'ಮಾಸ್ಕ್ ಧರಿಸಿ, ಕೈಗಳನ್ನು ಸ್ವಚ್ಛಗೊಳಿಸಿ'-ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ ಎನ್‌ಟಿಆರ್!

ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು 'ಆರ್‌ಆರ್‌ಆರ್' ಸಿನಿಮಾತಂಡ ಮಾಡಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡದ ಸದಸ್ಯರು ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ನಟ ಎನ್‌ಟಿಆರ್ ಕನ್ನಡದಲ್ಲಿ ಮಾತನಾಡಿದ್ದಾರೆ.

'ಮಾಸ್ಕ್ ಧರಿಸಿ, ಕೈಗಳನ್ನು ಸ್ವಚ್ಛಗೊಳಿಸಿ'-ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ ಎನ್‌ಟಿಆರ್!
Linkup
ದೇಶಾದ್ಯಂತ ಕೊರೊನಾ ಮಹಾಮಾರಿ ಅಬ್ಬರ ಹೆಚ್ಚಾಗಿದೆ. ದಿನನಿತ್ಯ ಹೊಸ ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ. ಜನರು ಜಾಗೃತರಾಗಿ, ಕೊರೊನಾವನ್ನು ಹೆಚ್ಚು ಹರಡದಂತೆ ಮಾಡಬೇಕಿದೆ. ಈಗಾಗಲೇ ಕೇರಳ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಕರ್ನಾಟಕದಲ್ಲೂ ಕೊರೊನಾ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಇತ್ತ ಸೆಲೆಬ್ರಿಟಿಗಳು ಜನಸಾಮಾನ್ಯರಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇದೀಗ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರತಂಡ ಅಂಥದ್ದೊಂದು ಜಾಗೃತಿ ಅಭಿಯಾನಕ್ಕೆ ಕೈ ಹಾಕಿದೆ. ವಿಶೇಷವೆಂದರೆ, ಇದರಲ್ಲಿ ಆರ್‌ಆರ್‌ಆರ್‌ ಚಿತ್ರಕ್ಕೆ ಸಂಬಂಧಪಟ್ಟ ಐವರು ಸದಸ್ಯರು ಭಾಗಿಯಾಗಿದ್ದಾರೆ. ತೆಲುಗು, ಸೇರಿದಂತೆ ಐದು ಭಾಷೆಯಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಕನ್ನಡದಲ್ಲಿ ಮಾತನಾಡಿದ ನಟ ಈ ವಿಡಿಯೋದಲ್ಲಿ ಜೂ. ಎನ್‌ಟಿಆರ್ ಕನ್ನಡದಲ್ಲೇ ಮಾತನಾಡಿದ್ದಾರೆ. 'ಎಲ್ಲರಿಗೂ ನನ್ನ ನಮಸ್ಕಾರ.. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ದೊಡ್ಡ ಅಸ್ತ್ರಗಳಾಗಿವೆ. ಮಾಸ್ಕ್ ಅನ್ನು ಸದಾ ಧರಿಸಿ, ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ ಮತ್ತು ನೀವು ಪಬ್ಲಿಕ್‌ನಲ್ಲಿ ಓಡಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಮಾಸ್ಕ್‌ ಧರಿಸೋಣ.. ವ್ಯಾಕ್ಸಿನ್‌ ಪಡೆಯೋಣ..' ಎಂದು ಕನ್ನಡದಲ್ಲಿ ಎನ್‌ಟಿಆರ್‌ ಹೇಳಿದ್ದಾರೆ. ಇದನ್ನು ಕೇಳಿದ ಕರ್ನಾಟಕದ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಎನ್‌ಟಿಆರ್‌ ತಾಯಿ ಕರ್ನಾಟಕದವರು! ಅಂದಹಾಗೆ, ಜೂ. ಎನ್‌ಟಿಆರ್ ಅವರ ತಾಯಿ ಶಾಲಿನಿ ನಂದಮೂರಿ ಅವರು ಮೂಲತಃ ಕರ್ನಾಟಕದ ಕುಂದಾಪುರದವರು. ಸೀನಿಯರ್ ಎನ್‌ಟಿಆರ್ ಅವರ ಪುತ್ರ ನಂದಮೂರಿ ಹರಿಕೃಷ್ಣ ಅವರು ಶಾಲಿನಿ ಅವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು. ಅವರ ಪುತ್ರ ಜೂ. ಎನ್‌ಟಿಆರ್‌. ಮನೆಯಲ್ಲಿ ಅಮ್ಮ ಕನ್ನಡತಿಯಾಗಿದ್ದರಿಂದ ಎನ್‌ಟಿಆರ್‌ ಕೂಡ ಕನ್ನಡ ಕಲಿತುಕೊಂಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಅವರು 'ನನ್ನಮ್ಮ ಕನ್ನಡದವರು' ಅಂತ ಹೇಳಿಕೊಂಡಿದ್ದಾರೆ. ಸದ್ಯ ಸ್ಷಷ್ಟವಾಗಿ ಕನ್ನಡದಲ್ಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವ ಎನ್‌ಟಿಆರ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ! ಇನ್ನು, ಇದೇ ವಿಡಿಯೋದಲ್ಲಿ ನಟ ರಾಮ್‌ ಚರಣ್‌ ತಮಿಳು, ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಮಲಯಾಳಂ, ಬಾಲಿವುಡ್‌ ನಟಿ ಆಲಿಯಾ ಭಟ್ ತೆಲುಗು ಹಾಗೂ ನಟ ಅಜಯ್ ದೇವ್‌ಗನ್ ಹಿಂದಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.