ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು
ಬೆಂಗಳೂರು: ಮಹಾನಗರವನ್ನು ತೀವ್ರವಾಗಿ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿರುವ , ಈಗ ಇಂದೋರ್ ಮಾದರಿಯಲ್ಲಿ ವಿಲೇವಾರಿ ಮಾಡುವ ಮಂತ್ರ ಜಪಿಸುತ್ತಿದೆ. ಹೀಗಾಗಿಯೇ, ಮನೆ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಒಟ್ಟೊಟ್ಟಿಗೆ ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದೆ.
ವರ್ಷದ ಹಿಂದೆಯಷ್ಟೇ ಮನೆ ಮನೆಯಿಂದ ಕೇವಲ ಹಸಿ ತ್ಯಾಜ್ಯ ಮಾತ್ರ ಸಂಗ್ರಹಿಸಿ ವಿಲೇವಾರಿ ಮಾಡಲು ವಾರ್ಡ್‌ವಾರು ಟೆಂಡರ್ ಕರೆದು ಜಾರಿಗೊಳಿಸಿದ್ದ ಗುತ್ತಿಗೆ ಪದ್ಧತಿ ಕೈಬಿಡಲು ನಿರ್ಧರಿಸಲಾಗಿದೆ. ಇದರ ಬದಲಿಗೆ ಹಸಿ ಮತ್ತು ಒಣ ಕಸ ಸಂಗ್ರಹವನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸಲು ಹೊಸದಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಸಿ ಮತ್ತು ಒಣ ಕಸವನ್ನು ಒಟ್ಟೊಟ್ಟಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟರೆ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಬೇಕೆಂಬ ಆಶಯ ಈಡೇರದು ಎಂಬ ಕಾರಣಕ್ಕೆ ಹಸಿ ಕಸವನ್ನು ಮಾತ್ರ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದರೆ, ಇದರಿಂದ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿದರೂ, ವಿಂಗಡಣೆ ಪ್ರಮಾಣವು ಏರಿಕೆಯಾಗಿಲ್ಲ. ಹಾಗಾಗಿಯೇ, ಈ ಹಿಂದಿನ ಗುತ್ತಿಗೆ ರದ್ದುಪಡಿಸಲು ನಿರ್ಧರಿಸಲಾಗಿದೆ. ಹಸಿ ಮತ್ತು ಒಣ ತ್ಯಾಜ್ಯವನ್ನು ಒಟ್ಟಿಗೆ ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಹೊಸದಾಗಿ ಟೆಂಡರ್ ಕರೆಯಲು ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಲಾಗಿದೆ.
ಶೇ.40 ದಾಟದ ವಿಂಗಡಣೆ ಪ್ರಮಾಣ
ಕಸದ ವೈಜ್ಞಾನಿಕ ವಿಲೇವಾರಿಗೆ ತಳಮಟ್ಟದಲ್ಲೇ ಯೋಜನೆ ರೂಪಿಸಿದರೂ ಅದರ ಅನುಷ್ಠಾನ ಕುಂಠಿತವಾಗುತ್ತಿದೆ. ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆಯಾಗುತ್ತಿಲ್ಲ. ವಿಂಗಡಣೆ ಕಡ್ಡಾಯಗೊಳಿಸಿದ ಆರಂಭದಲ್ಲಿ ಶೇ.55ಕ್ಕೆ ತಲುಪಿತ್ತು. ಆನಂತರ ಹಳಿ ತಪ್ಪಿದೆ. ಸದ್ಯ ಸರಾಸರಿ ಶೇ.40ರಷ್ಟು ಮಾತ್ರ ಇದೆ. ಪರಿಣಾಮ, ಪಾಲಿಕೆಯು ಮಿಶ್ರ ತ್ಯಾಜ್ಯ ವಿಲೇವಾರಿಗೆ ಭೂಭರ್ತಿ ಘಟಕಗಳನ್ನೇ ಅವಲಂಬಿಸುವಂತಾಗಿದೆ.
ಕಸ ವಿಲೇವಾರಿಗೆ ವಾರ್ಡ್‌ವಾರು ಟೆಂಡರ್ ಕರೆದರೂ ಅದರ ಅನುಷ್ಠಾನಕ್ಕೆ ಎರಡೂವರೆ ವರ್ಷ ಬೇಕಾಯಿತು. 2019ರ ಮೇ ತಿಂಗಳಿನಲ್ಲಿ 168 ವಾರ್ಡ್‌ಗಳಿಗೆ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ 558 ಗುತ್ತಿಗೆದಾರರು ಭಾಗವಹಿಸಿದ್ದರು. ಆದರೆ, ಅಂತಿಮವಾಗಿ 94 ವಾರ್ಡ್‌ಗಳಲ್ಲಿ ಮಾತ್ರ ಹಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಗುತ್ತಿಗೆದಾರರು ಮುಂದೆ ಬಂದರು. ಉಳಿದ ವಾರ್ಡ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ಜಾರಿಗೆ ಬರಲೇ ಇಲ್ಲ.
ಕಸ ವಿಲೇವಾರಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪಾಲಿಕೆಯು ಸ್ವಚ್ಛತೆ ಆಧಾರದಲ್ಲಿ ವಾರ್ಡ್‌ವಾರು ಗುತ್ತಿಗೆದಾರರಿಗೆ ರ್ಯಾಂಕಿಂಗ್ ನೀಡಲು ಶುರು ಮಾಡಿತು. ಯಾವುದಾದರೂ ಗುತ್ತಿಗೆ ಸಂಸ್ಥೆಯು ಸತತವಾಗಿ 3-4 ಸಲ ಕಳಪೆ ಶ್ರೇಣಿ ಪಡೆದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ಇಷ್ಟಾದರೂ ಕಸ ವಿಂಗಡಣೆ ಪ್ರಮಾಣದಲ್ಲಿ ಏರಿಕೆಯಾಗಲೇ ಇಲ್ಲ. ಕಸದ ಸಮಸ್ಯೆ ಸರಿದಾರಿಗೆ ಬರಲೇ ಇಲ್ಲ.
''ಪ್ರಸ್ತುತ ಟೆಂಡರ್ ವ್ಯವಸ್ಥೆಯಲ್ಲಿ ನಿತ್ಯ ಮನೆ ಮನೆಯಿಂದ ಹಸಿ ಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಒಣ ತ್ಯಾಜ್ಯವನ್ನು ವಾರದಲ್ಲಿ ಎರಡು ದಿನ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಬಹುತೇಕ ನಿವಾಸಿಗಳು ಮೂರು ದಿನಗಳ ಕಾಲ ಒಣ ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿಲ್ಲ. ಬದಲಿಗೆ ರಸ್ತೆ ಬದಿ, ಖಾಲಿ ನಿವೇಶನ, ಚರಂಡಿಗಳಲ್ಲಿ ಬಿಸಾಡುತ್ತಿದ್ದಾರೆ. ಹಾಗಾಗಿಯೇ, ಇಂದೋರ್ ಮಾದರಿಯಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹದ ಟೆಂಡರ್ ಅನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಲು ನಿರ್ಧರಿಸಲಾಗಿದೆ,'' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನಿತ್ಯ 1162 ಟನ್ ಹಸಿ ಕಸ ಸಂಸ್ಕರಣೆ
''ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಹಸಿ ಸಂಗ್ರಹಿಸಿ ವಿಲೇವಾರಿ ಮಾಡುವ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಸಂಸ್ಥೆಗಳ ಕಾರ್ಯಕ್ಷಮತೆ ಆಧರಿಸಿ 2 ವರ್ಷ ವಿಸ್ತರಿಸುವ ಷರತ್ತು ವಿಧಿಸಲಾಗಿತ್ತು. ಆದರೆ, ಕಸ ವಿಂಗಡಣೆಯಲ್ಲಿ ನಿರೀಕ್ಷಿತ ಯಶಸ್ಸು ದೊರಕದ ಕಾರಣ, ಹಸಿ ಕಸವನ್ನಷ್ಟೇ ಸಂಗ್ರಹಿಸುವ ಗುತ್ತಿಗೆಯನ್ನು ರದ್ದುಪಡಿಸಲಾಗುತ್ತಿದೆ. ಹೊಸದಾಗಿ ಟೆಂಡರ್ ಕರೆಯಲು ತಯಾರಿ ಮಾಡಿಕೊಳ್ಳಲಾಗಿದೆ,'' ಎಂದು ಹೇಳಿದರು.
ನಗರದಲ್ಲಿ ನಿತ್ಯ ಅಂದಾಜು 5 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಸಂಸ್ಕರಣಾ ಘಟಕಗಳಿಗೆ ಸಾಗಣೆಯಾಗುತ್ತಿರುವುದು ಕೇವಲ 1162 ಟನ್ ಮಾತ್ರ. ಪಾಲಿಕೆಯ 7 ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ ಕೇವಲ 4 ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಪ್ರತಿದಿನ 2750 ಟನ್ ಮಿಶ್ರ ಕಸವನ್ನು ಮಿಟಗಾನಹಳ್ಳಿ ಭೂಭರ್ತಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಘಟಕವೂ ಸಂಪೂರ್ಣವಾಗಿ ಭರ್ತಿಯಾಗಿದೆ. ಸಮೀಪದ ಬಾಗಲೂರು ಕಲ್ಲುಕ್ವಾರಿಯಲ್ಲಿ ಕಸ ಹಾಕಲು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳ ವಿವರ
ಘಟಕ- ಘಟಕದ ಸಾಮರ್ಥ್ಯ(ಟನ್‌ಗಳಲ್ಲಿ) -ಸ್ವೀಕರಿಸುತ್ತಿರುವ ಪ್ರಮಾಣ
- ಕನ್ನಹಳ್ಳಿ -350- 104
- ಸೀಗೇಹಳ್ಳಿ- 120- ಸ್ಥಗಿತ
- ಲಿಂಗಧೀರನಹಳ್ಳಿ- 150 -ಎನ್‌ಜಿಟಿ ಆದೇಶದಿಂದ ಸ್ಥಗಿತ
- ದೊಡ್ಡಬಿದರಕಲ್ಲು- 150 -51
- ಸುಬ್ಬರಾಯನಪಾಳ್ಯ- 150 -ಸ್ಥಗಿತ
- ಚಿಕ್ಕನಾಗಮಂಗಲ -300- 291
- ಕೆಸಿಡಿಸಿ- 350- 141
- ಎಂಎಸ್‌ಜಿಪಿ(ಖಾಸಗಿ) -500 -575
- ಒಟ್ಟು -2070- 1162