ಜಾಲತಾಣಗಳಿಗೆ ಸರಕಾರದ ಹೊಸ ನೀತಿ ಸಂಹಿತೆ! ಫೇಸ್‌ಬುಕ್‌, ಟ್ವಿಟರ್‌ ಸೇವೆಗೆ ಮೇ 26ರಿಂದ ತಡೆ?

ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ಇತ್ತೀಚಿನ ಮಾರ್ಗಸೂಚಿ ಪಾಲಿಸದಿದ್ದರೆ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಜಾಲತಾಣಗಳಿಗೆ ಸರಕಾರದ ಹೊಸ ನೀತಿ ಸಂಹಿತೆ! ಫೇಸ್‌ಬುಕ್‌, ಟ್ವಿಟರ್‌ ಸೇವೆಗೆ ಮೇ 26ರಿಂದ ತಡೆ?
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ಇತ್ತೀಚಿನ ಮಾರ್ಗಸೂಚಿ ಪಾಲಿಸದಿದ್ದರೆ , ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಈ ಜಾಲತಾಣಗಳ ಸೇವೆ ಸ್ಥಗಿತವಾಗುವ ಅಪಾಯವೂ ಇದೆ ಎಂದು ಮೂಲಗಳು ಎಚ್ಚರಿಸಿವೆ. ಸರಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿ ನೀತಿ ಸಂಹಿತೆಯನ್ನು ರೂಪಿಸಿತ್ತು. ಅದರ ಜಾರಿಗೆ ಮೂರು ತಿಂಗಳಿನ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗುತ್ತಿದ್ದು, ನಿಯಮಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಅಂಥ ಸಂಸ್ಥೆಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ. ಅವುಗಳ ವಿರುದ್ಧ ಕ್ರಿಮಿನಲ್‌ ವಿಚಾರಣೆಯೂ ನಡೆಯಬಹುದು. ವಿದೇಶಿ ಹಾಗೂ ಸ್ವದೇಶಿ ಸಂಸ್ಥೆಗಳಿಗೆ ಈ ಅನ್ವಯವಾಗಲಿದೆ. ಸಾಮಾಜಿಕ ಜಾಲತಾಣ ಕಂಪನಿ 'ಕೂ' ಹೊರತುಪಡಿಸಿ ಮಿಕ್ಕಿದ ಪ್ರಮುಖ ಜಾಲತಾಣಗಳು ನಿಯಮಾನುಸಾರ ಸ್ಥಳೀಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿಲ್ಲ. ಹೊಸ ಕಾನೂನು ಪ್ರಕಾರ ರಕ್ಷಣೆ, ವಿದೇಶಾಂಗ, ಗೃಹ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ. ನಿಯಮಗಳು ಉಲ್ಲಂಘನೆಯಾದರೆ ಈ ಸಮಿತಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಜಂಟಿ ಕಾರ್ಯದರ್ಶಿ ಅಥವಾ ಮೇಲ್ಮಟ್ಟದ ಅಧಿಕಾರಿ ನಿಯುಕ್ತಿಯಾಗಲಿದ್ದು, ಅವರು ಕಾನೂನು ಉಲ್ಲಂಘನೆಯಾದ ಪಕ್ಷದಲ್ಲಿ ಜಾಲತಾಣಗಳ ವಿಷಯಗಳನ್ನು ಬ್ಲಾಕ್‌ ಮಾಡಲು ನೇರವಾಗಿ ಸೂಚಿಸಬಹುದು. ಟ್ವಿಟರ್‌ ಕಚೇರಿಗೆ ನೋಟಿಸ್‌: ಈ ನಡುವೆ ದಿಲ್ಲಿ ಪೊಲೀಸರ ಎರಡು ತಂಡಗಳು ಟ್ವಿಟರ್‌ ಇಂಡಿಯಾದ ಕಚೇರಿಗೆ ಸೋಮವಾರ ಭೇಟಿ ನೀಡಿದ್ದು, 'ಕಾಂಗ್ರೆಸ್‌ ಟೂಲ್‌ಕಿಟ್‌' ಪ್ರಕರಣದ ತನಿಖೆ ಚುರುಕುಗೊಳಿಸಿವೆ. ಕಾಂಗ್ರೆಸ್‌ನ ನಕಲಿ ಲೆಟರ್‌ಹೆಡ್‌ ಬಳಸಿ 'ಕಾಂಗ್ರೆಸ್‌ ಟೂಲ್‌ಕಿಟ್‌' ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.