45 ಕೊರೊನಾ ರೋಗಿಗಳ ಜೀವ ಉಳಿಸಲು 30 ನಿಮಿಷಗಳಲ್ಲಿ ಬಂತು ಲಾರಿ: ಇದು ಗ್ರೀನ್ ಕಾರಿಡಾರ್ ಕಮಾಲ್..!

ರೋಗಿಗಳ ಜೀವ ಉಳಿಸಲು ಪೊಲೀಸರು ಕೈಗೊಂಡ ಗ್ರೀನ್ ಕಾರಿಡಾರ್‌ನಿಂದ 45 ಅಮಾಯಕ ಜೀವಗಳು ಉಳಿದಿವೆ. ಒತ್ತಡದಲ್ಲೂ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಕಿ ಪಡೆಗೆ ರೋಗಿಗಳ ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ.

45 ಕೊರೊನಾ ರೋಗಿಗಳ ಜೀವ ಉಳಿಸಲು 30 ನಿಮಿಷಗಳಲ್ಲಿ ಬಂತು ಲಾರಿ: ಇದು ಗ್ರೀನ್ ಕಾರಿಡಾರ್ ಕಮಾಲ್..!
Linkup
: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಆರ್ಭಟ ತಾರಕಕ್ಕೇರಿರುವ ಬೆನ್ನಲ್ಲೇ, ಅಲ್ಲೊಂದು ಇಲ್ಲೊಂದು ಒಳ್ಳೆಯ ಕೆಲಸಗಳು, ಒಳ್ಳೆಯ ಬೆಳವಣಿಗೆಗಳು ಆಗುತ್ತಿವೆ. ಈ ಉತ್ತಮ ಬೆಳವಣಿಗೆಗಳು ನಮ್ಮ ಸಮಾಜದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎಂದು ಸಾರುತ್ತಿವೆ. ಜೊತೆಯಲ್ಲೇ ಕೊರೊನಾ ವಿರುದ್ಧದ ಹೋರಾಟಕ್ಕೆ ಹೊಸ ಹುರುಪು ತುಂಬುತ್ತಿವೆ. ಅದಕ್ಕೊಂದು ಅತ್ಯುತ್ತಮ ನಿದರ್ಶನ ಇಲ್ಲಿದೆ. ಬೆಂಗಳೂರಿನ ಹೊರವಲಯದಿಂದ ಶಿವಾಜಿನಗರಕ್ಕೆ ಆಕ್ಸಿಜನ್ ತುಂಬಿದ್ದ ಲಾರಿ ಬರೋಕೆ ಎಷ್ಟು ಸಮಯ ಬೇಕಾಗುತ್ತೆ ಎಂದು ಯಾರಾದ್ರೂ ಕೇಳಿದ್ರೆ, ಗಂಟೆಗಳ ಲೆಕ್ಕ ಹಾಕಬೇಕು..! ಆದ್ರೆ, ರೋಗಿಗಳ ಪ್ರಾಣ ಉಳಿಸಲು ಕೇವಲ ಅರ್ಧ ಗಂಟೆಯಲ್ಲೇ ಲಾರಿಯನ್ನು ನಗರದೊಳಗೆ ಕರೆತಂದ ಪೊಲೀಸರ ಸಾರ್ಥಕ ಸೇವೆ ಇದು..! ಶಿವಾಜಿನಗರದ ಆಸ್ಪತ್ರೆಗಳಲ್ಲಿ 45ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಜೀವ ಆಕ್ಸಿಜನ್‌ ವ್ಯವಸ್ಥೆ ಮೇಲೆ ಅವಲಂಬಿತವಾಗಿತ್ತು. ಅದಾಗಲೇ ಈ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿತ್ತು. ಕೆಲವೇ ಹೊತ್ತಿನಲ್ಲಿ ಆಕ್ಸಿಜನ್ ಸಂಗ್ರಹ ಮುಗಿದು ಹೋಗುವ ಹಂತದಲ್ಲಿತ್ತು. ಈ ವೇಳೆ, ಆಕ್ಸಿಜನ್‌ಗಾಗಿ ಸಾರಿಗೆ ಸೇವೆಯನ್ನು ಸಂಪರ್ಕಿಸಿದರೆ, ಆ ಲಾರಿಯು ಎಲೆಕ್ಟ್ರಾನಿಕ್ ಸಿಟಿಯ ಆಚೆ ಇತ್ತು..! ಎಲೆಕ್ಟ್ರಾನಿಕ್ ಸಿಟಿಯ ಆಚೆ ಇರುವ ಲಾರಿ ನಗರದೊಳಗೆ ಬರಲು ಎಷ್ಟು ಕಾಲ ಬೇಕಾಗುತ್ತೆ ಎಂದು ಲೆಕ್ಕ ಹಾಕಿದ ಆಸ್ಪತ್ರೆ ಸಿಬ್ಬಂದಿ ಕಂಗಾಲಾದರು. ಈ ವೇಳೆ ಅವರ ನೆರವಿಗೆ ಬಂದಿದ್ದು, ನಗರ ಪೊಲೀಸರು. ಮರ್ಸಿ ಮಿಷನ್‌ನ ಮೊಹಮ್ಮದ್ ಇಬ್ರಾಹಿಂ ಅಕ್ರಮ್ ಹಾಗೂ ಎಚ್‌ಬಿಎಸ್ ಆಸ್ಪತ್ರೆಯ ಅಯೂಬ್ ಖಾನ್ ಅವರು ನಗರ ಸಂಚಾರ ಆಯುಕ್ತರನ್ನು ಸಂಪರ್ಕಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡರು, ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸೋದಕ್ಕೆ ಆದೇಶ ನೀಡಿದರು. ಸಂಜೆ 4.15ರ ಸುಮಾರಿಗೆ ಕಂಟ್ರೋಲ್ ರೂಂ ಸಂಪರ್ಕಿಸಿದ ರವಿಕಾಂತೇ ಗೌಡರು, ಕೂಡಲೇ ಗ್ರೀನ್‌ ಕಾರಿಡಾರ್ ವ್ಯವಸ್ಥೆ ಕಲ್ಪಿಸುವಂತೆ ಲಾರಿ ಸಾಗುವ ಮಾರ್ಗದಲ್ಲಿದ್ದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿದರು. ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ದಾಟಿದ ಲಾರಿ ಫ್ಲೈ ಓವರ್ ದಾಟಿ ಮಡಿವಾಳಕ್ಕೆ ಬರುವ ಹೊತ್ತಿಗೆ ಮಡಿವಾಳ ಠಾಣಾ ಪೊಲೀಸರು ಸಜ್ಜಾಗಿದ್ದರು. ಅಲ್ಲಿಂದ ಶಿವಾಜಿನಗರದವರೆಗೆ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸೋದಕ್ಕೆ ಸಜ್ಜಾಗಿ ನಿಂತಿದ್ದರು. ಹೀಗಾಗಿ, ಯಾವುದೇ ಅಡೆತಡೆ ಇಲ್ಲದೆ ಕೇವಲ 31 ನಿಮಿಷಗಳಲ್ಲಿ ಲಾರಿಯು ಶಿವಾಜಿನಗರದ ಆಸ್ಪತ್ರೆಗಳನ್ನು ತಲುಪಿತ್ತು. ಇದೇ ರೀತಿಯ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಈ ಹಿಂದೆ ದಾಬಸ್‌ಪೇಟೆಯಿಂದ ಬೌರಿಂಗ್ ಆಸ್ಪತ್ರೆವರೆಗೂ ಕಲ್ಪಿಸಿದ್ದೆವು ಎಂದು ನೆನಪಿಸುತ್ತಾರೆ ರವಿಕಾಂತೇಗೌಡರು. ಪೊಲೀಸ್ ಇಲಾಖೆ ಬಲವಂತವಾಗಿ ಅಂಗಡಿ ಮುಚ್ಚಿಸುತ್ತಿದೆ, ಕರ್ಫ್ಯೂ ಹೇರುತ್ತಿದೆ, ಜನರಿಗೆ ನಿರ್ಬಂಧ ವಿಧಿಸುತ್ತಿದ್ದಾರೆ ಎಂದು ದೂರಬಹುದು. ಆದ್ರೆ, ಎಲ್ಲವೂ ಕೊರೊನಾ ನಿಯಂತ್ರಣಕ್ಕಾಗಿ. ಅದೇ ರೀತಿ ರೋಗಿಗಳ ಜೀವ ಉಳಿಸಲು ಪೊಲೀಸರು ಕೈಗೊಂಡ ಗ್ರೀನ್ ಕಾರಿಡಾರ್‌ನಿಂದ 45 ಅಮಾಯಕ ಜೀವಗಳು ಉಳಿದಿವೆ. ಒತ್ತಡದಲ್ಲೂ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಕಿ ಪಡೆಗೆ ರೋಗಿಗಳ ಸಂಬಂಧಿಕರು ಅಭಿನಂದನೆ ಸಲ್ಲಿಸಿದ್ದಾರೆ.