಂದು ಪ್ರೀತಿ ಇರುತ್ತದೆ. ಇಂತಹ ಹಲವು ಕುಟುಂಬಗಳನ್ನು ನಾನು ನನ್ನ ಮನೆಯ ಸುತ್ತಮುತ್ತ ನೋಡಿದ್ದೇನೆ. ಧನಂಜಯ ಅವರ ನಟನಾ ಶಕ್ತಿಯ ಬಗ್ಗೆ ನನಗೆ ಮೊದಲಿನಿಂದಲೂ ಗೊತ್ತು. ಇಂತಹ ಮಧ್ಯಮ ವರ್ಗದ ಕುಟುಂಬದಲ್ಲಿ ವಿದ್ಯಾವಂತ ಯುವಕನಿದ್ದರೆ ಹೇಗಿರುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದಿದ್ದಾರೆ ಅವರು. ಈ ಸಿನಿಮಾದಲ್ಲಿರುವ ಕೆಲವು ಕಲಾವಿದರಲ್ಲಿ ಆಟೋ ಡ್ರೈವರ್‌ಗಳಿದ್ದಾರೆ. ಇವರು ಸಿನಿಮಾ ಚಿತ್ರೀಕರಣ ಮುಗಿಸಿ ಈಗಲೂ ಆಟೋ ಓಡಿಸಿ ಜೀವನ ಮಾಡುತ್ತಿದ್ದಾರೆ. ಈ ಸಿನಿಮಾ ಧನಂಜಯ ಅವರ ಮೊದಲ ನಿರ್ಮಾಣ ಎಂಬುದು ಕೂಡ ವಿಶೇಷ. ‘ಬಡವ ರಾಸ್ಕಲ್‌’ ಸಿನಿಮಾವನ್ನು ಬೆಂಗಳೂರಿನ ಶ್ರೀನಗರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕರು ಕಂಡಂತಹ ಹಲವು ಘಟನೆಗಳನ್ನು ಅದೇ ಜಾಗದಲ್ಲಿ ಸೃಷ್ಟಿ ಮಾಡಿರುವುದು ಈ ಕಥೆಯ ವಿಶೇಷತೆ. ಧನಂಜಯಗೆ ಈ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್‌ ಜೋಡಿಯಾಗಿದ್ದಾರೆ.