ಅಪಘಾತದಲ್ಲಿ ಮಗನಿಗೆ ಬಲವಾದ ಪೆಟ್ಟು ಬಿದ್ದಿದೆ, ಚಿಕಿತ್ಸೆ ನಡೆಯುತ್ತಿದೆ - ನಟ ಜಗ್ಗೇಶ್

ಕಾರು ಅಪಘಾತದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಯತಿರಾಜ್‌ಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಪಘಾತದಲ್ಲಿ ಮಗನಿಗೆ ಬಲವಾದ ಪೆಟ್ಟು ಬಿದ್ದಿದೆ, ಚಿಕಿತ್ಸೆ ನಡೆಯುತ್ತಿದೆ - ನಟ ಜಗ್ಗೇಶ್
Linkup
ಕನ್ನಡ ನಟ, 'ನವರಸ ನಾಯಕ' ಅವರ ಮಗ ಪ್ರಯಾಣಿಸುತ್ತಿದ್ದ ಕಾರು ಜುಲೈ 1ರಂದು ಚಿಕ್ಕಬಳ್ಳಾಪುರದ ಬಳಿ ಅಪಘಾತಕ್ಕೀಡಾಗಿತ್ತು. ರಸ್ತೆ ವಿಭಜಕಕ್ಕೆ ಗುದ್ದಿದ ರಭಸಕ್ಕೆ ಬಿಎಂಡಬ್ಲ್ಯೂ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸಮಯಕ್ಕೆ ಸರಿಯಾಗಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಪ್ರಾಣಕ್ಕೆ ಅಪಾಯವಾಗಿಲ್ಲ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಯತಿರಾಜ್‌ಗೆ ಬಲವಾದ ಪೆಟ್ಟು ಬಿದ್ದಿದೆ. ಹಾಗಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ನಟ ಜಗ್ಗೇಶ್ ಟ್ವೀಟ್ ''ಜೀವನದಲ್ಲಿ ಸಂಸಾರದ ಸರ್ವಸದಸ್ಯರ ಭಾರ ಹೊತ್ತು, ತನಗಾಗಿ ಏನು ಬಯಸದೆ ತನ್ನವರಿಗಾಗಿ ಬಂದದ್ದೆಲ್ಲಾ ಸಹಿಸಿ ನೋವುನುಂಗಿ ಹೆಜ್ಜೆ ಹಾಕುವ ಮೌನಯೋಗಿ ಅಪ್ಪ. ಇಂದು ಬಹಳ ನೆನಪಾದ ನನ್ನ ಅಪ್ಪ ಅವನ ತ್ಯಾಗದ ಮುಂದೆ ಇಂದು ನಾನು ತೃಣ ಎನ್ನಿಸಿತು. ಮಗನಿಗೆ ಬಹಳ ಒಳ ಏಟು ಬಿದ್ದಿದೆ. ಪಕ್ಕೆಮೂಳೆ ಬಲತೊಡೆ ಲಿಗಮೆಂಟ್‌ಗೆ ಬಲವಾದ ಪೆಟ್ಟು! ಚಿಕಿತ್ಸೆ ನಡೆಯುತ್ತಿದೆ'' ಎಂದು ನಟ ಜಗ್ಗೇಶ್ ಟ್ವೀಟಿಸಿದ್ದಾರೆ. ರಾಯರ ದಯೆಯಿಂದ ಏನೂ ಆಗಿಲ್ಲ ಎಂದಿದ್ದ ಜಗ್ಗೇಶ್ ''ರಾಯರು ನನ್ನ ಜೊತೆ ಸದಾ ಇರುತ್ತಾರೆ. ಇದ್ದಾರೆ! ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಿನಲ್ಲಿ ನಡೆಯುವುದೇ ನಾನಿದ್ದೀನೋ ಇರುತ್ತೀನೋ ನಿನ್ನ ಜೊತೆ ಯಾವಾಗಲೂ ಎಂದು ರಾಯರು ಅವರ ಪವಾಡ ನಿರೂಪಿಸಲು! ನಿನ್ನ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ. ಸದಾ ಅವರ ಸ್ಮರಣೆಯಲ್ಲೇ ಬದುಕುವ ನನಗೆ ಇದು ಮತ್ತೊಂದು ಪವಾಡ. ನಂಬಿ ಕೆಟ್ಟವರಿಲ್ಲಾ ಗುರು ರಾಯರ.. ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ'' ಎಂದು ನಿನ್ನೆಯಷ್ಟೇ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಹಾಗೇ, ''ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ.. ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ್. ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರು ಟು ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ'' ಎಂದು ಜಗ್ಗೇಶ್ ಟ್ವೀಟಿಸಿದ್ದರು. ಜೊತೆಗೆ ಆಕ್ಸಿಡೆಂಟ್ ಆದ ಕಾರಿನ ಫೋಟೋವನ್ನೂ ಜಗ್ಗೇಶ್ ಹಂಚಿಕೊಂಡಿದ್ದರು. ಬಳಿಕ ಈ ಎರಡೂ ಟ್ವೀಟ್‌ಗಳನ್ನು ಜಗ್ಗೇಶ್ ಡಿಲೀಟ್ ಮಾಡಿದ್ದರು. ''ಮಗನ ಕಾರ್ ಆಕ್ಸಿಡೆಂಟ್ ಚಿತ್ರ ನೋಡಿದರೆ ನನಗೆ ಹೃದಯದ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಗ್ಗೆಯಿಂದ ಏನೂ ತಿನ್ನಲಾಗದೆ ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ. ಮನೆಯವರು ಅದ ನೋಡದಂತೆ ವಿನಂತಿ ಮಾಡಿದರು. ಹಾಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ'' ಎಂದು ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜಗ್ಗೇಶ್ ಕಾರಣ ನೀಡಿದರು.