Vainidhi Jagdish: ಧನಂಜಯ ನಟನೆಯ 'ರತ್ನನ್‌ ಪ್ರಪಂಚ'ದಲ್ಲಿ ವೈನಿಧಿ ಯಾನ

'ಯಾನ' ಸಿನಿಮಾದಿಂದ ಹೀರೋಯಿನ್‌ ಆಗಿ ಸಿನಿ ಜರ್ನಿ ಪ್ರಾರಂಭಿಸಿದ್ದ ನಟಿ ವೈನಿಧಿ ಜಗದೀಶ್‌ ಈಗ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡರಲ್ಲೂ ತದ್ವಿರುದ್ಧವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vainidhi Jagdish: ಧನಂಜಯ ನಟನೆಯ 'ರತ್ನನ್‌ ಪ್ರಪಂಚ'ದಲ್ಲಿ ವೈನಿಧಿ ಯಾನ
Linkup
ಪದ್ಮಾ ಶಿವಮೊಗ್ಗ ನಟಿ ವೈನಿಧಿ ಜಗದೀಶ್‌ ತಮ್ಮ ಅಮ್ಮ, ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್‌ ನಿರ್ದೇಶನದ 'ಯಾನ' ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಅದಾದ ನಂತರ ಈಗ ಮತ್ತೆ 'ಬೆಂಗಳೂರು ಬಾಯ್ಸ್' ಮತ್ತು 'ರತ್ನನ್‌ ಪ್ರಪಂಚ' ಚಿತ್ರಗಳಲ್ಲಿ ವಿಭಿನ್ನ ರೀತಿಯ ಪಾತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. 'ಎರಡೂ ಪಾತ್ರಗಳು ವಿಭಿನ್ನವಾಗಿವೆ. ಒಂದರಲ್ಲಿ ಸಿಟಿ ಸ್ಟೋರಿ, ಇನ್ನೊಂದರಲ್ಲಿ ಹಳ್ಳಿ ಕಥೆ ಇದೆ. 'ಬೆಂಗಳೂರು ಬಾಯ್ಸ್‌' ಚಿತ್ರದಲ್ಲಿ ಸ್ವೀಟ್‌ ಹುಡುಗಿ. ಸಂಪ್ರದಾಯಸ್ಥಳಂತೆ ಕಾಣಿಸಿಕೊಂಡಿದ್ದೇನೆ. ಹೊರಗಿನ ಪ್ರಪಂಚಕ್ಕೆ ಹೆಚ್ಚು ಎಕ್ಸ್‌ಪೋಸ್‌ ಆಗದವಳು. ಆದರೆ, 'ರತ್ನನ್‌ ಪ್ರಪಂಚ' ಚಿತ್ರದಲ್ಲಿಉತ್ತರ ಕರ್ನಾಟಕದ ಹುಡುಗಿಯಾಗಿ ನಟಿಸುತ್ತಿದ್ದೇನೆ. ಬಹಳ ಜೋರು ಸ್ವಭಾವದ ಹುಡುಗಿ ಅವಳು. 'ಯಾನ' ಚಿತ್ರದಲ್ಲಿ ನಾನು ನಟಿಸಿದ್ದ ರೋಲ್‌ಗಿಂತ ಇವೆರಡೂ ಬೇರೆ ರೀತಿಯಲ್ಲಿಇವೆ' ಎಂದಿದ್ದಾರೆ ವೈನಿಧಿ. ರಾಜ್‌ ಸೂರ್ಯ ನಿರ್ದೇಶನದ 'ಬೆಂಗಳೂರು ಬಾಯ್ಸ್'ನಲ್ಲಿ ನಾಲ್ಕು ಯುವ ಜೋಡಿಗಳ ಕಥೆ ಇದೆ. ಕಾಲೇಜ್‌ ಲೈಫ್‌ ಸ್ಟೋರಿ ಚಿತ್ರದಲ್ಲಿದೆ. 'ಈ ಚಿತ್ರ ಯುವ ಪೀಳಿಗೆಗೆ ಬಹಳ ಹತ್ತಿರವಾಗಿದೆ. ಕಾಲೇಜು ಲೈಫ್‌, ಇಂದಿನ ಹುಡುಗ ಹುಡುಗಿಯ ಜೀವನಶೈಲಿ, ಲವ್‌ ಅಫೇರ್‌, ಅವರ ಆಲೋಚನಾ ಕ್ರಮ ಹೇಗಿರುತ್ತೆ, ಅವರು ಜೀವನವನ್ನು ಯಾವ ರೀತಿ ನೋಡುತ್ತಾರೆ ಎನ್ನುವುದು ಸಿನಿಮಾದಲ್ಲಿದೆ' ಎಂದಿದ್ದಾರವರು. ರೋಹಿತ್‌ ಪದಕಿ ನಿರ್ದೇಶನದ, ಧನಂಜಯ್‌ ಮತ್ತು ಪ್ರಮೋದ್‌ ನಟನೆಯ 'ರತ್ನನ್‌ ಪ್ರಪಂಚ' ಚಿತ್ರದ ಕಥೆಯೂ ವಿಭಿನ್ನ ಎನ್ನುತ್ತಾರೆ ವೈನಿಧಿ. 'ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನಗಂತೂ ತುಂಬಾ ಇಷ್ಟ ಆಯ್ತು. ಕಥೆಯ ಬಗ್ಗೆ ಈಗಲೇ ನಾನು ಏನೂ ಹೇಳುವಂತಿಲ್ಲ. ಕಾಮಿಡಿ, ಎಮೋಷನ್ಸ್‌, ಫ್ಯಾಮಿಲಿ ಡ್ರಾಮಾ ಎಲ್ಲವೂ ಇರುವ ಚಿತ್ರ ಇದು. ಪ್ರಮೋದ್‌ಗೆ ಜೋಡಿಯಾಗಿ ನಾನು ನಟಿಸಿದ್ದೇನೆ. ಧನಂಜಯ್‌, ಕಾರ್ತಿಕ್‌, ಪ್ರಮೋದ್‌, ಶ್ರುತಿ ಮೇಡಮ್‌, ರೋಹಿತ್‌ ಅವರ ಜತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಧನಂಜಯ್‌ ಬಹಳ ಹಂಬಲ್‌, ಸಿಂಪಲ್‌. ಬಹಳ ಕಾಮಿಡಿ ಮಾಡ್ತಿರ್ತಾರೆ. ಇಡೀ ಟೀಮ್‌ ಚೆನ್ನಾಗಿತ್ತು' ಎಂದಿದ್ದಾರೆ ಅವರು. ಚಿತ್ರದಲ್ಲಿಉತ್ತರ ಕರ್ನಾಟಕ ಕನ್ನಡದ ಸಂಭಾಷಣೆ ಇದ್ದು, ಅದನ್ನು ಕಲಿಯಬೇಕಾಯ್ತು ಎಂದಿದ್ದಾರೆ. 'ನನಗೆ ಮೊದಲು ಸ್ವಲ್ಪ ಕಷ್ಟ ಆಯ್ತು. ಪ್ರಮೋದ್‌ ಹೇಳಿಕೊಟ್ಟರು. ಸಿನಿಮಾ ಪ್ರಾರಂಭ ಆಗೋಕೆ ಮೊದಲು ವರ್ಕ್‌ಶಾಪ್‌ ಮಾಡಿದ್ದು ತುಂಬಾ ಹೆಲ್ಪ್‌ ಆಯ್ತು' ಎನ್ನುತ್ತಾರೆ ಅವರು. ನಟನೆಯ ಜತೆ ಫ್ಯಾಷನ್‌ ಡಿಸೈನ್‌ನಲ್ಲೂಆಸಕ್ತಿ ಇರುವ ವೈನಿಧಿ ತಮ್ಮ ವಿನ್ಯಾಸಗಳನ್ನು ಮುಂದೆ ಮಾರುಕಟ್ಟೆಗೆ ಬಿಡುವ ಆಲೋಚನೆಯನ್ನೂ ಮಾಡಿದ್ದಾರೆ. 'ಲಾಕ್‌ಡೌನ್‌ನಿಂದಾಗಿ ಸಿನಿಮಾಗಳು ನಿಧಾನವಾಗಿದೆ. ಈ ಬಿಡುವಿನ ವೇಳೆಯಲ್ಲಿ ನಾನು ಹಲವು ವಿಷಯಗಳನ್ನು ಕಲಿತೆ. ನಾವು ಮೂವರೂ ಸಹೋದರಿಯರು ಸೇರಿ ಫಂಡ್‌ ಕಲೆಕ್ಟ್ ಮಾಡಿ ಫುಡ್‌ ಕಿಟ್‌ಗಳನ್ನು ವಿತರಿಸಿದೆವು. ಫ್ಯಾಷನ್‌ ಡಿಸೈನ್‌ನಲ್ಲಿ ಆಸಕ್ತಿ ಇರೋದ್ರಿಂದ ಒಂದು ಪೇಜ್‌ ಮಾಡಿ ನನ್ನ ಡಿಸೈನ್‌ ಅನ್ನು ಅಲ್ಲಿ ಸೇಲ್‌ ಮಾಡತೊಡಗಿದೆ. ಆರ್ಡರ್‌ ಬಂದ ಹಾಗೆ ರೆಡಿ ಮಾಡುತ್ತಿದ್ದೇನೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈಗ ಬ್ರಾಂಡ್‌ ನೇಮ್‌ನಲ್ಲಿ ಹೊರತರಬೇಕು ಎಂದಿದ್ದೇನೆ. ಸಿನಿಮಾಗೆ ಫ್ಯಾಷನ್‌ ಡಿಸೈನ್‌ ಮಾಡೋ ಯೋಚನೆ ಇಲ್ಲ. ಯಾಕೆಂದರೆ ಅದು ದೊಡ್ಡ ಟಾಸ್ಕ್‌' ಎನ್ನುತ್ತಾರೆ ಅವರು. ಕೋಟ್ಸ್‌: ಈಗ ನಟಿಸುತ್ತಿರುವ ಎರಡೂ ಸಿನಿಮಾಗಳು ಇಷ್ಟವಾಗಿದೆ. ನಟನೆಯನ್ನು ಬಹಳ ಎಂಜಾಯ್‌ ಮಾಡಿದೆ. ನಿಧಾನವಾದರೂ ಒಳ್ಳೆಯ ಪಾತ್ರ, ಸಿನಿಮಾಗಳಲ್ಲಿ ನಟಿಸಬೇಕೆಂದುಕೊಂಡಿದ್ದೇನೆ. 'ಯಾನ' ನಂತರ ಒಂದು ಕಿರುಚಿತ್ರದಲ್ಲಿ ನಟಿಸಿದ್ದೆ. ಈಗ ಹೊಸ ಸಿನಿಮಾಗಳಿಗೆ ಆಫರ್‌ ಬರುತ್ತಿದೆ. ಕೊರೊನಾ ಇರೋದ್ರಿಂದ ಫೈನಲೈಸ್‌ ಆಗಿಲ್ಲ. -ವೈನಿಧಿ ಜಗದೀಶ್‌, ನಟಿ