ಮಂಗಳೂರಿನಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ಜಾಲ: ಬೆಂಗಳೂರಿನಲ್ಲಿ ಅಡಗಿದ್ದ ನೈಜೀರಿಯಾ ಪ್ರಜೆಗಳ ಬಂಧನ

ವಿದ್ಯಾಭ್ಯಾಸ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಇವರು, ಬಳಿಕ ಬೆಂಗಳೂರಿನಲ್ಲಿ ಟಿ ಶರ್ಟ್‌ ರಫ್ತು ಮಾಡುವ ಉದ್ಯೋಗದ ನೆಪದಲ್ಲಿ ರಾಜ್ಯದ ನಾನಾ ಜಿಲ್ಲೆಯ ಜತೆ ಸಂಪರ್ಕವಿಟ್ಟು ಡ್ರಗ್ಸ್‌ ವ್ಯವಹಾರವನ್ನೂ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ಜಾಲ: ಬೆಂಗಳೂರಿನಲ್ಲಿ ಅಡಗಿದ್ದ ನೈಜೀರಿಯಾ ಪ್ರಜೆಗಳ ಬಂಧನ
Linkup
: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ರಾಜ್ಯದ ನಾನಾ ಕಡೆ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಂಗಳೂರಿನ ಬಿದರಹಳ್ಳಿಯಲ್ಲಿ ನೈಜೀರಿಯಾ ಮೂಲದ ಮತ್ತಿಬ್ಬರು ಆರೋಪಿಗಳನ್ನು ಜೂನ್ 28ರಂದು ಬಂಧಿಸಿದ್ದಾರೆ. ಈ ಮೂಲಕ ಸಿಂಥೆಟಿಕ್‌ ಡ್ರಗ್ಸ್‌ ಜಾಲದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಿದಂತಾಗಿದೆ. ನೈಜಿರೀಯಾ ಪ್ರಜೆಗಳಾದ ಪೌಲ್‌ ಒಹಮೋಬಿ ಯಾನೆ ಇಫೆಚುಕು ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಬಂಧಿತ ಆರೊಪಿಗಳು. ಇವರು ಬೆಂಗಳೂರನ್ನು ಕೇಂದ್ರವನ್ನಾಗಿಸಿ ನಾನಾ ಜಿಲ್ಲೆಗಳ ಜತೆ ವಹಿವಾಟು ನಡೆಸುವುದರ ಜತೆ ಮಂಗಳೂರು ಹಾಗೂ ಕೇರಳದ ನಾನಾ ಕಡೆಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದರು. ಮಂಗಳೂರು ನಗರದ ಕಮಿಷನರ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮಾತನಾಡಿ, ಬಂಧಿತ ನೈಜೀರಿಯಾ ಪ್ರಜೆಗಳು ವೀಸಾ ಅವಧಿ ಮುಗಿದ ಬಳಿಕವೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ವಿದ್ಯಾಭ್ಯಾಸ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಇವರು, ಬಳಿಕ ಬೆಂಗಳೂರಿನಲ್ಲಿ ಟಿ ಶರ್ಟ್‌ ರಫ್ತು ಮಾಡುವ ಉದ್ಯೋಗದ ನೆಪದಲ್ಲಿ ರಾಜ್ಯದ ನಾನಾ ಜಿಲ್ಲೆಯ ಜತೆ ಸಂಪರ್ಕವಿಟ್ಟು ಡ್ರಗ್ಸ್‌ ವ್ಯವಹಾರವನ್ನೂ ನಡೆಸುತ್ತಿದ್ದರೆಂದು ತಿಳಿದು ಬಂದಿದೆ. ಸಂಪೂರ್ಣ ವಿವರವನ್ನು ಮುಂದಿನ ತನಿಖೆಯಲ್ಲಿ ಕಲೆ ಹಾಕಲಾಗುವುದು ಎಂದರು. ಮಂಗಳೂರಿಗೆ ಸಿಂಥೆಟಿಕ್‌ ಡ್ರಗ್ಸ್‌ ಪೂರೈಕೆ ಜಾಡು ಹಿಡಿದು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ರಂಜಿತ್‌ ಬಂಡಾರು ನೇತೃತ್ವದಲ್ಲಿ ತನಿಖೆ ನಡೆಸಿದಾಗ ಆರಂಭದಲ್ಲಿ ಕೇರಳದಿಂದ ಸರಬರಾಜಾಗುತ್ತಿದೆ ಎಂಬ ಮಾಹಿತಿ ದೊರೆಯಿತು. ಬಳಿಕ ಬೆಂಗಳೂರಿನ ಲಿಂಕ್‌ ಸಿಕ್ಕಿದೆ. ಈ ಪ್ರಕರಣವನ್ನು ಮತ್ತಷ್ಟು ತೀವ್ರವಾಗಿ ತನಿಖೆ ನಡೆಸಿ ದಂಧೆಯ ವ್ಯಾಪ್ತಿಯನ್ನು ಪತ್ತೆ ಹಚ್ಚಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಕುಮಾರ್‌ ಬಂಡಾರು ಉಪಸ್ಥಿತರಿದ್ದರು. 9 ಆರೋಪಿಗಳ ಸೆರೆ: ಸಿಂಥೆಟಿಕ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಜೂನ್ 3ರಂದು ಪತ್ತೆಯಾದ ಪ್ರಕರಣದಲ್ಲಿ ಕೇರಳ ಮೂಲದ ಮೂವರನ್ನು ವಶಕ್ಕೆ ಪಡೆದು ಅವರಿಂದ 170 ಗ್ರಾಂ. ಎಂಡಿಎಂಎ ಹಾಗೂ ಜೂನ್ 13ರಂದು ಕೇರಳದ ಇನ್ನಿಬ್ಬರು ಆರೋಪಿಗಳನ್ನು 65 ಗ್ರಾಂ. ಎಂಡಿಎಂಎಯೊಂದಿಗೆ ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಪ್ರಕರಣದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಆರೋಪಿಗಳು ಈ ನಿಷೇಧಿತ ಮಾದಕ ದ್ರವ್ಯವನ್ನು ಬೆಂಗಳೂರಿನಿಂದ ಡೀಲರ್‌ಗಳಾದ ನೈಜಿರಿಯಾ ನಿವಾಸಿ ಸ್ಟ್ಯಾನ್ಲಿಚಿಮಾ ಮತ್ತು ಕೇರಳದ ಉಪ್ಪಳ ನಿವಾಸಿ ರಮೀಝ್‌ ಎಂಬಾತನಿಂದ ಪಡೆದುಕೊಂಡಿರುವುದಾಗಿ ತಿಳಿಸಿದ್ದರು. ಇದೀಗ ಮತ್ತೆ ಇಬ್ಬರು ನೈಜೀರಿಯಾ ಪ್ರಜೆಗಳ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.