ಬೆಂಗಳೂರಿನಲ್ಲಿ ಕೊರೊನಾರ್ಭಟ: ಇಸ್ಕಾನ್‌ ಟೆಂಪಲ್ ಬಳಿ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌

ರೆನೆಸಾನ್ಸ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು ಐದು ಬ್ಲಾಕ್‌ಗಳಿವೆ. ಈ ಪೈಕಿ 'ಎ' ಬ್ಲಾಕ್‌ನಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದು, 16 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಕೊರೊನಾರ್ಭಟ: ಇಸ್ಕಾನ್‌ ಟೆಂಪಲ್ ಬಳಿ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌
Linkup
: ಕೋವಿಡ್‌ ಮೂರನೇ ಅಲೆಯ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ, ಸೋಂಕಿತರು ವಾಸವಿರುವ ಮನೆಗಳನ್ನು ಸೀಲ್‌ಡೌನ್‌ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಮಹಾಲಕ್ಷ್ಮಿ ಲೇಔಟ್‌ ಬಳಿ ಇಡೀ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನೇ ಸೀಲ್‌ಡೌನ್‌ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಬಿಬಿಎಂಪಿಯು ಮೂರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬರುವ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್‌ ವಲಯಗಳೆಂದು ಗುರುತಿಸುತ್ತಿದೆ. ಸೋಂಕು ದೃಢಪಟ್ಟವರ ವಾಸ ಸ್ಥಳದಿಂದ ಸುತ್ತಲಿನ 100 ಮೀಟರ್‌ ಪರಿಧಿಯಲ್ಲಿರುವ ಮನೆಗಳ ಸಮೀಕ್ಷೆ ನಡೆಸಿ, ರೋಗ ಲಕ್ಷಣವುಳ್ಳವರನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಗರ್ಭಿಣಿಯರು, ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರು, 60 ವರ್ಷ ಮೇಲ್ಪಟ್ಟವರ ಆರೋಗ್ಯದ ಮೇಲೂ ನಿಗಾ ಇಡಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್‌ನ ಇಸ್ಕಾನ್‌ ಬಳಿಯ 'ರೆನೆಸಾನ್ಸ್‌ ಬೆಲ್ಸ್‌' ಅಪಾರ್ಟ್‌ಮೆಂಟ್‌ನ 'ಎ' ಬ್ಲಾಕ್‌ನಲ್ಲಿ 16 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 9 ಮಹಡಿಗಳನ್ನು ಹೊಂದಿರುವ ಈ ಬ್ಲಾಕ್‌ನಲ್ಲಿ 72 ಫ್ಲ್ಯಾಟ್‌ಗಳಿವೆ. ಈ 'ಎ' ಬ್ಲಾಕ್‌ ಅನ್ನು ಸೀಲ್‌ಡೌನ್‌ ಮಾಡಿ, ಭಿತ್ತಿಪತ್ರ ಅಂಟಿಸಲಾಗಿದೆ. 72 ಫ್ಲ್ಯಾಟ್‌ಗಳಲ್ಲಿರುವ ನಿವಾಸಿಗಳು ಹೊರಹೋಗದಂತೆ ಮತ್ತು ಆ ಫ್ಲ್ಯಾಟ್‌ಗಳಿಗೆ ಇತರರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ರೆನೆಸಾನ್ಸ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು ಐದು ಬ್ಲಾಕ್‌ಗಳಿವೆ. ಈ ಪೈಕಿ 'ಎ' ಬ್ಲಾಕ್‌ನಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದು, 16 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರಲ್ಲಿ ಒಂದು ಕುಟುಂಬ ಮಾತ್ರ ಧಾರವಾಡಕ್ಕೆ ಹೋಗಿ ಬಂದಿತ್ತು. ಉಳಿದವರಿಗೆ ಯಾವುದೇ ಪ್ರಯಾಣ ಇತಿಹಾಸವಿಲ್ಲ. 72 ಫ್ಲ್ಯಾಟ್‌ಗಳಲ್ಲಿ 300 ಮಂದಿ ವಾಸವಿದ್ದು, 16 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಆದಾಗ್ಯೂ ಸೋಂಕು ತಗಲಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅಪಾರ್ಟ್‌ಮೆಂಟ್‌ನಲ್ಲಿನ ಜಿಮ್‌, ಕ್ಲಬ್‌, ಈಜುಕೊಳ, ಆಟದ ಪ್ರದೇಶವನ್ನೂ ಸೀಲ್‌ಡೌನ್‌ ಮಾಡಲಾಗಿದೆ. ಪ್ರತಿ ಎರಡು ತಾಸಿಗೊಮ್ಮೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. 'ಎ' ಬ್ಲಾಕ್‌ನ 72 ಫ್ಲ್ಯಾಟ್‌ಗಳಲ್ಲಿರುವ ನಿವಾಸಿಗಳನ್ನೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೆಂದು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿದೆ. 10 ದಿನಗಳ ಕಾಲ ಹೊರಗೆ ಬರದಂತೆ ನಿರ್ಬಂಧ ಹೇರಲಾಗಿದೆ. ಇವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಇಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೇ ಪೂರೈಸಲಿದ್ದಾರೆ ಎಂದು ಹೇಳಿದರು. ಸೋಂಕಿತರು ವಾಸವಿದ್ದ ಬ್ಲಾಕ್‌ ಅನ್ನು ಸೀಲ್‌ಡೌನ್‌ ಮಾಡಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಅವರ ಮನವೊಲಿಸಿ, ಸೋಂಕು ಹರಡುವುದನ್ನು ತಡೆಯಲು ಸೀಲ್‌ಡೌನ್‌ ಮಾಡಲಾಯಿತು. 7 ದಿನಗಳ ಬಳಿಕ ಈ ಬ್ಲಾಕ್‌ನಲ್ಲಿನ ಎಲ್ಲ ನಿವಾಸಿಗಳಿಗೂ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ಮಾಡಲಾಗುವುದು. ಉಳಿದ ಐದು ಬ್ಲಾಕ್‌ಗಳಲ್ಲಿನ ನಿವಾಸಿಗಳನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ತಿಳಿಸಿದರು. ಕಂಟೈನ್ಮೆಂಟ್‌ ವಲಯಗಳ ಏರಿಕೆ: ಬಿಬಿಎಂಪಿಯ ಎಲ್ಲ ವಲಯಗಳಲ್ಲೂ ಸೋಂಕಿತರ ಮನೆಗಳನ್ನು ಸೀಲ್‌ಡೌನ್‌ ಮಾಡಲು ಕ್ರಮ ವಹಿಸಲಾಗಿದೆ. ಹೀಗಾಗಿಯೇ, ಮೈಕ್ರೋ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 28 ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ. ಸದ್ಯ ನಗರದಲ್ಲಿ 136 ಕಂಟೈನ್ಮೆಂಟ್‌ ವಲಯಗಳು ಸಕ್ರಿಯವಾಗಿವೆ. ನಗರದಲ್ಲಿ ಮರಣ ದರ ಏರಿಕೆ: ಸಿಲಿಕಾನ್‌ ಸಿಟಿಯಲ್ಲಿನಿತ್ಯ 400-500 ಪ್ರಕರಣಗಳು ವರದಿಯಾಗುತ್ತಿವೆ. ಈ ಸಂಖ್ಯೆ ತಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ಸದ್ಯ ಸೋಂಕು ಪತ್ತೆ ಪ್ರಮಾಣವು ಶೇ 0.67ರಷ್ಟಿದೆ. ಆದರೆ, ಮರಣ ಪ್ರಮಾಣವು ಏರಿಕೆಯಾಗುತ್ತಲೇ ಇದ್ದು, ಶೇ 1.57ರಷ್ಟಿದೆ.