ಅಮೆರಿಕ, ಚೀನಾದಂತೆ 2047ಕ್ಕೆ ಭಾರತವೂ ಶ್ರೀಮಂತವಾಗಲಿದೆ: ಮುಕೇಶ್‌ ಅಂಬಾನಿ

ಭಾರತ ಸ್ವಾತಂತ್ರ್ಯ ಗಳಿಸಿ 2047ಕ್ಕೆ ನೂರು ವರ್ಷ ತುಂಬುತ್ತದೆ. ಆ ವೇಳೆಗೆ ಭಾರತವು ಅಮೆರಿಕ, ಚೀನಾ ಮಾದರಿಯಲ್ಲಿ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ಮುಕೇಶ್‌ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕ, ಚೀನಾದಂತೆ 2047ಕ್ಕೆ ಭಾರತವೂ ಶ್ರೀಮಂತವಾಗಲಿದೆ: ಮುಕೇಶ್‌ ಅಂಬಾನಿ
Linkup
ಹೊಸದಿಲ್ಲಿ: ಭಾರತವು 2047ರ ವೇಳೆಗೆ ಮತ್ತು ಮಾದರಿಯಲ್ಲಿ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1991ರ ಆರ್ಥಿಕ ಸುಧಾರಣಾ ಕ್ರಮಗಳಿಗೆ 30 ವರ್ಷ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ' ಟೈಮ್ಸ್‌ ಆಫ್‌ ಇಂಡಿಯಾ'ಗೆ ಬರೆದಿರುವ ಲೇಖನದಲ್ಲಿ ಅಂಬಾನಿ, ದೇಶದ ಜಿಡಿಪಿ 3 ಲಕ್ಷ ಕೋಟಿ ಡಾಲರ್‌ಗೆ ಮುಟ್ಟಲು ಉದಾರೀಕರಣ ನೀತಿ ಸಹಕರಿಸಿದೆ. ಅದು 10 ಪಟ್ಟು ವೃದ್ಧಿಸಿದೆ ಎಂದಿದ್ದಾರೆ. ಆರ್ಥಿಕ ಉದಾರೀಕರಣದ ಮೂರು ದಶಕಗಳಲ್ಲಿ ಭಾರತೀಯರು ಪ್ರಯೋಜನ ಗಳಿಸಿದ್ದಾರೆ. ಆದರೆ ಭಾರತದ ಅಭಿವೃದ್ಧಿ ಮಾದರಿಯಲ್ಲಿ ಪಿರಮಿಡ್‌ನ ತಳ ಮಟ್ಟದಿಂದ ತುದಿಯ ತನಕ ಸಂಪತ್ತು ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದಿದ್ದಾರೆ. '' ಭಾರತ 1991ರಲ್ಲಿ ಕೊರತೆಯ ಆರ್ಥಿಕತೆಯಿಂದ 2021ರ ಅನುಕೂಲಕರ ಆರ್ಥಿಕತೆಯ ಮಟ್ಟಕ್ಕೆ ಬೆಳೆದಿದೆ. ಭವಿಷ್ಯದಲ್ಲಿ ಎಲ್ಲರ ಅಭಿವೃದ್ಧಿ ಮತ್ತು ಸಮೃದ್ಧಿಯ ಮಟ್ಟಕ್ಕೆ ವಿಕಾಸವಾಗಬೇಕು'' ಎಂದು ತಿಳಿಸಿದ್ದಾರೆ. 1990ರಿಂದೀಚೆಗೆ ಗಮನಾರ್ಹ ಬದಲಾವಣೆಗಳು ಸಂಭವಿಸಿವೆ. ಕಮ್ಯುನಿಸ್ಟ್‌ ಸೋವಿಯತ್‌ ಒಕ್ಕೂಟ ಕುಸಿದಿದೆ. ಶೀತಲ ಸಮರ ಅಂತ್ಯವಾಗಿದೆ. ಭಾರತ ಆರ್ಥಿಕ ಸುಧಾರಣೆಯ ದಿಟ್ಟ ಹಾದಿಯಲ್ಲಿ ಮುಂದುವರಿದಿದೆ. ಮೂವತ್ತು ವರ್ಷಗಳ ನಂತರ ಭಾರತ ಮತ್ತಷ್ಟು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವ ಎಲ್ಲಲಕ್ಷಗಳು ಕಾಣಿಸಿದೆ. ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಬಡತನ ಇಳಿಕೆ, ಆದಾಯ ಏರಿಕೆ: ಉದಾರೀಕರಣಕ್ಕೆ ಮುನ್ನ 4 ದಶಕಗಳಲ್ಲಿ ಸಾರ್ವಜನಿಕ ವಲಯ ಪ್ರಾಬಲ್ಯದಲ್ಲಿತ್ತು. ಈಗ ಖಾಸಗಿ ವಲಯವೂ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಜನಸಂಖ್ಯೆ 88 ಕೋಟಿಯಿಂದ 138 ಕೋಟಿಗೆ ಏರಿದ್ದರೂ, ಬಡತನದ ಪ್ರಮಾಣ ಇಳಿಕೆಯಾಗಿದೆ. ಪ್ರಮುಖ ಮೂಲಸೌಕರ್ಯಗಳು ಸುಧಾರಿಸಿವೆ. ನಮ್ಮ ಎಕ್ಸ್‌ಪ್ರಸ್‌ ವೇಗಳು, ಏರ್‌ಪೋರ್ಟ್‌ಗಳು, ಬಂದರುಗಳು ವಿಶ್ವದರ್ಜೆಯದ್ದಾಗಿದೆ. ಒಂದು ಟೆಲಿಫೋನ್‌, ಗ್ಯಾಸ್‌ ಸಂಪರ್ಕಕ್ಕೆ ಜನ ವರ್ಷಗಟ್ಟಲೆ ಕಾಯುತ್ತಿದ್ದರು. ಕಂಪ್ಯೂಟರ್‌ ಕೊಳ್ಳಲೂ ಸರಕಾರದ ಅನುಮತಿ ಬೇಕಿತ್ತು ಎಂಬುದನ್ನು ಈಗಿನ ಮಕ್ಕಳಿಗೆ ನಂಬಲೂ ಕಷ್ಟವಾದೀತು ಎಂದಿದ್ದಾರೆ. ಭಾರತದ 2047ರ ಗುರಿ: ಭಾರತ ಸ್ವಾತಂತ್ರ್ಯ ಗಳಿಸಿ 2047ಕ್ಕೆ ನೂರು ವರ್ಷ ತುಂಬುತ್ತದೆ. ಆ ವೇಳೆಗೆ ಭಾರತವು ಅಮೆರಿಕ, ಚೀನಾ ಮಾದರಿಯಲ್ಲಿ ಶ್ರೀಮಂತ ರಾಷ್ಟ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಭಾರತವನ್ನು ವಿಶ್ವದ ಮೂರು ಪ್ರಮುಖ ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅನಿರೀಕ್ಷಿತ ವಿಪತ್ತು ತಾತ್ಕಾಲಿಕ: ಮಹಾ ಸಾಂಕ್ರಾಮಿಕ ರೋಗಗಳಂತಹ ವಿಪತ್ತುಗಳು ಅನಿರೀಕ್ಷಿತ ಹಾಗೂ ತಾತ್ಕಲಿಕವಾಗಿರುತ್ತವೆ. ಇವುಗಳನ್ನು ಎದುರಿಸುವುದರ ಜತೆಗೆ ನಮ್ಮ ಮಕ್ಕಳು ಮತ್ತು ಯುವಜನತೆಯನ್ನು ಮುಂದಿನ 30 ವರ್ಷಗಳ ಭಾರತದ ಅಭಿವೃದ್ಧಿಗೆ ಅಣಿಗೊಳಿಸಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು. ಇದುವರೆಗೆ ಭಾರತದ ಉದಾರೀಕರಣ ಮಾದರಿಯಿಂದ ಸಂಪತ್ತು ಸೃಷ್ಟಿಯಾಗಿದೆ. ಇದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಮುಂಬರುವ ದಿನಗಳಲ್ಲಿ ಸಂಪತ್ತು ಆರ್ಥಿಕತೆಯ ಪಿರಮಿಡ್‌ನ ಕೆಳಮಟ್ಟದಲ್ಲಿರುವ ಬಡವರಿಗೂ ತಲುಪಬೇಕಾಗಿದೆ ಎಂದರು. ಸಂಪತ್ತಿನ ಅರ್ಥ ಅರಿಯೋಣ: ಸುದೀರ್ಘ ಕಾಲದಿಂದ ಸಂಪತ್ತು ಎಂದರೆ ನಮ್ಮ ವೈಯಕ್ತಿಕ ಮತ್ತು ಹಣಕಾಸು ಸಂಪತ್ತಿನಿಂದ ಮಾತ್ರ ಅಳೆಯಲಾಗುತ್ತಿದೆ. ಆದರೆ ಭಾರತದ ನಿಜವಾದ ಸಂಪತ್ತು ಯಾವುದು ಎಂದರೆ, ' ಎಲ್ಲರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಅವಕಾಶ, ಕ್ರೀಡೆ, ಸಂಸ್ಕೃತಿ, ಕಲೆ ಸುರಕ್ಷಿತ ಪರಿಸರ ಮತ್ತು ಅಂತಿಮವಾಗಿ ಸುಖ ಸಮೃದ್ಧಿ'ಯೇ ನಿಜವಾದ ಸಂಪತ್ತಾಗಿದೆ ಎಂದು ವಿವರಿಸಿದ್ದಾರೆ ಅಂಬಾನಿ. ದೇಶಿ ಮಾರುಕಟ್ಟೆ ಲಾಭಕರ: ಭಾರತದ ದೊಡ್ಡ ಅನುಕೂಲ ಏನೆಂದರೆ ಬೃಹತ್‌ ದೇಶಿ ಮಾರುಕಟ್ಟೆ. ಇದರ ಸಂಪೂರ್ಣ ಬಳಕೆ ಇನ್ನೂ ಆಗಿಲ್ಲ. 100 ಕೋಟಿ ಮಧ್ಯಮ ವರ್ಗದ ಜನತೆಯ ಆದಾಯ ಹೆಚ್ಚಳದೊಂದಿಗೆ ನಮ್ಮ ಆರ್ಥಿಕತೆಯ ಪವಾಡಸದೃಶ ಬೆಳವಣಿಗೆ ಆರಂಭವಾಗಿದೆ. ಇದು ಜನಸಂಖ್ಯೆಯ ದೃಷ್ಟಿಯಿಂದ ಅಮೆರಿಕ ಮತ್ತು ಯುರೋಪಿನ ಒಟ್ಟು ಮಾರುಕಟ್ಟೆಗೆ ಸಮಾನವಾಗಿದೆ ಎಂದಿದ್ದಾರೆ. ಸಾಮಾನ್ಯವಾಗಿ ಭಾರತ ಕಡಿಮೆ ತಂತ್ರಜ್ಞಾನ ಆಧರಿತ ಚಟುವಟಿಕೆಗಳನ್ನು ಹೊಂದಿದೆ. ಇದು ಕೈಗೆಟಕುವ ಹೈಟೆಕ್‌ ಆಧಾರಿತವಾಗಿ ಬೆಳೆಯಬೇಕು. ಇದು ಭಾರತದ ಅಗತ್ಯಗಳನ್ನು ಪೂರೈಸಲಿದೆ ಎಂದರು.