ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೊರೊನಾದಿಂದ ಸಾವು!

ಕನ್ನಡ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕಿರಣ್ ಸಾವನ್ನಪ್ಪಿದ್ದಾರೆ. ಸಹೋದರನ ನಿಧನದಿಂದ ಅರ್ಜುನ್ ಜನ್ಯ ತೀವ್ರ ದುಃಖದಲ್ಲಿದ್ದಾರೆ. ಕಿರಣ್ ಜೊತೆಗೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೊರೊನಾದಿಂದ ಸಾವು!
Linkup
ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ 40 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿ, ಆತಂಕ ಸೃಷ್ಟಿಯಾಗುತ್ತಿದೆ. ಅಲ್ಲದೆ, ಈ ಕೊರೊನಾ ಮಹಾಮಾರಿಗೆ ದಿನನಿತ್ಯ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದ ಕೆಲವರು ಈಚೆಗೆ ಕೊರೊನಾದಿಂದ ಅಸುನೀಗಿದ್ದಾರೆ. ಈಗ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅವರ ಸಹೋದರ ಕಿರಣ್ ಅವರು ಕೂಡ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ! ಭಾವುಕರಾದ ಅರ್ಜುನ್ ಸಹೋದರನಿಗೆ ಮುತ್ತಿಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅರ್ಜುನ್ ಜನ್ಯ, 'ಕೋವಿಡ್‌ನಿಂದ ನನ್ನ ಸಹೋದರನನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ತಿಳಿಯುತ್ತಿಲ್ಲ. ನನ್ನ ಉಸಿರು ಇರುವವರೆಗೂ ನೀನೇ ನನ್ನ ಉಸಿರು' ಎಂದು ಭಾವುಕರಾಗಿದ್ದಾರೆ! ಅಂದಹಾಗೆ, ಅರ್ಜುನ್‌ಗೂ ಕಳೆದ ತಿಂಗಳು ಕೊರೊನಾ ಪಾಸಿಟಿವ್ ಆಗಿತ್ತು. ಆಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮೇಲೆ ಅವರು ಚೇತರಿಸಿಕೊಂಡಿದ್ದರು. ಅರ್ಜುನ್ ಆರೋಗ್ಯದ ಬಗ್ಗೆ ಹರಿದಾಡಿದ್ದ ಫೇಕ್ ನ್ಯೂಸ್‌! ಅರ್ಜುನ್ ಜನ್ಯಗೆ ಕೊರೊನಾ ಪಾಸಿಟಿವ್ ಆದಾಗ ಒಂದಷ್ಟು ಫೇಕ್ ಸುದ್ದಿಗಳು ಹರಿದಾಡಿದ್ದವು. ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಜುನ್ ಜನ್ಯ ಒಂದು ಪೋಸ್ಟ್ ಹಾಕಿದ್ದರು. 'ಈ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಯೂಟ್ಯೂಬ್ ಚಾನೆಲ್ ಗಳು ನನ್ನ ಬಗ್ಗೆ, ನನ್ನ ಕುಟುಂಬದ ಪರಿಸ್ಥಿತಿಯ ಬಗ್ಗೆ ಹಾಗೂ ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ಸರಿ ಹೋಗಬಹುದೆಂದು ನಾನು ಸಮಾಧಾನವಾಗಿದ್ದೆ, ಆದರೆ ದಿನೇ ದಿನೇ ಇದು ಹೆಚ್ಚಾಗುತ್ತಿದೆ, ಜನರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಈ ಕೆಲವು ಯೂಟ್ಯೂಬ್ ಚಾನಲ್‌ಗಳು ನೀಡಿದ ಮಾಹಿತಿಗಳು ಅಪ್ಪಟ ಸುಳ್ಳು. ನಾನು ಆರೋಗ್ಯವಾಗಿಯೇ ಇದ್ದೇನೆ, ನನಗೆ ಕೋವಿಡ್ ಬಂದು ಗುಣಮುಖನಾಗಿ, ವೈದ್ಯರ ಸಲಹೆಯಂತೆ, ಈಗ ಮನೆಯಲ್ಲಿಯೇ ಹತ್ತು ದಿನದ ಐಸೋಲೇಷನ್‌ನಲ್ಲಿದ್ದೇನೆ. ಈ ರೀತಿಯ ಹೀನಾ ಕಾರ್ಯಗಳನ್ನು ಮಾಡುತ್ತಿರುವ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ. ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲಾ ಸಾಕ್ಷಿಗಳನ್ನು ಸೈಬರ್ ಪೊಲೀಸರಿಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವಿಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಇಂತಹ ಸಂದರ್ಭಗಳಲ್ಲಿ ಸಾಧ್ಯವಾದರೆ ಒಳ್ಳೆಯದನ್ನು ಬಯಸಿ ಸಹಕರಿಸಿ' ಎಂದು ಅವರು ಬರೆದುಕೊಂಡಿದ್ದರು.